ADVERTISEMENT

ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚದ ‘ಹಸಿರು’

ಬಳ್ಳಾರಿ, ವಿಜಯನಗರ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ರಾಜ್ಯದ ಸರಾಸರಿಗಿಂತ ಕಡಿಮೆ ಅರಣ್ಯ

ಭೀಮಣ್ಣ ಬಾಲಯ್ಯ
Published 15 ಮಾರ್ಚ್ 2025, 5:47 IST
Last Updated 15 ಮಾರ್ಚ್ 2025, 5:47 IST
<div class="paragraphs"><p>&nbsp; ಸಾಂಕೇತಿ ಚಿತ್ರ&nbsp;</p></div>

  ಸಾಂಕೇತಿ ಚಿತ್ರ 

   

ಕಲಬುರಗಿ: ಬಿಸಿಲ ನಾಡು ಎನ್ನುವ ಅನ್ವರ್ಥ ಹೊಂದಿದ, ಬೇಸಿಗೆಯಲ್ಲಿ ಕಾದು ಕಾವಲಿಯಾಗುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅರಣ್ಯ ಪ್ರದೇಶ ಹೆಚ್ಚುತ್ತಿಲ್ಲ.

ಬಳ್ಳಾರಿ ಹಾಗೂ ಕಲಬುರಗಿ ಅರಣ್ಯ ವೃತ್ತಗಳಲ್ಲಿ ಹಂಚಿ ಹೋಗಿರುವ ಈ ಭಾಗ ರಾಜ್ಯದ ಒಟ್ಟು ಭೂಪ್ರದೇಶದ ಶೇ 16.13ರಷ್ಟು ವಿಸ್ತೀರ್ಣ ಹೊಂದಿದೆ. ಆದರೆ, ಒಟ್ಟು ಭೂಪ್ರದೇಶದ ಶೇ 5ರಷ್ಟು ಮಾತ್ರ ಅರಣ್ಯ ಪ್ರದೇಶ ಹೊಂದಿದೆ. 

ADVERTISEMENT

ಕುರುಚಲು ಹಾಗೂ ಒಣ ಎಲೆ ಉದುರುವ ಕಾಡು ಇಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಭಾಗಕ್ಕೆ ಹಸಿರು ಹೊದಿಕೆ ಹೊದಿಸಬೇಕು ಎನ್ನುವ ಇಲಾಖೆಯ ಕನಸು ಇನ್ನೂ ನನಸಾಗಿಲ್ಲ ಎನ್ನುವುದನ್ನು ಅಂಕಿ–ಅಂಶ ಪ್ರತಿಫಲಿಸುತ್ತದೆ. 7 ಜಿಲ್ಲೆಗಳಲ್ಲಿ ಬಳ್ಳಾರಿ ಹಾಗೂ ವಿಜಯನಗರ ಹೊರತುಪಡಿಸಿ ಉಳಿದ ಜಿಲ್ಲೆಗಳು ರಾಜ್ಯದ ಸರಾಸರಿಗಿಂತ ಕಡಿಮೆ ಅರಣ್ಯ ಪ್ರದೇಶ ಹೊಂದಿವೆ.

2023ರಲ್ಲಿ ಬಳ್ಳಾರಿ, ವಿಜಯನಗರದಲ್ಲಿ ಶೇ 0.75ರಷ್ಟು ಅರಣ್ಯ ಪ್ರದೇಶ ಹೆಚ್ಚಳವಾಗಿದೆ. ಬೀದರ್ ಶೇ 1.73, ರಾಯಚೂರು ಶೇ 0.28 ಹಾಗೂ ಕೊಪ್ಪಳದಲ್ಲಿ ಶೇ 0.11ರಷ್ಟು ಅರಣ್ಯ ಪ್ರದೇಶ ಹೆಚ್ಚಳವಾಗಿದೆ. ಉಳಿದ ಜಿಲ್ಲೆಗಳಲ್ಲಿ ಹಲವು ವರ್ಷಗಳಿಂದ ಅರಣ್ಯ ಪ್ರದೇಶ ಹೆಚ್ಚಾಗಿಲ್ಲ.

1,954 ಚ.ಕಿ. ಮೀ ಭೂ ಪ್ರದೇಶ ಹೊಂದಿದ ಕಲಬುರಗಿ ಜಿಲ್ಲೆಯು ಏಳು ಜಿಲ್ಲೆಗಳ ಪೈಕಿ ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದಿದೆ. ಒಟ್ಟು ಭೂ ಪ್ರದೇಶದ ಕೇವಲ ಶೇ 3.10ರಷ್ಟು ಅರಣ್ಯ ಪ್ರದೇಶ ಹೊಂದಿದೆ. ರಾಯಚೂರು ಜಿಲ್ಲೆ ಶೇ 4.39ರಷ್ಟು ಅರಣ್ಯ ಹೊಂದಿ ಕಡಿಮೆ ಅರಣ್ಯ ಹೊಂದಿದ ಎರಡನೇ ಜಿಲ್ಲೆಯಾಗಿ ಗುರುತಿಸಿಕೊಂಡಿದೆ. ಕೊಪ್ಪಳ ಶೇ 8.43, ಬೀದರ್ ಶೇ 8.49 ಹಾಗೂ ಯಾದಗಿರಿ ಶೇ 8.55ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ.

8,461 ಚ.ಕಿ.ಮೀ ಭೂ ಪ್ರದೇಶ ಹೊಂದಿರುವ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳು ರಾಜ್ಯದ ಸರಾಸರಿಗಿಂತ ಹೆಚ್ಚು ಅರಣ್ಯ ಪ್ರದೇಶ ಹೊಂದಿವೆ. ಎರಡೂ ಜಿಲ್ಲೆಗಳು ಸೇರಿ ಶೇ 23.20ರಷ್ಟು ಅರಣ್ಯ ಪ್ರದೇಶ ಹೊಂದಿರುವುದು ಅರಣ್ಯ ಇಲಾಖೆ ಅಂಕಿ–ಅಂಶಗಳಿಂದ ತಿಳಿದುಬರುತ್ತದೆ.

ಬಳ್ಳಾರಿ–ವಿಜಯನಗರದಲ್ಲಿ ಹೆಚ್ಚು ಮೀಸಲು ಅರಣ್ಯ: ಈ ಭಾಗದಲ್ಲಿ ಬಳ್ಳಾರಿ–ವಿಜಯನಗರ ಜಿಲ್ಲೆಗಳು ಹೆಚ್ಚು 1506.25 ಚ.ಕಿ. ಮೀ ಮೀಸಲು ಅರಣ್ಯ ಹೊಂದಿವೆ. ಬೀದರ್ ಜಿಲ್ಲೆಯಲ್ಲಿ 18.91 ಚ.ಕಿ.ಮೀ ರಕ್ಷಿತ ಅರಣ್ಯ ಪ್ರದೇಶ ಇದೆ. ಕೊಪ್ಪಳ ಜಿಲ್ಲೆ ಕೇವಲ 0.11 ಚ.ಕಿ.ಮೀ ರಕ್ಷಿತ ಅರಣ್ಯ ಹೊಂದಿದೆ. ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 4ರ ಅಡಿ ಅರಣ್ಯ ಎಂದು ಗುರುತಿಸಿದ ಭೂಮಿ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ.

ಈ ಭಾಗದ ಯಾವ ಜಿಲ್ಲೆಗಳಲ್ಲೂ ಖಾಸಗಿ ಅರಣ್ಯ ಇಲ್ಲ. ಅರಣ್ಯ ಕೃಷಿಯೂ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವುದಿಲ್ಲ. ಗ್ರಾಮಾಂತರ ಅರಣ್ಯ ಪ್ರದೇಶವೂ ಇಲ್ಲ ಎನ್ನುವುದು ತಿಳಿದುಬರುತ್ತದೆ.

ಕ.ಕ.ಭಾಗದಲ್ಲಿರುವ ಅರಣ್ಯ (ಚ.ಕಿ.ಮೀ) ಜಿಲ್ಲೆ;ಮೀಸಲು ಅರಣ್ಯ;ರಕ್ಷಿತ ಅರಣ್ಯ;ವರ್ಗೀಕರಿಸದ ಅರಣ್ಯ;ಸೆಕ್ಷನ್–4;ಒಟ್ಟು ಬಳ್ಳಾರಿ–ವಿಜಯನಗರ;1506.25;5.53;105.18;345.63;1962.59 ಬೀದರ್;147.82;18.19;199.84;96.79;462.64 ಕಲಬುರಗಿ;260.28;0.98;0.00;78.61;339.87 ಯಾದಗಿರಿ;260.81;0.09;34.29;155.41;450.60 ರಾಯಚೂರು;230.47;10.28;102.67;27.11;370.53 ಕೊಪ್ಪಳ;205.30;0.11;223.41;40.47;469.29 ಆಧಾರ: ಅರಣ್ಯ ಇಲಾಖೆ

‘ಉರುವಲು ಒತ್ತಡ ಕಡಿಮೆಯಾಗಲಿ’ ‘ಇತರೆ ಭಾಗಗಳಿಗೆ ಹೋಲಿಸಿದರೆ ಈ ಭಾಗದ ಗ್ರಾಮೀಣ ಪ್ರದೇಶದಲ್ಲಿ ಉರುವಲು ಕಟ್ಟಿಗೆಗಾಗಿ ಹೆಚ್ಚು ಜನ ಕಾಡು ಮತ್ತು ಗುಡ್ಡಗಳನ್ನು ಅವಲಂಬಿಸಿದ್ದಾರೆ. ಜಾನುವಾರುಗಳನ್ನು ಮೇಯಿಸುತ್ತಾರೆ. ಎಲೆ ಉದುರುವ ಕಾಡು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಎಲೆ ಉದುರಿದ ಮರಕ್ಕೆ ಕೊಡಲಿ ಹಾಕುತ್ತಾರೆ. ಮೊದಲು ಇದು ನಿಲ್ಲಬೇಕು’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರಕಾಶ ಕರಿಯಜ್ಜನವರ ಹೇಳುತ್ತಾರೆ. ‘ಭೌಗೋಳಿಕ ಕಾರಣಗಳಿಗಾಗಿ ಈ ಭಾಗದಲ್ಲಿ ಕೆಲವು ಗಿಡಗಳನ್ನು ಬೆಳೆಯಲು ಸಾಧ್ಯವಿಲ್ಲ. ಕಾರಣ ಬೇವು ಹೊಂಗೆಯಂಥ ಸ್ಥಳೀಯ ಗಿಡ ಬೆಳೆಸಬೇಕು. ರೈತರೂ ಜಮೀನುಗಳಲ್ಲಿ ಗಿಡ–ಮರ ಬೆಳೆಸಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು. ಪರಿಸರದ ಮಹತ್ವ ಅರಿವಿಗೆ ಬಂದಾಗ ಮಾತ್ರ ಜನರು ತಾವಾಗಿಯೇ ಪರಿಸರ ಸಂರಕ್ಷಣೆಗೆ ಮುಂದಾಗುತ್ತಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.