ADVERTISEMENT

ಕಲಬುರಗಿ–ಯಾದಗಿರಿ DCC ಬ್ಯಾಂಕ್‌ ಚುನಾವಣೆ: ಕಾಂಗ್ರೆಸ್‌ ಬೆಂಬಲಿತರಿಗೆ ಚುಕ್ಕಾಣಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 4:35 IST
Last Updated 10 ನವೆಂಬರ್ 2025, 4:35 IST
ಕಲಬುರಗಿಯ ಜಗತ್ ವೃತ್ತದಲ್ಲಿ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಕಲ್ಯಾಣರಾವ ಮೂಲಗೆ ಹಾಗೂ ಕಾಂಗ್ರೆಸ್‌ ಮುಖಂಡರು ವಿಜಯೋತ್ಸವ ಆರಿಸಿದರು
ಕಲಬುರಗಿಯ ಜಗತ್ ವೃತ್ತದಲ್ಲಿ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಕಲ್ಯಾಣರಾವ ಮೂಲಗೆ ಹಾಗೂ ಕಾಂಗ್ರೆಸ್‌ ಮುಖಂಡರು ವಿಜಯೋತ್ಸವ ಆರಿಸಿದರು   

ಕಲಬುರಗಿ: ತೀವ್ರ ಕುತೂಹಲ ಕೆರಳಿಸಿದ್ದ ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ.

ನಗರದ ಡಿಸಿಸಿ ಬ್ಯಾಂಕ್‌ ಕೇಂದ್ರ ಕಚೇರಿಯಲ್ಲಿ ಒಟ್ಟು 13 ನಿರ್ದೇಶಕ ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಭಾನುವಾರ ಮತದಾನ ನಡೆಯಿತು. ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬೆಂಬಲಿತರು ಗೆಲುವಿನ ನಗೆ ಬೀರಿದರೆ, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ದಾಖಲಿಸಿದ್ದಾರೆ. ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಜಯಿಸಿದ್ದಾರೆ.

ಹಾಲಿ ಅಧ್ಯಕ್ಷ ಸೋಮಶೇಖರ ಗೋನಾಯಕ ಸೇರಿದಂತೆ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಮೊದಲೇ ಅವಿರೋಧವಾಗಿ ಆಯ್ಕೆಯಾಗಿದ್ದರು. ಇದರಿಂದ ಒಟ್ಟು 13 ಸ್ಥಾನಗಳ ಪೈಕಿ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬೆಂಬಲಿತರು ಗೆದ್ದಂತಾಗಿದೆ. ಬ್ಯಾಂಕ್‌ ಆಡಳಿತದ ಚುಕ್ಕಾಣಿ ಮತ್ತೊಮ್ಮೆ ‘ಕಾಂಗ್ರೆಸ್‌’ ಬೆಂಬಲಿತರಿಗೆ ದಕ್ಕಿದೆ.

ADVERTISEMENT

ನಿಗದಿಯಂತೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ತನಕ ಪೊಲೀಸ್ ಬಿಗಿ ಭದ್ರತೆಯಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು. ಒಟ್ಟು 9 ಕ್ಷೇತ್ರಗಳಿಂದ ಒಟ್ಟು 18 ಅಭ್ಯರ್ಥಿಗಳು ಕಣದಲ್ಲಿದ್ದರು. ಇದರಿಂದ ನೇರಾನೇರ ಸ್ಪರ್ಧೆ ಏರ್ಪಟ್ಟಿತ್ತು. ಒಟ್ಟು 340 ಮತದಾರರು ತಮ್ಮ ಮತಹಕ್ಕು ಚಲಾಯಿಸಿದ್ದರು. ಅದರಲ್ಲಿ ಎರಡು ಮತಗಳು ತಿರಸ್ಕತಗೊಂಡವು.

ಗೆದ್ದ–ಸೋತ ಅಭ್ಯರ್ಥಿಗಳ ವಿವರ:

ಅಫಜಲಪುರ ಪಿಕೆಪಿಎಸ್‌ ಸಹಕಾರ ಸಂಘಗಳ ಕ್ಷೇತ್ರದಿಂದ ಬಂದರವಾಡದ ಅಜಯ್‌ ಪಾಟೀಲ (15 ಮತ) 11 ಮತಗಳ ಅಂತರದಿಂದ ರಾಜಕುಮಾರ ಜಿಡಗಿ (4 ಮತ) ಅವರನ್ನು ಪರಾಭವಗೊಳಿಸಿದ್ದಾರೆ. ಅಜಯ್‌ ಪಾಟೀಲ ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಅಣ್ಣಾರಾವ ಪಾಟೀಲರ ಮೊಮ್ಮಗ.

ಆಳಂದ ಪಿಕೆಪಿಎಸ್‌ ಸಹಕಾರ ಸಂಘಗಳ ಕ್ಷೇತ್ರದಿಂದ ಖಜೂರಿಯ ಅಶೋಕ ಸಾವಳೇಶ್ವರ (18 ಮತ) 5 ಮತಗಳ ಅಂತರದಿಂದ ಚಂದ್ರಶೇಖರ ಭೂಸನೂರ (13 ಮತ) ಅವರನ್ನು ಮಣಿಸಿ ಸತತ ಮೂರನೇ ಬಾರಿಗೆ ಡಿಸಿಸಿ ಬ್ಯಾಂಕ್‌ ಪ್ರವೇಶಿಸಿದ್ದಾರೆ.

ಚಿತ್ತಾಪುರ ಪಿಕೆಪಿಎಸ್‌ ಸಹಕಾರ ಸಂಘಗಳ ಕ್ಷೇತ್ರದಿಂದ ಅಚ್ಚರಿಯ ಅಭ್ಯರ್ಥಿಯಾಗಿದ್ದ ಗುಂಡಗುರ್ತಿಯ ಸುನೀಲಕುಮಾರ ದೊಡಮನಿ (23) 18 ಮತಗಳ ಅಂತರದಿಂದ ಸಿದ್ದಪ್ಪಗೌಡ ಪಾಟೀಲ (5) ಅವರನ್ನು ಮಣಿಸಿದ್ದಾರೆ.

ಜೇವರ್ಗಿಯ ಪಿಕೆಪಿಎಸ್‌ ಸಹಕಾರ ಸಂಘಗಳ ಕ್ಷೇತ್ರದಿಂದ ಜೆಡಿಎಸ್‌ನ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರ ಸಹೋದರ, ನರಿಬೋಳದ ಬಸವರಾಜ ಪಾಟೀಲ (19 ಮತ) ಐದು ಮತಗಳ ಅಂತರದಿಂದ ಕೇದಾರಲಿಂಗಯ್ಯ ಹಿರೇಮಠ (14 ಮತ) ಅವರಿಗೆ ಸೋಲುಣಿಸಿದ್ದಾರೆ.

ಕಲಬುರಗಿ ಪಿಕೆಪಿಎಸ್‌ ಸಹಕಾರ ಸಂಘಗಳ ಕ್ಷೇತ್ರದಿಂದ ಕುಮಸಿಯ ಕಲ್ಯಾಣರಾವ ಮೂಲಗೆ (19 ಮತ) ನಾಲ್ಕು ಮತಗಳ ಅಂತರದಿಂದ ಶರಣಬಸಪ್ಪ ಪಾಟೀಲ (15) ಅವರನ್ನು ಮಣಿಸಿದ್ದಾರೆ. ಕಲ್ಯಾಣರಾವ ಮೂಲಗೆ ಕಾಂಗ್ರೆಸ್‌ ಮುಖಂಡ ನೀಲಕಂಠರಾವ ಮೂಲಗೆ ಸಹೋದರ.

ಸೇಡಂ ಪಿಕೆಪಿಎಸ್‌ ಸಹಕಾರ ಸಂಘಗಳ ಕ್ಷೇತ್ರದಿಂದ ಕಾನಗಡ್ಡಾದ ಶಂಕರ ಭೂಪಾಲ ಚಂದ್ರಶೇಖರ (11 ಮತ) ಎರಡು ಮತಗಳಿಂದ ನಾಗೇಂದ್ರಪ್ಪ ರಾಮಶೆಟ್ಟಿ (9 ಮತ) ಅವರಿಗೆ ಸೋಲುಣಿಸಿದರು.

ಯಾದಗಿರಿ ಜಿಲ್ಲೆಯ ಸುರಪುರ ಪಿಕೆಪಿಎಸ್‌ ಸಹಕಾರ ಸಂಘಗಳ ಕ್ಷೇತ್ರದಿಂದ ವಿಠಲ ಯಾದವ (28 ಮತ) 15 ಮತಗಳಿಂದ ಶಾಂತಗೌಡ ಅಲಿಯಾಸ್‌ ಶಾಂತರೆಡ್ಡಿ ಚೌದ್ರಿ (13 ಮತ) ಅವರನ್ನು ಪರಾಭವಗೊಳಿಸಿದರು.

ಚಿಂಚೋಳಿಯ ಗೌತಮ ವೈಜನಾಥ ಪಾಟೀಲ (15 ಮತ) ಒಂದು ಮತದ ಅಂತರದಿಂದ ಶೈಲೇಶಕುಮಾರ ಪ್ರಭುಲಿಂಗ (14 ಮತ) ಅವರನ್ನು ಸೋಲಿಸಿದ್ದಾರೆ.

‘ಡಿ’ ವರ್ಗದ ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸುರೇಶ ಸಜ್ಜನ (89 ಮತ) 75 ಮತಗಳ ಬೃಹತ್‌ ಅಂತರದಿಂದ ಜ್ಯೋತಿ ಮರಗೋಳ (14 ಮತ) ಅವರನ್ನು ಸೋಲಿಸಿದ್ದು ವಿಶೇಷ.

ಸಂಭ್ರಮಾಚರಣೆ:

ಸಂಜೆ 4 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಿತು. ಸಂಜೆ 6 ಗಂಟೆ ಹೊತ್ತಿಗೆ ಫಲಿತಾಂಶ ಸ್ಪಷ್ಟಗೊಂಡಿತು. ಫಲಿತಾಂಶ ಹೊರ ಬೀಳುತ್ತಿದ್ದಂತೆ ವಿಜೇತ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಗುಲಾಲು ಎರಚಿ ಸಂಭ್ರಮಾಚರಣೆ ನಡೆಸಿದರು. ಗೆದ್ದ ಅಭ್ಯರ್ಥಿಗಳನ್ನು ಹೆಗಲ ಮೇಲೆ ಹೊತ್ತು ಕುಣಿದರು. ಅಭ್ಯರ್ಥಿಗಳು, ಅವರ ಬೆಂಬಲಿತ ಪಕ್ಷಗಳ ಪರ ಘೋಷಣೆಗಳೂ ಮೊಳಗಿದವು.

ಸಂಚಾರಕ್ಕೆ ತೊಂದರೆ:

ಮತದಾನದ ವೇಳೆ ಅಭ್ಯರ್ಥಿಗಳ ಬೆಂಬಲಿತರು ಜಗತ್‌ ವೃತ್ತ, ಸುತ್ತಲಿನ ಹೋಟೆಲ್‌ಗಳು, ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದು ಕಂಡು ಬಂತು. ದಿನವಿಡೀ ಜಗತ್ ವೃತ್ತದಿಂದ ಸಪ್ನ ಬುಕ್‌ ಹೌಸ್‌ ತನಕ ಒಂದು ಬದಿಯ ರಸ್ತೆ ಬಂದ್‌ ಮಾಡಿದ್ದರಿಂದ ವಾಹನಗಳ ಸವಾರರು ಪರದಾಡಿದರು.

‘ಡಿಸಿಸಿ ಬ್ಯಾಂಕ್‌ ಚುನಾವಣೆ ಹಾಗೂ ಪತ್ರಕರ್ತರ ಸಂಘದ ಚುನಾವಣೆ ಸೇರಿದಂತೆ ಒಟ್ಟು ಮೂವರು ಎಸಿಪಿ, ಆರು ಮಂದಿ ಇನ್‌ಸ್ಪೆಕ್ಟರ್‌, 10 ಮಂದಿ ಪಿಎಸ್‌ಐ, ಎರಡು ಸಿಆರ್‌ ತುಕಡಿ ಸೇರಿದಂತೆ 84 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಕಲಬುರಗಿ–ಯಾದಗಿರಿ ಡಿಸಿಸಿ ಬ್ಯಾಂಕ್‌ ಚುನಾವಣೆಯು ಯಾವುದೇ ಅಹಿತಕರ ಘಟನೆ ಇಲ್ಲದಂತೆ ಶಾಂತಿಯುತವಾಗಿ ಮುಗಿದಿದೆ. ಎರಡು ಮತಗಳು ತಿರಸ್ಕೃತಗೊಂಡಿವೆ
ಪ್ರಕಾಶ ಕುದರಿ ಚುನಾವಣಾಧಿಕಾರಿ
ಈ ಗೆಲುವು ಕಳೆದ ಎರಡು ವರ್ಷಗಳ ಪ್ರಾಮಾಣಿಕ–ಉತ್ತಮ ಆಡಳಿತಕ್ಕೆ ದೊರೆತ ಮುದ್ರೆ. ಸಚಿವ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಸಚಿವರು ಶಾಸಕರ ಸದಸ್ಯರರ ಸಹಕಾರದಿಂದ ಇಂಥ ಗೆಲುವು ದಕ್ಕಿದೆ ಸೋಮಶೇಖರ
ಗೋನಾಯಕ ಡಿಸಿಸಿ ಬ್ಯಾಂಕ್‌ ಹಾಲಿ ಅಧ್ಯಕ್ಷ

ಅವಿರೋಧವಾಗಿ ಆಯ್ಕೆಯಾದವರು

  ಕಾಂಗ್ರೆಸ್ ಬೆಂಬಲಿತರಾದ ಬ್ಯಾಂಕ್‌ನ ಹಾಲಿ ಅಧ್ಯಕ್ಷ ಸೋಮಶೇಖರ ಗೋನಾಯಕ ಪಟ್ಟಣ ಸಹಕಾರ ಕ್ಷೇತ್ರದಿಂದ ಅವಿರೋಧ ಆಯ್ಕೆಯಾಗಿದ್ದು ಐದನೇ ಸಲ ಡಿಸಿಸಿ ಬ್ಯಾಂಕ್‌ ಪ್ರವೇಶಿಸಿದ್ದಾರೆ.  ಶಹಾಪುರ ತಾಲ್ಲೂಕಿನಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಗುರುನಾಥ ರೆಡ್ಡಿ ಪರ್ವತರೆಡ್ಡಿ (2ನೇ ಸಲ ಗೆಲುವು ಯಾದಗಿರಿ ತಾಲ್ಲೂಕಿನಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಬ್ಯಾಂಕ್‌ನ ಹಾಲಿ ನಿರ್ದೇಶಕ ಸಿದ್ರಾಮರೆಡ್ಡಿ ಮಲ್ಲಿಕಾರ್ಜುನ ರೆಡ್ಡಿ ಕೌಳುರ(2ನೇ ಸಲ ಗೆಲುವು) ಹಾಗೂ ಟಿಎಪಿಸಿಎಂ ಕ್ಷೇತ್ರದಿಂದ ಯಾದಗಿರಿಯ ಬಸವರಾಜ ಸಂಗನಗೌಡ ಪಾಟೀಲ ಅವರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಭರ್ಜರಿ ಗೆಲುವು ವಿರೋಚಿತ ಸೋಲು

ತೀವ್ರ ಪೈಪೋಟಿ ಹಾಗೂ ಕುತೂಹಲಕ್ಕೆ ಕಾರಣವಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ತವರು ಕ್ಷೇತ್ರ ಚಿತ್ತಾಪುರ ಪಿಕೆಪಿಎಸ್‌ ಕ್ಷೇತ್ರದಿಂದ ಕಾಂಗ್ರೆಸ್‌ ಬೆಂಬಲಿತ ಸುನೀಲಕುಮಾರ ವಿಠಲ ದೊಡಮನಿ 28 ಮತಗಳ ‍ಪೈಕಿ 23 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದರು. ಎದುರಾಳಿ ಅಭ್ಯರ್ಥಿ ಸಿದ್ದಪ್ಪಗೌಡ ಪಾಟೀಲ ಬರೀ ಐದು ಮತಗಳನ್ನಷ್ಟೇ ಪಡೆದರು. ಚಿಂಚೋಳಿ ಪಿಕೆಪಿಎಸ್‌ ಕ್ಷೇತ್ರದಲ್ಲೂ ತುರುಸಿನ ಸ್ಪರ್ಧೆ ಕಂಡ ಬಂತು. ಚಲಾವಣೆಯಾದ 29 ಮತಗಳಲ್ಲಿ 15 ಮತಗಳನ್ನು ಪಡೆದ ಬಿಜೆಪಿ ಬೆಂಬಲಿತ ಗೌತಮ ವೈಜನಾಥ ಪಾಟೀಲ ಜಯ ಸಾಧಿಸಿದರು. ಎದುರಾಳಿ ಅಭ್ಯರ್ಥಿ ಕಾಂಗ್ರೆಸ್‌ ಬೆಂಬಲಿತ ಶೈಲೇಶಕುಮಾರ ಪ್ರಭುಲಿಂಗ 14 ಮತ ಪಡೆದು ವಿರೋಚಿತ ಸೋಲು ಕಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.