ADVERTISEMENT

15 ದಿನದಲ್ಲಿ ಬೆಳೆ ಸಮೀಕ್ಷೆ ಮುಗಿಸಿ

ಜಿಲ್ಲಾಧಿಕಾರಿಗಳಿಗೆ ಕಾರಜೊಳ ಪತ್ರ: ನಿಜವಾದ ಸಂತ್ರಸ್ತರಿಗೆ ತಕ್ಷಣ ಪರಿಹಾರ ನೀಡಲು ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 14:28 IST
Last Updated 22 ಅಕ್ಟೋಬರ್ 2020, 14:28 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಕಲಬುರ್ಗಿ: ‘ಪ್ರವಾಹದಿಂದ ಹಾನಿಯಾದ ಮನೆಗಳ ಸಮೀಕ್ಷೆಯನ್ನು ಆದಷ್ಟು ಬೇಗ ಹಾಗೂ ಕರಾರುವಕ್ಕಾಗಿ ನಡೆಸಬೇಕು. ಹಾನಿ ಅನುಭವಿಸಿದವರಿಗೆ ಸರ್ಕಾರ ನೀಡುವ ₹ 10 ಸಾವಿರ ಪರಿಹಾರ ಧನನಿಜವಾದ ಸಂತ್ರಸ್ತರಿಗೆ ತಲುಪುವಂತೆ ಎಚ್ಚರಿಕೆ ವಹಿಸಬೇಕು. ಬೆಳೆ ಹಾನಿ ಸಮೀಕ್ಷೆಯನ್ನು 15 ದಿನಗಳಲ್ಲಿ ಮುಗಿಸಬೇಕು‘ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಜಿಲ್ಲಾಧಿಕಾರಿಗೆ ವಿ.ವಿ. ಜೋತ್ಸ್ನಾ ಅವರಿಗೆ ಸೂಚನೆ ನೀಡಿದ್ದಾರೆ.

‘ರಣಭೀಕರ ಮಳೆಯಿಂದ ಜಿಲ್ಲೆಯಲ್ಲಿ ಬಡವರು, ರೈತರು ಅತ್ಯಂತ ಸಂಕಷ್ಟಕ್ಕೊಳಗಾಗಿದ್ದಾರೆ. ಈ ಕುರಿತು ತುರ್ತು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ನಿಮಗೆ ಹಲವು ಬಾರಿ ನಾನು ಸೂಚನೆ ನೀಡಿದ್ದೇನೆ. ಇತಿಹಾಸದಲ್ಲಿ ಕಂಡು ಕೇಳರಿಯದಂತಹ ಬೀಕರ ಪ್ರವಾಹದ ಸಂದರ್ಭದಲ್ಲಿಯು ಪ್ರಾಣ ಹಾನಿ ಆಗದಂತೆ ಎಚ್ಚರ ವಹಿಸಿದ್ದೀರಿ. ನನ್ನ ಅನುಪಸ್ಥತಿಯಲ್ಲೂ ಜಿಲ್ಲಾಡಳಿತವು ಸಕ್ರಿಯವಾಗಿ ಸ್ಪಂದಿಸಿ ಜನರ ಸಂಕಷ್ಟಗಳಿಗೆ ನೆರವಾಗುತ್ತಿರುವ ಕಾರನ ಅಭಿನಂದಿಸುತ್ತೇನೆ. ಆದರೆ, ಈಗ ತುರ್ತಾಗಿ ಆಗಬೇಕಾದ ಕಾರ್ಯಕಗಳ ಬಗ್ಗೆ ಇನ್ನೂ ಹೆಚ್ಚಿನ ಮುತುವರ್ಜಿ ಅಗತ್ಯ’ ಎಂದು ಅವರು ಗುರುವಾರ ರವಾನಿಸಿದ ಪತ್ರದಲ್ಲಿ ತಿಳಿಸಿದ್ದಾರೆ.

‘ಮಳೆ, ನೆರೆಯಿಂದ ಶಿಥಿಲಗೊಂಡ, ಬಿದ್ದ ಮನೆಗಳನ್ನು ಪುನರ್ ನಿರ್ಮಾಣ ಮಾಡುವುದು ಅಗತ್ಯ. ಇದಕ್ಕಾಗಿ ಸರ್ಕಾರ ಪರಿಹಾರ ಧನ ನೀಡುತ್ತಿದೆ. ಇದನ್ನು ಸಂತ್ರಸ್ತರಿಗೆ ತಲುಪಿಸುವ ಕಾರ್ಯವನ್ನು ಕೂಡಲೇ ಮಾಡಬೇಕು. ಶಿಥಿಲಗೊಂಡ ಮನೆಗಳು 15 ದಿನಗಳ ಅವಧಿಯಲ್ಲಿ ಬಿದ್ದುಹೋಗುವ ಸಂಭವವಿರುತ್ತದೆ. ಆದ್ದರಿಂದ ಈ ಬಗ್ಗೆ ಸಮೀಕ್ಷೆ ಕಾರ್ಯವನ್ನು ಅತ್ಯಂತ ಜಾಗರೂಕತೆಯಿಂದ ಮಾಡತಕ್ಕದ್ದು’ ಎಂದೂ ತಾಕೀತು ಮಾಡಿದ್ದಾರೆ.

ADVERTISEMENT

‘ಹಾನಿಯಾಗಿರುವ ಶಾಲೆ, ಕಾಲೇಜುಗಳ ಕಟ್ಟಡಗಳು, ರಸ್ತೆ, ಸೇತುವೆಗಳ ದುರಸ್ತಿ ಮತ್ತಿತರ ಕಾರ್ಯವನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕು. ಬೆಳೆ ಹಾನಿ ಸಮೀಕ್ಷೆಯನ್ನೂ ಶೀಘ್ರ ನಡೆಸಬೇಕು. ಸದ್ಯದ ಸ್ಥಿತಿಯಲ್ಲಿ ಎಲ್ಲವೂ ಕಷ್ಟವಾಗಬಹುದು. ಆದರೂ 15 ದಿನಗಳ ಕಾಲ ಪರಿಸ್ಥಿತಿಯನ್ನು ಅವಲೋಕಿಸಿ, ಸಮೀಕ್ಷೆ ಮಾಡಿ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡುವ ಕ್ರಮಕೈಗೊಳ್ಳಿ. ಸರ್ವೆ ಕಾರ್ಯ ಎರಡು ವಾರಗಳಲ್ಲಿ ಮುಗಿಸಲೇಬೇಕು. ತದನಂತರ ನಾನು ಸರ್ವೆ ಕಾರ್ಯದ ಬಗ್ಗೆ ರ್‍ಯಾಂಡಮ್ ಸಮೀಕ್ಷೆ ಮಾಡುತ್ತೇನೆ. ಜಿಲ್ಲೆಯ ಎಲ್ಲಾ ಅಧಿಕಾರಿಗಳು ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕು’ ಎಂದೂ ಸಚಿವರು ತಿಳಿಸಿದ್ದಾರೆ.

‘ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಯಾವುದೇ ಅರ್ಹ ಫಲಾನುಭವಿಯು ಸರ್ಕಾರದ ನೆರವಿನಿಂದ ವಂಚಿತರಾಗಬಾರದು. ಸರ್ಕಾರದ ನೆರವು ಸಂಕಷ್ಟ ಪರಿಸ್ಥಿತಿಯಲ್ಲಿ ಇರುವವರಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ದೊರಕಲಿದೆ ಎಂಬ ಭರವಸೆ ಜನರಿಗೆ ಮೂಡಬೇಕು. ಕಾಳಜಿ ಕೇಂದ್ರಗಳಲ್ಲಿ ಯಾವುದೇ ನ್ಯೂನತೆ ಆಗದಂತೆ ಜಾಗೃತಿ ವಹಿಸಬೇಕು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೈಮಾನಿಕ ಸಮೀಕ್ಷೆ ನಡೆಸಿ, ನೀಡಿದ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಬಗ್ಗೆ ಪ್ರಗತಿ ವರದಿಯನ್ನು ಕೂಡಲೇ ಸಲ್ಲಿಸಬೇಕು’ ಎಂದೂ ಕಾರಜೋಳ ಅವರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.