ADVERTISEMENT

ಕಲಬುರಗಿ | ದಾಸ ಸಾಹಿತ್ಯ ಜಾತಿಗೆ ಸೀಮಿತವಲ್ಲ: ಶ್ರೀನಿವಾಸ ಸಿರನೂರಕರ್‌

ಕಲಬುರಗಿ ವಿಭಾಗದ 3ನೇ ದಾಸ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 6:03 IST
Last Updated 19 ಅಕ್ಟೋಬರ್ 2025, 6:03 IST
ಕಲಬುರಗಿಯ ಕನ್ನಡ ಭವನದಲ್ಲಿ ನಡೆದ ಕಲಬುರಗಿ ವಿಭಾಗದ 3ನೇ ದಾಸ ಸಾಹಿತ್ಯ ಸಮ್ಮೇಳನವನ್ನು ಗುಲಬರ್ಗಾ ವಿವಿ ಕುಲಪತಿ ಶಶಿಕಾಂತ ಉಡಿಕೇರಿ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಶ್ರೀನಿವಾಸ ಸಿರನೂರಕರ್‌, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಇತರರು ಹಾಜರಿದ್ದರು
ಕಲಬುರಗಿಯ ಕನ್ನಡ ಭವನದಲ್ಲಿ ನಡೆದ ಕಲಬುರಗಿ ವಿಭಾಗದ 3ನೇ ದಾಸ ಸಾಹಿತ್ಯ ಸಮ್ಮೇಳನವನ್ನು ಗುಲಬರ್ಗಾ ವಿವಿ ಕುಲಪತಿ ಶಶಿಕಾಂತ ಉಡಿಕೇರಿ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಶ್ರೀನಿವಾಸ ಸಿರನೂರಕರ್‌, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಇತರರು ಹಾಜರಿದ್ದರು   

ಕಲಬುರಗಿ: ‘ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕನ್ನಡ ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ, ಇವೆರಡರ ನಡುವೆ ಸಾಮ್ಯತೆಗಳೂ ಇವೆ, ಕೆಲ ವ್ಯತ್ಯಾಸಗಳೂ ಇವೆ. ದಾಸ ಸಾಹಿತ್ಯವನ್ನು ಒಂದು ಜಾತಿಗೆ ಸೀಮಿತಗೊಳಿಸಲಾಗಿದೆ. ಇದು ಖಂಡನೀಯ’ ಎಂದು ಕಲಬುರಗಿ ವಿಭಾಗದ 3ನೇ ದಾಸ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ಪತ್ರಕರ್ತ ಶ್ರೀನಿವಾಸ ಸಿರನೂರಕರ್‌ ಹೇಳಿದರು.

ನಗರದ ಕನ್ನಡ ಭವನದಲ್ಲಿ ಮಾಜಿ ಸೈನಿಕ ದಿ. ಶರಣಬಸಪ್ಪ ಆರ್‌. ಓಗಿ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕಲಬುರಗಿ ದಕ್ಷಿಣ ವಲಯದಿಂದ ನಡೆದ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘15ನೇ ಶತಮಾನದಲ್ಲಿ ಶ್ರೀಪಾದರಾಯರಿಂದ ಆರಂಭವಾದ ಕನ್ನಡ ದಾಸ ಸಾಹಿತ್ಯ ಕೃಷಿ ಇಂದಿಗೂ ಮುಂದುವರಿದಿದೆ. ದಾಸ ಸಾಹಿತ್ಯ ಸಂಗೀತದ ಸಾಹಚರ್ಯದೊಂದಿಗೆ ಇನ್ನೂ ಸೃಷ್ಟಿಯಾಗುತ್ತಲೇ ಇರುವ ಅತ್ಯಪರೂಪದ ಸಾಹಿತ್ಯವಾಗಿದೆ. ವಚನ ಸಾಹಿತ್ಯ ಹರನ ಪಾರಮ್ಯ ಮೆರೆದರೆ, ದಾಸ ಸಾಹಿತ್ಯ ಹರಿ ಪಾರಮ್ಯಕ್ಕೆ ಬದ್ಧವಾಗಿದ್ದರೂ ಹರನನ್ನು ಬಿಟ್ಟು ಕೊಡಲಿಲ್ಲ. ಇವೆರಡೂ ಜನಸಾಮಾನ್ಯರಿಗೆ ಅರ್ಥವಾಗದ ಸಂಸ್ಕೃತದ ಪಾರಮ್ಯ ಮೆಟ್ಟಿ ನಿಂತು ಜನಸಾಮಾನ್ಯರ ಭಾಷೆ ಕನ್ನಡದಲ್ಲಿ ಸೃಷ್ಟಿಯಾದವು’ ಎಂದು ಅವರು ವಿವರಿಸಿದರು.

ಸಮ್ಮೇಳನ ಉದ್ಘಾಟಿಸಿ ಕಲಬುರಗಿಯೊಂದಿಗಿನ ತಮ್ಮ ನಂಟಿನ ಕುರಿತು ಮಾತನಾಡಿದ ಗುಲಬರ್ಗಾ ವಿವಿ ಕುಲಪತಿ ಶಶಿಕಾಂತ ಉಡಿಕೇರಿ, ‘ದಾಸ ಸಾಹಿತ್ಯ ಸಮಾಜದ ಧ್ವನಿ’ ಎಂದು ಹೇಳಿದರು.

ADVERTISEMENT

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ‘ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅವೆರಡೂ ಸಾಹಿತ್ಯ ದಾರಿದೀಪಗಳಾಗಿವೆ’ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ‘ನವೆಂಬರ್‌ ತಿಂಗಳಲ್ಲಿ ಸೂಫಿ ಸಾಹಿತ್ಯ ಸಮ್ಮೇಳನ ಮಾಡುತ್ತೇವೆ’ ಎಂದು ತಿಳಿಸಿದರು.

ಸ್ವಾಗತ ಸಮಿತಿ ಗೌರವಾಧ್ಯಕ್ಷ ಮಲ್ಲಣ್ಣ ಮಡಿವಾಳ ಮಾತನಾಡಿದರು. ಕಾರ್ಯಾಧ್ಯಕ್ಷ ಕೃಷ್ಣಾಜಿ ಕುಲಕರ್ಣಿ, ಕಸಾಪ ಕಲಬುರಗಿ ದಕ್ಷಿಣ ವಲಯದ ಅಧ್ಯಕ್ಷ ರವಿಕುಮಾರ ಶಹಾಪೂರಕರ್‌, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ಶೋಭಾ ಜಿ. ದೇಸಾಯಿ ಸೇರಿದಂತೆ ಹಲವು ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

ಸಾಂಸ್ಕೃತಿಕ ಮೆರವಣಿಗೆ: ನಗರದ ಮಿನಿ ವಿಧಾನಸೌಧದಿಂದ ಸರ್ದಾರ್ ವಲ್ಲಭಬಾಯಿ ಪಟೇಲ್‌ ವೃತ್ತದ ಮಾರ್ಗವಾಗಿ ಕನ್ನಡ ಭವನದವರೆಗೆ ಸಮ್ಮೇಳನಾಧ್ಯಕ್ಷರ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ಹಲವು ಮಕ್ಕಳು ದಾಸರ ವೇಷ ಧರಿಸಿ ಪಾಲ್ಗೊಂಡಿದ್ದರು.

‘ದಾಸ ಸಾಹಿತ್ಯ ವಿವಿ ಅಗತ್ಯವಿದೆ’

‘2026ರಲ್ಲಿ ವಚನ ಸಾಹಿತ್ಯ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಪ್ರಕಟಿಸಿದ್ದಾರೆ. ಅದರಂತೆ ದಾಸ ಸಾಹಿತ್ಯ ವಿಶ್ವವಿದ್ಯಾಲಯವನ್ನೂ ಸ್ಥಾಪಿಸುವ ಅಗತ್ಯವಿದೆ’ ಎಂದು ಶ್ರೀನಿವಾಸ ಸಿರನೂರಕರ್‌ ಹೇಳಿದರು.

‘ಕಲಬುರಗಿಯಲ್ಲಿ ದಾಸ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಪೀಠ ವಿಜಯಪುರ ಮಹಿಳಾ ವಿವಿಯಲ್ಲಿ ಮಹಿಳಾ ದಾಸ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಪೀಠ ಪಠ್ಯಕ್ರಮದಲ್ಲಿ ಅಳವಡಿಕೆ ಪ್ರತಿವರ್ಷ ದಾಸ ಸಾಹಿತ್ಯ ಸಮ್ಮೇಳನ ದಾಸ ಸಾಹಿತ್ಯ ದಿನ ಆಚರಣೆ ಮತ್ತು ಇತರ ಭಾಷೆ ಮುಖ್ಯವಾಗಿ ಇಂಗ್ಲಿಷ್‌ ಭಾಷೆಗೆ ಅನುವಾದ ಕಾರ್ಯ ನಡೆಯಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.