ಕಲಬುರ್ಗಿ: ‘ವಿದ್ಯಾವಂತ ದಲಿತರು ಗ್ರಾಮಗಳಿಗೆ ಹೋಗಬೇಕು. ಆಗ ದಲಿತರ ನಿಜವಾದ ಪರಿಸ್ಥಿತಿ ಅರ್ಥವಾಗುತ್ತದೆ’ ಎಂದು ಮುಂಡರಗಿ ಹಾಗೂ ನಿಷ್ಕಲ ಮಂಟಪ ಬೈಲೂರ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಸರ್ವ ಜನರ ಸಂವಿಧಾನ ಸಮಾವೇಶ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ಗ್ರಾಮದಲ್ಲಿಯೂ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಅಂಬೇಡ್ಕರ್ ನೀಡಿದ ಮೀಸಲಾತಿಯಿಂದ ಉದ್ಯೋಗ ಪಡೆದ ದಲಿತ ಸಮುದಾಯದವರು ಮತ್ತೆ ದಲಿತರ ಕೇರಿಗಳಿಗೆ ಹೋಗಲಿಲ್ಲ. ಹೀಗಾಗಿ ಅಂಬೇಡ್ಕರ್ ಅವರ ಆಶಯಗಳು ಈಡೇರಲಿಲ್ಲ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿಯಿಂದ ಯುವಕರಿಗೆ ಶಿಬಿರಗಳನ್ನು ಏರ್ಪಡಿಸುವ ಮೂಲಕ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ತಿಳಿಸಬೇಕು ಎಂದು ಸಲಹೆ ನೀಡಿದರು.
ವಿಭಜನೆಗೊಂಡಿರುವ ದಲಿತ ಸಂಘಟನೆಗಳನ್ನು ಒಗ್ಗೂಡಿಸಬೇಕು. ದ್ರಾವಿಡ ಸಂಸ್ಕೃತಿಯ ದಲಿತ ಶಕ್ತಿಗಳು ಒಂದಾಗಿ ಹೋರಾಟ ನಡೆಸಿದರೆ ಯಾರಿಂದಲೂ ಅವರನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಅಂಬೇಡ್ಕರ್, ಬಸವಣ್ಣ, ಬುದ್ಧನ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಆದರೆ, ಅನುಯಾಯಿಗಳ ಕೊರತೆ ಇದೆ. ಮಹಾತ್ಮರ ಆಶಯಗಳು ಈಡೇರಿದರೆ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು.
ದೇವರು, ಧರ್ಮದ ಹೆಸರಿನಲ್ಲಿ ದಲಿತರ ಶಕ್ತಿ ಕುಂದಿಸುವ ಹುನ್ನಾರ ನಡೆಯುತ್ತಿದೆ. ಗಣಪತಿ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ನೀಡುವುದಿಲ್ಲ. ಆದರೆ, ಅದೇ ಜನ ಓಣಿಗಳಲ್ಲಿ ಗಣಪತಿಯನ್ನು ವಿಜೃಂಭಣೆಯಿಂದ ಪ್ರತಿಷ್ಠಾಪಿಸುತ್ತಾರೆ. ಶೋಷಿತರಿಗೆ ಜಾತಿ, ಧರ್ಮಕ್ಕಿಂತ ಅಂಬೇಡ್ಕರ್ ಮುಖ್ಯವಾಗಬೇಕು ಎಂದರು.
ದಲಿತರು ಬೇರೆಯವರೊಂದಿಗೆ ಘರ್ಷಣೆ ಮಾಡಬಾರದು. ಆದರೆ, ಆತ್ಮಾವಲೋಕನ ಮಾಡಿಕೊಳ್ಳಬೇಕು. ಮೂಢನಂಬಿಕೆ, ಅಂಧಾನುಕರಣೆ, ವೈದಿಕ ಸಂಪ್ರದಾಯದಿಂದ ಹೊರಬರಬೇಕು. ಶಿಕ್ಷಣ ಪಡೆದು ಸ್ವತಂತ್ರವಾಗಿ ಚಿಂತನೆ ನಡೆಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಮಿತಿಯ ರಾಜ್ಯ ಘಟಕದ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಸಂವಿಧಾನದಿಂದಾಗಿ ದೇಶಕ್ಕೆ ವಿಶ್ವ ಮಾನ್ಯತೆ ಸಿಕ್ಕಿದೆ. ಒಂದೇ ಧರ್ಮ, ಭಾಷೆ ನಮ್ಮ ಸಂಸ್ಕೃತಿಯಲ್ಲ. ಬಹುತ್ವದ ಭಾರತವನ್ನು ಸಂವಿಧಾನ ಪ್ರತಿಪಾದಿಸುತ್ತದೆ. ಅದರ ಕುರಿತು ಅರಿವು ಮೂಡಿಸಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
‘ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ್ ಅವರನ್ನು ಹೊಗಳುತ್ತಾರೆ. ಆದರೆ, ಸಂವಿಧಾನದ ಪ್ರತಿಯನ್ನು ಸುಟ್ಟಾಗ ಅದರ ಬಗ್ಗೆ
ತುಟಿ ಬಿಚ್ಚುವುದಿಲ್ಲ. ಇಂತಹ ದ್ವಿಮುಖ ನೀತಿಯನ್ನು ಬಿಡಬೇಕು’ ಎಂದರು.
ಸೆಪ್ಟೆಂಬರ್ 24ರಂದು ಸಮಾವೇಶ ಆರಂಭವಾಗಿದ್ದು, ಈಗಾಗಲೇ ಏಳು ಜಿಲ್ಲೆಗಳಲ್ಲಿ ಸಮಾವೇಶ ನಡೆದಿದೆ. ನವೆಂಬರ್ 26ರಂದು ಬೀದರ್‌ನಲ್ಲಿ ಸಮಾರೋಪಗೊಳ್ಳಲಿದೆ ಎಂದು ತಿಳಿಸಿದರು.
ಸಮಿತಿಯ ಸದಸ್ಯ ರಮೇಶ ಡಾಕುಳಗಿ ಆಶಯ ಭಾಷಣ ಮಾಡಿದರು. ಸಿದ್ಧಾರ್ಥ ಬುದ್ಧ ವಿಹಾರದ ಸಂಘಾನಂದ ಭಂತೇಜಿ, ಸಮಿತಿಯ ಉಪಪ್ರಧಾನಸಂಚಾಲಕ ನಾಗಣ್ಣ ಬಡಿಗೇರ, ಜಿಲ್ಲಾ ಪ್ರಧಾನ ಸಂಚಾಲಕ ದೇವಿಂದ್ರ ಉಪಳಾಂವ್‌ಕರ್, ಉಪನ್ಯಾಸಕ ಡಾ.ಐ.ಎಸ್.ವಿದ್ಯಾಸಾಗರ, ಶರಣ ಮಾರ್ಗದ ಸಂಪದಾಕ ಶವರಂಜನ ಸತ್ಯಂಪೇಟೆ, ನಾಗರತ್ನ ದೇಶಮಾನೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.