ADVERTISEMENT

ಶೆಟ್ಟರ್‌ ಹೇಳಿಕೆಗೆ ಗುತ್ತೇದಾರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 14:53 IST
Last Updated 13 ಜೂನ್ 2025, 14:53 IST
ಜಗದೇವ ಗುತ್ತೇದಾರ
ಜಗದೇವ ಗುತ್ತೇದಾರ   

ಕಲಬುರಗಿ: ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕಲಬುರಗಿಯಲ್ಲಿ ರೈಲ್ವೆ ವಿಭಾಗ ಏಕೆ ಮಾಡಲಿಲ್ಲ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂಕಿಸಂಖ್ಯೆಗಳು ತಿಳಿಯುತ್ತಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲೇ ಕುಳಿತು ಟೀಕೆ ಮಾಡುತ್ತಾರೆ ಎಂದು ಸಂಸದ ಜಗದೀಶ ಶೆಟ್ಟರ್‌ ಟೀಕಿಸಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಈ ರೀತಿ ಪ್ರಚಾರಕ್ಕಾಗಿ ಮಾತನಾಡುವುದು ಅವರಿಗೆ ಶೋಭೆ ತರುವಂಥದ್ದಲ್ಲ’ ಎಂದು ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಕಾಳಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಖರ್ಗೆ ಅವರು ಸಚಿವರಾಗಿದ್ದ ಅವಧಿಯಲ್ಲಿ ಕಲಬುರಗಿ ರೈಲ್ವೆ ವಿಭಾಗಕ್ಕೆ ಸ್ಥಳ ನೋಡಿ ಜಮೀನು ಕೂಡ ಅಂತಿಮಗೊಂಡಿತ್ತು. ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಬಿಜೆಪಿ ಸರ್ಕಾರ ಕಲಬುರಗಿ ರೈಲ್ವೆ ವಿಭಾಗ ಮಾಡದೇ ಕಲ್ಯಾಣ ಕರ್ನಾಟಕ ಭಾಗಕ್ಕೆ ಘೋರ ಅನ್ಯಾಯ ಮಾಡಿತು. ಮುಂದೆ ಬಿಜೆಪಿಯವರು ಏಕೆ ಕಲಬುರಗಿಯಲ್ಲಿ ರೈಲ್ವೆ ವಿಭಾಗ ಸ್ಥಾಪಿಸಲಿಲ್ಲ ಎಂಬುದಕ್ಕೆ ಶೆಟ್ಟರ್‌ ಮೊದಲು ಉತ್ತರಿಸಲಿ’ ಎಂದಿದ್ದಾರೆ.

‘ಇನ್ನು, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದ್ದ ಜಿಎಸ್‌ಟಿ ಪಾಲು ಪಡೆಯಲು ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕವು ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಇದು ಬಿಜೆಪಿಯವರ ತಾರತಮ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇದನ್ನು ಪ್ರಶ್ನಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ನೈತಿಕೆ ಶೆಟ್ಟರ್‌ಗೆ ಇಲ್ಲ’ ಎಂದು ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.