ADVERTISEMENT

ಕಲಬುರಗಿ | ನೀರು ಹಾಕುತ್ತಲೇ ಮನೆಗಳಿಗೆ ‘ಕನ್ನ’: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 6:34 IST
Last Updated 28 ನವೆಂಬರ್ 2025, 6:34 IST
ಮೂರು ಪ್ರಕರಣಗಳಲ್ಲಿ ಆರೋಪಿಯಿಂದ ವಶಕ್ಕೆ ಪಡೆದ ಚಿನ್ನಾಭರಣ–ನಗದನ್ನು ನಗರ ಪೊಲೀಸ್‌ ಕಮಿನಷರ್‌ ಶರಣಪ್ಪ ಎಸ್‌.ಡಿ. ವೀಕ್ಷಿಸಿದರು. ಎಸಿಪಿ ಶರಣಬಸಪ್ಪ ಸುಬೇದಾರ್‌, ಇನ್‌ಸ್ಪೆಕ್ಟರ್‌ ಅರುಣಕುಮಾರ ಇದ್ದರು
ಮೂರು ಪ್ರಕರಣಗಳಲ್ಲಿ ಆರೋಪಿಯಿಂದ ವಶಕ್ಕೆ ಪಡೆದ ಚಿನ್ನಾಭರಣ–ನಗದನ್ನು ನಗರ ಪೊಲೀಸ್‌ ಕಮಿನಷರ್‌ ಶರಣಪ್ಪ ಎಸ್‌.ಡಿ. ವೀಕ್ಷಿಸಿದರು. ಎಸಿಪಿ ಶರಣಬಸಪ್ಪ ಸುಬೇದಾರ್‌, ಇನ್‌ಸ್ಪೆಕ್ಟರ್‌ ಅರುಣಕುಮಾರ ಇದ್ದರು   

ಕಲಬುರಗಿ: ಜೂಜಾಟ ಹಾಗೂ ಕುಡಿತದ ಚಟಕ್ಕಾಗಿ ಹಗಲು ಹೊತ್ತಿನಲ್ಲೇ ಮನೆಗಳವು ಮಾಡುತ್ತಿದ್ದ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

‘ನಗರದ ಹೀರಾಪುರ ಪ್ರದೇಶದ ನಿವಾಸಿ ಚಾಂದಪಾಷಾ (25) ಬಂಧಿತ ಆರೋಪಿ’ ಎಂದು ನಗರ ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಲ್ಲಿ ಅಶೋಕನಗರ ಠಾಣೆ ವ್ಯಾಪ್ತಿಯ ಮೂರು ಮನೆಗಳಲ್ಲಿ ಹಗಲು ಹೊತ್ತಿನಲ್ಲೇ ಕಳವು ನಡೆದಿತ್ತು. ಒಟ್ಟು ₹15 ಲಕ್ಷ ಮೊತ್ತದ ಚಿನ್ನ–ಬೆಳ್ಳಿ ಆಭರಣಗಳು ಕಳುವಾಗಿದ್ದವು. ಆ ಪೈಕಿ ಬಂಧಿತ ಆರೋಪಿಯಿಂದ ₹8 ಲಕ್ಷ ಮೌಲ್ಯದ 83 ಗ್ರಾಂ ಚಿನ್ನಾಭರಣ, ₹50 ಸಾವಿರ ಮೌಲ್ಯದ 30 ಗ್ರಾಂ ಬೆಳ್ಳಿ ಆಭರಣ ಹಾಗೂ ₹10 ಸಾವಿರ ನಗದು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಆರೋಪಿ ಮೇಲೆ 2019ರಿಂದ 2022ರ ಅವಧಿಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದವು. ಎರಡ್ಮೂರು ವರ್ಷಗಳಿಂದ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಸೊಲ್ಲಾಪುರದಲ್ಲಿ ಜೂಜಾಟ, ಕುಡಿತದ ಚಟಕ್ಕೆ ಬಿದ್ದಿದ್ದ ಆರೋಪಿ ಮತ್ತೆ ಕಳ್ಳತನಕ್ಕೆ ಇಳಿದಿದ್ದ’ ಎಂದರು.

‘ಮನೆ–ಮನೆಗಳಿಗೆ ಶುದ್ಧ ನೀರಿನ ಕ್ಯಾನ್‌ ಪೂರೈಸುವ ಕೆಲಸ ಮಾಡುವ ಜೊತೆಗೆ ಕೀಲಿ ಹಾಕಿದ ಮನೆಗಳನ್ನು ಗುರುತಿಸಿ ಏಕಾಂಗಿಯಾಗಿ ಕಳವು ಮಾಡಿದ್ದ. ಅರ್ಧಗಂಟೆಯಲ್ಲೇ ಕೃತ್ಯ ಎಸಗಿ ಪರಾರಿಯಾಗುತ್ತಿದ್ದ. ಬಿದ್ದಾಪುರ ಕಾಲೊನಿಯಲ್ಲಿ ನ.23ರಂದು ನಡೆದ ಪ್ರಕರಣ ಮನೆಗಳವು ಪ್ರಕರಣದಲ್ಲಿ ಸಿಕ್ಕ ಬೆರಳಚ್ಚು ಸಾಕ್ಷ್ಯವು ಆರೋಪಿ ಬಂಧನಕ್ಕೆ ನೆರವಾಯಿತು. ಕದ್ದ ಒಡವೆ, ನಗದನ್ನು ಪಕ್ಕದ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಅಪರಿಚಿತರಿಗೆ ಮಾರಿ, ಜೂಜಾಟ, ಕುಡಿತಕ್ಕೆ ಬಳಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಮಾಹಿತಿ ನೀಡಿದರು.

‘ದಕ್ಷಿಣ ಉಪವಿಭಾಗದ ಎಸಿಪಿ ಶರಣಬಸಪ್ಪ ಸುಬೇದಾರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ ಅರುಣಕುಮಾರ, ಎಎಸ್‌ಐ ಶೈಲಜಾ, ಹೆಡ್‌ಕಾನ್‌ಸ್ಟೆಬಲ್‌ಗಳಾದ ವೈಜಿನಾಥ, ಮಲ್ಲಿಕಾರ್ಜುನ, ಶಿವಪ್ರಕಾಶ, ಕಾನ್‌ಸ್ಟೆಬಲ್‌ಗಳಾದ ನೀಲಕಂಠರಾಯ, ಚಂದ್ರಶೇಖರ, ಮುಜಾಹೀದ್‌ ಅವರ ತಂಡವು ಬೆರಳಚ್ಚು ಸೇರಿದಂತೆ ವೈಜ್ಞಾನಿಕವಾಗಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಸಿಪಿ ಶರಣಬಸಪ್ಪ ಸುಬೇದಾರ, ಇನ್‌ಸ್ಪೆಕ್ಟರ್‌ ಅರುಣಕುಮಾರ ಇದ್ದರು.

‘ನಾಗರಿಕರು ಸಂಯಮ ಕಾಯ್ದುಕೊಳ್ಳಿ’
‘ಸಾರ್ವಜನಿಕರು ಮನೆಗಳ್ಳತನ ಸೇರಿದಂತೆ ಯಾವುದೇ ಅಪರಾಧ ಪ್ರಕರಣಗಳು ನಡೆದಾಗ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಅದರಿಂದ ಸೀನ್‌ ಆಫ್ ಕ್ರೈಂ ಎಫ್‌ಎಸ್‌ಎಲ್‌ ಹಾಗೂ ಶ್ವಾನ ದಳ ತಂಡಗಳು ವೈಜ್ಞಾನಿಕವಾಗಿ ಸಾಕ್ಷ್ಯ ಕಲೆ ಹಾಕಲು ಸಾಧ್ಯವಾಗುತ್ತದೆ. ಕಳವು ನಡೆದಾಗ ಗಾಬರಿಯಾಗಿ ಅಲ್ಮೇರಾ ತಡಕಾಡುವುದು ಎಲ್ಲೆಡೆ ಓಡಾಡುವುದು ಸಂಬಂಧಿಕರು ನೆರೆಹೊರೆಯವರನ್ನು ಕೃತ್ಯ ನಡೆದ ಸ್ಥಳದಲ್ಲಿ ಬಿಟ್ಟುಕೊಳ್ಳುವುದರಿಂದ ತನಿಖೆಗೆ ತೊಂದರೆಯಾಗುತ್ತದೆ. ಹೀಗಾಗಿ ನಾಗರಿಕರು ಸಂಯಮ ಕಾಯ್ದುಕೊಂಡು ಪೊಲೀಸರಿಗೆ ವಿಷಯ ಮುಟ್ಟಿಸಬೇಕು’ ಎಂದು ಕಮಿಷನರ್‌ ಶರಣಪ್ಪ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.