ಕಲಬುರಗಿ: ‘ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ (ಟಿಎಸ್‌ಪಿ)ಯ ಅನುದಾನ ಅನ್ಯ ಕಾರ್ಯಗಳಿಗೆ ಬಳಸಿದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಈ ಹಿಂದಿನ ಹಾಗೂ ಹಾಲಿ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ವಕೀಲ ಪೀರಪ್ಪ ಯಾತನೂರ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಅನುದಾನ ಅನ್ಯ ಕಾರ್ಯಕ್ಕೆ ಬಳಸುವ ಮೂಲಕ ಎಸ್.ಸಿ, ಎಸ್.ಟಿ ಸಮುದಾಯಗಳಿಗೆ ಅನ್ಯಾಯ ಮಾಡಿದ ಕುರಿತು ಸೆ.30ರಂದು ರಾಜ್ಯಪಾಲರಿಗೆ ದೂರು ನೀಡಲಾಗಿದೆ’ ಎಂದು ತಿಳಿಸಿದರು.
‘ಕಲಬುರಗಿ ನಗರದ ಜಯದೇವ ಹೃದ್ರೋಗ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ₹43.13 ಕೋಟಿ ನೀಡಲಾಗಿದೆ. ಯಾದಗಿರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಲಾಂಡ್ರಿ ಬ್ಲಾಕ್ ಹಾಗೂ ರೋಗಿಗಳ ಅಡುಗೆ ಮನೆ ನಿರ್ಮಾಣಕ್ಕೆ ₹1.34 ಕೋಟಿ ನೀಡಿದ್ದು, ಅದು ಪರಿಶಿಷ್ಟರ ಅನುದಾನವನ್ನೂ ಒಳಗೊಂಡಿದೆ’ ಎಂದು ಹೇಳಿದರು.
‘ವಡಗೇರಾ ತಾಲ್ಲೂಕಿನಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ₹88.16 ಲಕ್ಷ, ಬೀದರ್ ಜಿಲ್ಲೆಯಲ್ಲಿ 15 ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ₹1 ಕೋಟಿ, ಬೀದರ್ ಜಿಲ್ಲೆಯಲ್ಲಿ ರಸ್ತೆ ನಿರ್ಮಾಣಕ್ಕೆ ₹3.11 ಕೋಟಿ, ಕಮಲನಗರ ಪಟ್ಟಣದ 1.5 ಕಿ.ಮೀ ಭಾತಂಬ್ರಾ ರಾಜ್ಯ ಹೆದ್ದಾರಿ ನಿರ್ಮಾಣ ಹಾಗೂ ಚರಂಡಿ ಅಭಿವೃದ್ಧಿಗೆ ₹1.30 ಕೋಟಿ ನೀಡಲಾಗಿದೆ’ ಎಂದರು.
‘ಚಿತ್ತಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಹೈಮಾಸ್ಟ್ ದೀಪ ಅಳವಡಿಸಲು ₹2 ಕೋಟಿ, ವಿಜಯನಗರ ಜಿಲ್ಲೆಗೆ ಸೇರಿದ ವಿವಿಧ ಶಾಲಾ–ಕಾಲೇಜುಗಳಲ್ಲಿ ಸ್ಮಾರ್ಟ್ ಟಿವಿ ಅಳವಡಿಕೆ, ಸಂವಾದಾತ್ಮಕ ಗೋಡೆಗಳ ನಿರ್ಮಾಣ ಮತ್ತು ಸ್ಟೀಮ್ ಕಿಟ್‌ಗಳಿಗಾಗಿ ₹1.50 ಕೋಟಿ, ವಿಜಯನಗರ ಜಿಲ್ಲೆಯ ಹೋಬಳಿಗಳ ಗ್ರಂಥಾಲಯಗಳ ಉನ್ನತೀಕರಣಕ್ಕೆ ₹1 ಕೋಟಿ, ಹೂವಿನಹಡಗಲಿ ಎಂಜಿನಿಯರಿಂಗ್ ಕಾಲೇಜಿನ ಪ್ರಯೋಗಾಲಯ ನಿರ್ಮಾಣಕ್ಕೆ ₹21 ಲಕ್ಷ, ಯಲಬುರ್ಗಾ ತಾಲ್ಲೂಕಿನ ರಸ್ತೆ ನಿರ್ಮಾಣ ಹಾಗೂ ಸುಧಾರಣೆಗಾಗಿ ₹1.90 ಕೋಟಿ, ಬಳ್ಳಾರಿ ತಾಲ್ಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ ಪ್ರವಾಹ ತಡೆಗೋಡೆ, ಸೇತುವೆ, ರಿಟೇನಿಂಗ್ ವಾಲ್ ನಿರ್ಮಾಣಕ್ಕೆ ₹81 ಲಕ್ಷ ನೀಡಲಾಗಿದೆ’ ಎಂದು ಹೇಳಿದರು.
‘ಅಕ್ಷರ ಆವಿಷ್ಕಾರ ಯೋಜನೆಗೆ ಮಂಡಳಿಯು ₹652 ಕೋಟಿ ನೀಡಿದೆ. ಈ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದ ಕೆಲ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆ ಪೈಕಿ ಕೆಲ ಕಾಮಗಾರಿಗಳು ಕಾನೂನುಬಾಹಿರವಾಗಿವೆ. ಆದ್ದರಿಂದ ಈ ಮೇಲಿನ ಕಾಮಗಾರಿಗಳ ಕ್ರಿಯಾಯೋಜನೆ ರದ್ದು ಮಾಡಬೇಕು. ಇವುಗಳನ್ನು ಸಾಮಾನ್ಯ ಕಾಮಗಾರಿಗಳಾಗಿ ಪರಿವರ್ತಿಸಬೇಕು. ಅನುದಾನ ಮರಳಿ ಪಡೆಯಬೇಕು’ ಎಂದು ರಾಜ್ಯಪಾಲರಿಗೆ ಒತ್ತಾಯಿಸಲಾಗಿದೆ ಎಂದರು.
‘2021ರಿಂದ 2024ರವರೆಗೆ ಕೈಗೊಂಡ ಎಲ್ಲ ಕಾಮಗಾರಿಗಳ ಕುರಿತು ತನಿಖೆ ನಡೆಸಬೇಕು. ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ’ ಎಂದರು.
ವೀರೇಶ ಪಾಟೀಲ, ರಾಕೇಶ ಜಮಾದಾರ, ಈಶ್ವರ ಹಿಪ್ಪರಗಿ ಹಾಜರಿದ್ದರು.
‘ಪೊಲೀಸ್ ಮಹಾವಿದ್ಯಾಲಯಕ್ಕೂ ಪರಿಶಿಷ್ಟರ ಅನುದಾನ’
‘ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಒಳಪಡದ ಬೆಂಗಳೂರಿನ ಎಚ್.ಎಸ್.ಆರ್ ಲೇಔಟ್‌ನಲ್ಲಿ ವಸತಿ ನಿಲಯ ನಿರ್ಮಾಣಕ್ಕೆ ₹50 ಕೋಟಿ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಯ ಅನುದಾನವೂ ಸೇರಿದೆ. ಕಲಬುರಗಿಯ ನಾಗನಳ್ಳಿ ಪೊಲೀಸ್ ಮಹಾವಿದ್ಯಾಲಯದ ವಿವಿಧ ಕಾಮಗಾರಿಗಳಿಗೆ ₹30 ಲಕ್ಷ ನೀಡಲಾಗಿದೆ’ ಎಂದು ಪೀರಪ್ಪ ಯಾತನೂರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.