ADVERTISEMENT

ತೊಗರಿಬೇಳೆ, ಅಕ್ಕಿ ಟೆಂಡರ್‌ ಷರತ್ತಿನ ಮಿತಿ ₹5 ಕೋಟಿಗೆ ಇಳಿಸಿ

ದಾಲ್‌ಮಿಲ್ಲರ್ಸ್‌, ಎಚ್‌ಕೆಸಿಸಿಐ, ಸಣ್ಣ ಕೈಗಾರಿಕೆ ಸಂಘದ ಮುಖಂಡರ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 4:31 IST
Last Updated 10 ಆಗಸ್ಟ್ 2020, 4:31 IST
ಅಮರನಾಥ ಪಾಟೀಲ
ಅಮರನಾಥ ಪಾಟೀಲ   

ಕಲಬುರ್ಗಿ: ‘ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಖರೀದಿಸುವ ತೊಗರಿಬೇಳೆ ಮತ್ತು ಅಕ್ಕಿ ಟೆಂಡರ್‌ನಲ್ಲಿ ಪಾಲ್ಗೊಳ್ಳಲು ಟೆಂಡರ್‌ದಾರರ ವಾರ್ಷಿಕ ವಹಿವಾಟು ₹25 ಕೋಟಿ ಇರಬೇಕು ಎಂಬ ನಿಯಮ ಮಾಡಿದೆ. ದಾಲ್‌ಮಿಲ್‌ನಂಥ ಸಣ್ಣ ಉದ್ಯಮಿಗಳಿಗೆ ಇದು ನಿಲುಕದ ನಕ್ಷತ್ರ. ಕಾರಣ ವಹಿವಾಟಿನ ಗರಿಷ್ಠ ಮಿತಿಯನ್ನು₹5 ಕೋಟಿಗೆ ಇಳಿಸಬೇಕು’ ಎಂದು ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ಆಗ್ರಹಿಸಿದರು.

‘ನಿಗಮವು ಮಧ್ಯಾಹ್ನದ ಬಿಸಿಯೂಟಕ್ಕಾಗಿ ಬೇಳೆ–ಕಾಳುಗಳನ್ನು ಟೆಂಡರ್‌ ಮೂಲಕ ಖರೀದಿಸುತ್ತದೆ. ಈ ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಉತ್ಪಾದಕರ ವಾರ್ಷಿಕ ವಹಿವಾಟು ₹ 2 ಕೋಟಿ ಇರಬೇಕು ಎಂಬ ನಿಯಮ ಈ ಹಿಂದೆ ಇತ್ತು. ಅದೇ ರೀತಿ ಆ. 7ರಂದು ಹೊರಡಿಸಿದ ಆದೇಶದಲ್ಲೂ ₹ 2 ಕೋಟಿ ಮಿತಿ ಎಂದು ಹೇಳಲಾಗಿದೆ. ಆದರೆ, ಮರುದಿನವೇ ಅಂದರೆ ಆ. 8ರಂದು ಏಕಾಏಕಿ ₹ 25 ಕೋಟಿಗೆ ಏರಿಸಲಾಗಿದೆ. ಇದು ಖಂಡನಾರ್ಹ’ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಆರ್ಥಿಕವಾಗಿ ಹಿಂದುಳಿದ ಈ ಭಾಗದಲ್ಲಿ ಸಣ್ಣ ಕೈಗಾರಿಕೆಗಳೇ ಜೀವಾಳ ಆಗಿವೆ. ಈ ಭಾಗದಲ್ಲಿ ಸಣ್ಣಪುಟ್ಟ 300ಕ್ಕೂ ಹೆಚ್ಚು ದಾಲ್‌ಮಿಲ್‌ಗಳಿವೆ. ಸರ್ಕಾರದ ಹೊಸ ಟೆಂಡರ್‌ ಷರತ್ತಿನ ಪ್ರಕಾರ, ಶೇ 99ರಷ್ಟು ಮಿಲ್‌ನವರು ಪಾಲ್ಗೊಳ್ಳಲು ಆಗುವುದೇ ಇಲ್ಲ. ಬೃಹತ್‌ ಉದ್ಯಮ ಹೊಂದಿರುವ ಒಬ್ಬರ ಕೈಯಲ್ಲೇ ಇದನ್ನು ಕೊಡಬೇಕು ಎಂಬ ಉದ್ದೇಶದಿಂದ ನಿಯಮ ಮಾಡಿದಂತಿದೆ. ಇದರಿಂದ ಸಣ್ಣ ಕೈಗಾರಿಕೆಗಳ ಮಾಲೀಕರು ಹಾನಿ ಅನುಭವಿಸುತ್ತಾರೆ’ ಎಂದೂ ಅವರು
ಹೇಳಿದರು.‌

ADVERTISEMENT

ಸ್ಟ್ಯಾಂಪ್‌ ಡ್ಯುಟಿ ಕಡಿತ ಮಾಡಿ: ‘ಹತ್ತು ವರ್ಷದ ಹಿಂದೆ ‘ಕೆಐಡಿಬಿ’ಯಿಂದ ಜಮೀನು ಖರೀದಿಸಿ ಅಭಿವೃದ್ಧಿ ಮಾಡಿ ಸಣ್ಣ ಕೈಗಾರಿಕೆಗಳಿಗೆ ನೀಡಲಾಗಿದೆ. ಆಗ ಲೀಸ್‌ ಕಂ ಸೇಲ್‌ ಆಧಾರದ ಮೇಲೆ ಹತ್ತು ವರ್ಷಗಳ ಅವಧಿಗೆ ನೀಡಿದ್ದರು. ಅಲ್ಲಿ ದಾಲ್‌ಮಿಲ್‌ಗಳನ್ನು ತೆರೆದಿದ್ದಾರೆ. ಈಗ ಅವಧಿ ಮುಗಿದಿದೆ. ಕಾರಣ, ಬ್ಯಾಂಕ್‌ನವರು ಸಾಲ ನವೀಕರಣಕ್ಕೆ ಈ ಜಮೀನಿಗೆ ಸೇಲ್‌ ಡೀಡ್‌ (ಮಾರಾಟ ಪತ್ರ) ಕೇಳುತ್ತಿದ್ದಾರೆ. ಸದ್ಯ ಇದರ ದರವು ಹಿಂದಿಗಿಂತ 400 ‍ಪಟ್ಟು ಹೆಚ್ಚಾಗಿದೆ. ಇದು ಸಣ್ಣ ಕೈಗಾರಿಕೋದ್ಯಮಿಗಳ ಕೈಗೆ ನಿಲುಕುವುದಿಲ್ಲ’ ಎಂದು ಅಮರನಾಥ ಪಾಟೀಲ ತಿಳಿಸಿದರು.

‘ಈ ಬಗ್ಗೆ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ಅವರಿಗೆ ಮನವಿ ಮಾಡಿದ್ದೇವೆ. ಹಳೆಯ ದರವನ್ನೇ ಪರಿಗಣಿಸುವಂತೆ ಮನವಿ ಮಾಡಿದ್ದೇವೆ. ಇದು ಪೆಂಡಿಂಗ್‌ ಇದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದೂ ಆಗ್ರಹಿಸಿದರು.

ಅಸೋಸಿಯೇಷನ್‌ ಕಾರ್ಯದರ್ಶಿ ಶರಣಬಸಪ್ಪ ಎನ್‌. ಮಚ್ಚೆಟ್ಟಿ, ಚನ್ನಬಸಪ್ಪ ನಂದಿಕೋಲ, ಚಂದ್ರಶೇಖರ ತಳ್ಳಳ್ಳಿ, ಕಾಸಿಯಾ ಪ್ರತಿನಿಧಿ ಬೀಮಾಶಂಕರ ಬಿ. ಪಾಟೀಲ ಮಾತನಾಡಿದರು.

box-1

‘ಮಾಲಿನ್ಯ ಹರಡುವ ಕಾರ್ಖಾನೆ ಬಂದ್ ಮಾಡಿ’

ಕಲಬುರ್ಗಿ: ‘ಇಲ್ಲಿನ ನಂದಿಕೂರ ಬಳಿ ಇರುವ ಪೈಲೋರಿಸಿಸ್‌ ಟೈರ್‌ನಿಂದ ಎಣ್ಣೆ ತಯಾರಿಸುವ ಕಾರ್ಖಾನೆಯಿಂದ ಅಪಾರ ಪ್ರಮಾಣದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಈ ಕಾರ್ಖಾನೆ ಅನಧಿಕೃತವಾಗಿದ್ದು, ಸರ್ಕಾರ ಕೂಡಲೇ ಬಂದ್‌ ಮಾಡಿಸಬೇಕು’ ಎಂದು ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಕಾರ್ಖಾನೆಯಲ್ಲಿ ಹಳೆಯ ಟೈರ್‌ಗಳನ್ನು ಸುಟ್ಟು ಎಣ್ಣೆ ತಯಾರು ಮಾಡಲಾಗುತ್ತದೆ. ಇದರ ಚಿಮನಿಗಳು ಅಪಾರ ಪ್ರಮಾಣ ದಟ್ಟ–ಕಪ್ಪು ಹೊಗೆಯನ್ನು ನಿರಂತರ ಹೊರ ಉಗುಳುತ್ತವೆ. ಇದರಿಂದಾಗಿ ನಂದಿಕೂರ ಸುತ್ತಲಿನ ಪ್ರದೇಶ ಮಲಿನಗೊಂಡಿದೆ. ಅಲ್ಲಿನ ಹಸಿರು ಸಸಿ, ಗಿಡ, ಬೆಳೆಗಳು, ಮನೆಗಳ ಬಣ್ಣ ಎಲ್ಲವೂ ಕಪ್ಪಾಗುತ್ತಿವೆ. ಜನ ಹಾಗೂ ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ’ ಎಂದು ದೂರಿದರು.

’ಇಂಥ ಕಾರ್ಖಾನೆಗಳನ್ನು ನಿಷೇಧಿಸಲಾಗಿದ್ದು, ದೇಶದಲ್ಲಿ ಎಲ್ಲಿಯೂ ಇವುಗಳನ್ನು ತೆರೆಯಲು ಅನುಮತಿ ಇಲ್ಲ. ಆದರೆ, ಕಲಬುರ್ಗಿಯಲ್ಲಿ ಮಾತ್ರ ಹೇಗೆ ಇದಕ್ಕೆ ಪರವಾನಗಿ ನೀಡಿದ್ದಾರೆ ಎಂಬುದು ತಿಳಿಯದಾಗಿದೆ. ಈ ಬಗ್ಗೆ ತನಿಖೆ ಆಗಬೇಕು. ಕಾರ್ಖಾನೆ ಬಂದ್‌ ಮಾಡುವಂತೆ ಈ ಹಿಂದೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹಲವು ಬಾರಿ ಮನವಿ ಕೂಡ ಮಾಡಿದ್ದೇವೆ. ಯಾರೂ ಸ್ಪಂದಿಸುತ್ತಿಲ್ಲ. ಸರ್ಕಾರ ತಕ್ಷಣವೇ ಕ್ರಮ ಕೈಗೊಂಡು, ಜನರ ಆರೋಗ್ಯ ರಕ್ಷಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.