ADVERTISEMENT

ಕಲಬುರ್ಗಿ: ಸುಸೂತ್ರ ಚುನಾವಣೆಗೆ ಸಿದ್ಧತೆ

ಐದು ವಾರ್ಡ್‌ಗಳಿಗೆ ಒಬ್ಬ ಚುನಾವಣಾಧಿಕಾರಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ, ತಿದ್ದುಪಡಿಗೆ ಆ 24ರವರೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 5:50 IST
Last Updated 13 ಆಗಸ್ಟ್ 2021, 5:50 IST
ಜ್ಯೋತ್ಸ್ನಾ
ಜ್ಯೋತ್ಸ್ನಾ   

ಕಲಬುರ್ಗಿ: ‘ಕೋವಿಡ್‌ ಮಧ್ಯೆಯೇ ಕಲಬುರ್ಗಿ ಮಹಾನಗರ ಪಾಲಿಕೆ ಚುನಾವಣೆ ಬಂದಿರುವುದರಿಂದ ಎಲ್ಲ ನಿಯಮಗಳನ್ನು ಪಾಲಿಸುವುದರ ಜೊತೆಗೆ ನಿಷ್ಪಕ್ಷಪಾತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ’ ಎಂದು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದರು.

‘ಮಹಾನಗರ ಪಾಲಿಕೆಯ 55 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದ್ದು, ಆಗಸ್ಟ್‌ 16ರಿಂದ ಅಧಿಸೂಚನೆ ಹೊರಡಿಸಲಾಗುವುದು. ಅಂದಿನಿಂದ ಸೆಪ್ಟೆಂಬರ್ 6ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಈ ವೇಳೆ ವಿವಿಧ ರಾಜಕೀಯ ಪಕ್ಷಗಳು ಹೆಚ್ಚು ಜನರನ್ನು ಸೇರಿಸಿ ಪ್ರಚಾರ ನಡೆಸದಂತೆ ಶೀಘ್ರ ಸಭೆ ನಡೆಸಿ ಮಾಹಿತಿ ನೀಡಲಾಗುವುದು’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮತದಾರರ ಪಟ್ಟಿ ಸಿದ್ಧವಿದ್ದರೂ ಇನ್ನೂ ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಲು, ಹೆಸರಿನಲ್ಲಿ ತಪ್ಪಾಗಿದ್ದರೆ ತಿದ್ದುಪಡಿ ಮಾಡಿಕೊಳ್ಳಲು ನಾಮಪತ್ರಗಳ ಪರಿಶೀಲಿಸುವ ದಿನಾಂಕವಾದ ಆ.24ರವರೆಗೂ ಅವಕಾಶವಿದೆ. ಹೊಸ ಮತದಾರರು ಈ ಅವಕಾಶ ಬಳಸಿಕೊಳ್ಳಬಹುದು. ಆ ನಂತರ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅವಕಾಶವಿರು ವುದಿಲ್ಲ’ ಎಂದು ಹೇಳಿದರು.

ADVERTISEMENT

ಐದು ವಾರ್ಡ್‌ಗಳಿಗೆ ಒಬ್ಬ ಚುನಾವಣಾಧಿಕಾರಿ: ‘ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 55 ವಾರ್ಡ್‌ಗಳಿದ್ದು, ಪ್ರತಿ 5 ವಾರ್ಡ್‌ಗಳಿಗೆ ಒಬ್ಬರಂತೆ 11 ಜನ ಚುನಾವಣಾಧಿಕಾರಿ (ಆರ್‌ಓ) ಮತ್ತು 11 ಸಹಾಯಕ ಚುನಾವಣಾಧಿಕಾರಿಗಳನ್ನು (ಎಆರ್‌ಓ) ನೇಮಕ ಮಾಡಲಾಗುವುದು’ ಎಂದರು.

‘ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸುವವರ ಮೇಲೆ ನಿಗಾ ಇಡಲು ಪ್ರತಿ 5 ವಾರ್ಡ್‌ಗಳಿಗೆ ಒಬ್ಬರಂತೆ 11 ಅಧಿಕಾರಿಗಳು, 11 ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಅಭ್ಯರ್ಥಿಗಳ ಚುನಾವಣಾ ಖರ್ಚುಗಳ ಬಗ್ಗೆ ಲೆಕ್ಕ ಇಡಲು 11 ಅಧಿಕಾರಿಗಳು ಮತ್ತು 11 ಸಹಾಯಕ ಅಧಿಕಾರಿಗಳು ಇರುತ್ತಾರೆ’ ಎಂದು ಜ್ಯೋತ್ಸ್ನಾ ತಿಳಿಸಿದರು.

ಅಭ್ಯರ್ಥಿಗಳ ಭಾವಚಿತ್ರ: ‘ರಾಜ್ಯ ಚುನಾವಣಾ ಆಯೋಗದ ಆದೇಶದ ಪ್ರಕಾರ, ಮತಪತ್ರದಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರ ಇರುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಯಾರೂ ಇಷ್ಟವಿಲ್ಲದಿದ್ದ ಪಕ್ಷದಲ್ಲಿ ನೋಟಾ ಮತಗಳನ್ನು ಚಲಾಯಿಸಲು ಮತದಾರರಿಗೆ ಅವಕಾಶ ನೀಡಲಾಗುತ್ತದೆ’ ಎಂದರು.

ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಡ್ಡೂರು ಶ್ರೀನಿವಾಸಲು ಇದ್ದರು.

‘ಕೋವಿಡ್‌ ನಿಯಮ ಪಾಲನೆ ಸವಾಲು’
‘ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿದ್ದರೂ ನಿಯಮಗಳನ್ನು ಪಾಲಿಸಬೇಕಿದೆ. ಹೀಗಾಗಿ, ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡುವ ವೇಳೆ ಅವರಿಗೆ ಕಡ್ಡಾಯವಾಗಿ ಅವರಿಗೆ ಮಾಸ್ಕ್ ಧರಿಸಲು, ಕೈಗಳನ್ನು ಸ್ಯಾನಿಟೈಸ್ ಮಾಡಲು ಸೂಚಿಸಲಾಗುವುದು’ ಎಂದು ವಿ.ವಿ. ಜ್ಯೋತ್ಸ್ನಾ ತಿಳಿಸಿದರು.

‘ಗ್ರಾಮ ಪಂಚಾಯಿತಿ ಚುನಾವಣೆ ಮಾದರಿಯನ್ನು ಪಾಲಿಕೆ ಚುನಾವಣೆಯಲ್ಲಿ ಅನುಸರಿಸಲಾಗುವುದು. ಪ್ರತಿ ಮತಗಟ್ಟೆ ಬಳಿ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಿ ಮತದಾರರು ಮಾಸ್ಕ್ ಹಾಕಿಕೊಂಡಿರುವ, ವೈಯಕ್ತಿಕ ಅಂತರ ಪಾಲನೆ ಕಾಯ್ದುಕೊಂಡಿರುವ ಬಗ್ಗೆ ನಿಗಾ ಇರಿಸಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.