ADVERTISEMENT

ಮತ್ತೆ ಕಾಂಗ್ರೆಸ್ ಮಡಿಲಿಗೆ ಡಿಸಿಸಿ ಬ್ಯಾಂಕ್

ಬ್ಯಾಂಕ್ ಮಾಜಿ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಪರಾಭವ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 16:05 IST
Last Updated 29 ನವೆಂಬರ್ 2020, 16:05 IST
ಕಲಬುರ್ಗಿಯಲ್ಲಿ ಭಾನುವಾರ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದರು
ಕಲಬುರ್ಗಿಯಲ್ಲಿ ಭಾನುವಾರ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದರು   

ಕಲಬುರ್ಗಿ: ಇಲ್ಲಿನ ಕಲಬುರ್ಗಿ–ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್‌ಗೆ ಭಾನುವಾರ ನಡೆದ ಮತದಾನದಲ್ಲಿ ಕಾಂಗ್ರೆಸ್‌ ಉಮೇದುವಾರರು ಹೆಚ್ಚು ಸೀಟುಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಹಿಡಿದಿದ್ದಾರೆ. ಗೆಲ್ಲುವ ಹಾದಿಯಲ್ಲಿದ್ದ ಬಿಜೆಪಿ ನಿರೀಕ್ಷಿತ ಸ್ಥಾನಗಳನ್ನು ಗಳಿಸಲು ಸಾಧ್ಯವಾಗಲಿಲ್ಲ.

ಚುನಾವಣೆಯಲ್ಲಿ ಒಟ್ಟಾರೆ 13 ನಿರ್ದೆಶಕ ಸ್ಥಾನಗಳಲ್ಲಿ ಕಾಂಗ್ರೆಸ್ 9 ಸ್ಥಾನಗಳಲ್ಲಿ ಗೆದ್ದರೆ, ಬಿಜೆಪಿ 4 ನಾಲ್ಕು ಸ್ಥಾನ ಪಡೆಯಿತು. ಮಾಜಿ ಅಧ್ಯಕ್ಷ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಸೋಲುಂಡರು.

7 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಭಾನುವಾರ 6 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅವಿರೋಧವಾಗಿ ಆಯ್ಕೆಯಾದ ಏಳು ಸದಸ್ಯರಲ್ಲಿ ಐವರು ಕಾಂಗ್ರೆಸ್ ಹಾಗೂ ಇಬ್ಬರು ಬಿಜೆಪಿಯವರಾಗಿದ್ದಾರೆ. ಚುನಾವಣೆ ನಡೆದ ಆರು ಸ್ಥಾನಗಳಲ್ಲಿ 4 ಕಾಂಗ್ರೆಸ್ ಗೆದ್ದರೆ ಬಿಜೆಪಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ADVERTISEMENT

13 ಸ್ಥಾನಗಳು ಹಾಗೂ ಇಬ್ಬರು ಸಹಕಾರಿ ಅಧಿಕಾರಿಗಳ ಜತೆಗೆ ಒಬ್ಬ ನಾಮನಿರ್ದೇಶಿತ ಸದಸ್ಯ ಸೇರಿ ಒಟ್ಟಾರೆ 16 ಸ್ಥಾನಗಳಾಗಲಿದ್ದು, ಬಹುಮತಕ್ಕೆ 9 ಸದಸ್ಯರು ಬೇಕು. ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದೆ.

ಅವಿರೋಧವಾಗಿ ಆಯ್ಕೆಯಾದವರು: ಕಲಬುರ್ಗಿ ತಾಲ್ಲೂಕಿನಿಂದ ಶರಣಬಸಪ್ಪ ಪಾಟೀಲ ಅಷ್ಠಗಾ, ಆಳಂದದಿಂದ ಅಶೋಕ ಸಾವಳೇಶ್ವರ, ಯಾದಗಿರಿ ತಾಲ್ಲೂಕಿನಿಂದ ಸಿದ್ರಾಮರೆಡ್ಡಿ ಮಲ್ಲಿಕಾರ್ಜುನರೆಡ್ಡಿ ಕೌಳೂರ, ಸೇಡಂ ತಾಲ್ಲೂಕಿನಿಂದ ಬಿ. ನಂದಕಿಶೋರರೆಡ್ಡಿ ಜನಾರ್ದನರೆಡ್ಡಿ, ಸುರಪುರ ತಾಲ್ಲೂಕಿನಿಂದ ಹಾಲಿ ನಿರ್ದೇಶಕ ಬಾ‍ಪುಗೌಡ ದುಂಡಪ್ಪಗೌಡ, ಅಫಜಲಪುರ ತಾಲ್ಲೂಕಿನಿಂದ ಮಹಾಂತಗೌಡ ಸಿದ್ದಣ್ಣಗೌಡ ಪಾಟೀಲ ಹಾಗೂ ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಸುರೇಶ ಸಜ್ಜನ ಅವಿರೋಧ ಆಯ್ಕೆಯಾಗಿದ್ದಾರೆ.

ಫಲಿತಾಂಶ ಘೋಷಣೆ ಮಾಡುತ್ತಲೇ ವಿಜೇತರು ತಮ್ಮ ಬೆಂಬಲಿಗರು ಮತ್ತು ಪಕ್ಷದ ಮುಖಂಡರ ಜತೆಗೂಡಿ ಪಟಾಕಿ ಸಿಡಿಸಿ, ಗುಲಾಲ್ ಎರಚಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಅಲ್ಲದೆ ಬಸವಣ್ಣ ಹಾಗೂ ಡಾ.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮುಂಜಾಗ್ರತಾ ಕ್ರಮವಾಗಿ ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

‘ಸ್ಪಷ್ಟ ಬಹುಮತ ಹೊಂದಿರುವುದರಿಂದ ಡಿಸಿಸಿ ಬ್ಯಾಂಕಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಬಿಜೆಪಿಯವರು ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಹಲವು ಕುತಂತ್ರ ನಡೆಸಿದರೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ’ ಎಂದುಕಲಬುರ್ಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠರಾವ ಮೂಲಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.