ADVERTISEMENT

ಬೆಳಕಿನ ಹಬ್ಬಕ್ಕೆ ಹೋಳಿಗೆ ಸವಿರುಚಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2020, 5:14 IST
Last Updated 16 ನವೆಂಬರ್ 2020, 5:14 IST
ಕಲಬುರ್ಗಿಯ ವಿದ್ಯಾನಗರದ ನಂದಪ್ಪ ಜಮಾದಾರ ಅವರ ಗ್ಯಾರೇಜ್‌ನಲ್ಲಿ ಭಾನುವಾರ, ಧನಲಕ್ಷ್ಮಿಗೆ ಗೃಹಿಣಿಯರು ಹಾಗೂ ಯುವತಿಯರು ಆರತಿ ಬೆಳಗಿದರು
ಕಲಬುರ್ಗಿಯ ವಿದ್ಯಾನಗರದ ನಂದಪ್ಪ ಜಮಾದಾರ ಅವರ ಗ್ಯಾರೇಜ್‌ನಲ್ಲಿ ಭಾನುವಾರ, ಧನಲಕ್ಷ್ಮಿಗೆ ಗೃಹಿಣಿಯರು ಹಾಗೂ ಯುವತಿಯರು ಆರತಿ ಬೆಳಗಿದರು   

ಕಲಬುರ್ಗಿ: ಜಿಲ್ಲೆಯ ಎಲ್ಲೆಡೆ ಭಾನುವಾರ ದೀಪಾವಳಿ ಅಮಾವಾಸ್ಯೆಯ ಸಂಭ್ರಮ ಮನೆ ಮಾಡಿತು. ಬೆಳಕಿನ ಹಬ್ಬದ ಮೂರನೇ ದಿನವಾದ ಈ ದಿನದಂದು ವ್ಯಾಪಾರಿಗಳು, ಉದ್ಯಮಿಗಳು ಲಕ್ಷ್ಮಿ ಪೂಜೆ ಮಾಡಿದರು. ಶನಿವಾರ ಪೂಜೆ ಮಾಡದ ಹಲವರು ಭಾನುವಾರ ತಮ್ಮ ಮನೆಗಳಲ್ಲಿ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ, ಪೂಜೆಗೈದರು.

ಈ ಬಾರಿ ನರಕ ಚತುರ್ದಶಿ ಹಾಗೂ ದೀಪವಾಳಿ ಅಮಾವಾಸ್ಯೆ ಒಂದೇ ದಿನ (ಶನಿವಾರ) ಬಂದಿವೆ. ಭಾನುವಾರ ಬೆಳಗಿನವರೆಗೂ ಅಮಾವಾಸ್ಯೆ ಇತ್ತು. ಹಾಗಾಗಿ, ಬಹಳಷ್ಟು ವ್ಯಾಪಾರಿಗಳು ಶನಿವಾರ ಲಕ್ಷ್ಮಿಪೂಜೆ ಮಾಡದೇ, ಭಾನುವಾರ ಮಾಡಿದರು. ಅಮಾವಾಸ್ಯೆಯ ಪೂಜೆಯನ್ನು ಪುರಾಣಗಳಲ್ಲಿ ‘ಬಲೀಂದ್ರ ಪೂಜೆ’ ಎಂದೂ ಕರೆಯಲಾಗಿದೆ. ತುಂಬು ಕಳಸದ ಮೇಲೆ ತೆಂಗಿನಕಾಯಿ ಇಟ್ಟು, ಅದಕ್ಕೆ ಕಣ– ಮಡಿ ಸೀರೆ ಏರಿಸಿದರು. ಮನೆಯಲ್ಲಿನ ಚಿನ್ನಾಭರಣಗಳನ್ನು ತೊಡಿಸಿದರು. ಹಣೆಬೊಟ್ಟು ಇಟ್ಟು, ಬಳೆ, ಚೈನು, ಕಾಲ್ಗೆಜ್ಜೆ, ಬೈತಲೆ, ಬೆಂಡೋಲೆ ಒಡವೆಗಳನ್ನು ಹಾಕಿ ಅಲಂಕರಿಸಿದರು.

ಮನೆ ಮಂದಿಯೆಲ್ಲ ಸೇರಿಕೊಂಡು ಸಂಭ್ರಮದಿಂದ ಪೂಜೆ ಮಾಡಿ, ಹಣತೆಗಳನ್ನು ಹಚ್ಚಿದರು. ರಾತ್ರಿಯಾಗುತ್ತಿದ್ದಂತೆ ಸುರಸುರ ಬತ್ತಿಗಳನ್ನು ಬೆಳಗಿಸಿ, ಮದ್ದಿನ ಕುಡಿಕೆಗಳಿಂದ ಬೆಳನ್ನು ಚಿಮ್ಮಿಸಿದರು. ಮಕ್ಕಳು, ಮಹಿಳೆಯರು, ಹಿರಿಯರು ಕೂಡ ಈ ಪಟಾಕಿ ಸಂಭ್ರಮದಲ್ಲಿ ಪಾಲ್ಗೊಂಡರು.‌‌‌

ADVERTISEMENT

ಗೃಹಿಣಿಯರಿಗಂತೂ ಮನೆಯಲ್ಲಿ ಇಡೀ ದಿನ ಬಿಡುವಿಲ್ಲದ ಕೆಲಸ. ಪುರುಷರು, ಮಕ್ಕಳು ಹೊಸ ಬಟ್ಟೆಗಳನ್ನು ಧರಿಸಿ ಹಬ್ಬದ ರಜೆಯ ಮಜಾ ಅನುಭವಿಸಿದರು. ಮಹಿಳೆಯರು ಅಡುಗೆ ಮನೆಯಲ್ಲಿ ಸ್ಪೆಷಲ್‌ ಖಾದ್ಯಗಳನ್ನು ಮಾಡಿ ಕುಟುಂಬದವರೆಲ್ಲ ಕುಳಿತು ಸವಿದರು.

ಧನಲಕ್ಷ್ಮಿಗೆ ಪ್ರಿಯವಾದ ಕರಿದ ತಿಂಡಿಗಳನ್ನು ಮಾಡುವುದು ಪೂಜೆಯ ವಿಶೇಷ. ಅದರಲ್ಲೂ ಅಮಾವಾಸ್ಯೆಯ ವಿಶೇಷ ಊಟವಾಗಿ ಹೋಳಿಗೆ, ಪೂರಿ, ಪಾಯಸ, ತುಪ್ಪ ಸವಿಯುವುದೇ ಸಂಭ್ರಮ. ಮತ್ತೆ ಕೆಲವರು ಕುಟುಂಬದ ಸಂತಸದ ಕ್ಷಣಗಳನ್ನು, ಮಳಿಗೆಗಳ ಪೂಜೆಯ ವೈಭವವನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸಿ, ತಮ್ಮ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳಲ್ಲಿ ಹಾಕಿಕೊಂಡರು. ಮೊಬೈಲ್‌ ಮೂಲಕ ಶುಭಾಶಯ ಕೋರುವ ಭರಾಟೆ ಭಾನುವಾರವೂ ಮುಂದುವಿರಿದಿತ್ತು.

ನ. 15ರಂದೇ ವಿಕ್ರಮ ಸಂವತ್ಸರ ಕೂಡ ಆರಂಭವಾಯಿತು. ಹೀಗಾಗಿ, ಈ ದಿನ ವರ್ತಕರು, ಉದ್ಯಮಿಗಳಿಗೆ ಅತ್ಯಂತ ಶ್ರೇಷ್ಠವಾದುದು. ವ್ಯಾಪಾರದ ಪ್ರತಿಯೊಂದು ವಸ್ತುವನ್ನೂ ಪೂಜೆ ಮಾಡುವುದು ಸಂಪ್ರದಾಯ.

ಇತ್ತ ಹಳ್ಳಿಗಳಲ್ಲಿ ಕೂಡ ‘ಕರಿ ಹರಿಯುವ ದಿನ’ ಆಚರಿಸಿದ ಬಳಿಕ ಬಿಸಿಬಿಸಿ ಹೋಳಿಗೆ– ಬೆಲ್ಲದ ಪಾಣಕ ಸವಿಯುವ ಸಂಭ್ರಮ ಮನೆ ಮಾಡಿತು.

ಇನ್ನೊಂದೆಡೆ, ನಗರದ ಮಾರುಕಟ್ಟೆಗಳಲ್ಲಿ ಭಾನುವಾರ ಕೂಡ ಭರ್ಜರಿ ವ್ಯಾಪಾರ ನಡೆಯಿತು. ಹಬ್ಬದ ಜತೆಗೆ, ರಜೆಯ ದಿನವೂ ಆಗಿದ್ದರಿಂದ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.