ADVERTISEMENT

ದೇವಲ ಗಾಣಗಾಪುರ ಅಭಿವೃದ್ಧಿಗೆ ಆಗ್ರಹ

ಅನಿರ್ದಿಷ್ಟಾವಧಿ ಧರಣಿ: ಮಠಾಧೀಶರ, ಅರ್ಚಕರ ಬೆಂಬಲ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2025, 16:21 IST
Last Updated 17 ಏಪ್ರಿಲ್ 2025, 16:21 IST
ಅಫಜಲಪುರ ತಾಲ್ಲೂಕಿನ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಪಡಿಸುವಂತೆ ಸಮಾಜಿಕ ಹೋರಾಟಗಾರ ಶಿವಕುಮಾರ ನಾಟೀಕಾರ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್‌ ಸಂಜು ಕುಮಾರ್ ದಾಸರ ಅವರಿಗೆ ನೀಡಲಾಯಿತು
ಅಫಜಲಪುರ ತಾಲ್ಲೂಕಿನ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಪಡಿಸುವಂತೆ ಸಮಾಜಿಕ ಹೋರಾಟಗಾರ ಶಿವಕುಮಾರ ನಾಟೀಕಾರ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್‌ ಸಂಜು ಕುಮಾರ್ ದಾಸರ ಅವರಿಗೆ ನೀಡಲಾಯಿತು   

ಅಫಜಲಪುರ: ತಾಲ್ಲೂಕಿನ ದೇವಲ ಗಾಣಗಾಪುರ ದತ್ತಾತ್ರೇಯ ದೇವಸ್ಥಾನವನ್ನು ಕಾಶಿ ವಿಶ್ವನಾಥ ದೇವಸ್ಥಾನದ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿ ಹೋರಾಟಗಾರ ಶಿವಕುಮಾರ ನಾಟೀಕಾರ ನೇತೃತ್ವದಲ್ಲಿ ಗುರುವಾರ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭವಾಯಿತು. ಧರಣಿಗೆ ವಿವಿಧ ಮಠಾಧೀಶರು ಬೆಂಬಲ ನೀಡಿದರು.

ದೇವಸ್ಥಾನದ ಎದುರು ನಡೆಯುತ್ತಿರುವ ಧರಣಿಯಲ್ಲಿ ಹೋರಾಟಗಾರ ಶಿವಕುಮಾರ ನಾಟೀಕಾರ ಮಾತನಾಡಿ, ‘ದತ್ತನ ನಿರ್ಗುಣ ಪಾದುಕೆಯ ದರ್ಶನಕ್ಕಾಗಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿದಂತೆ ಅನೇಕ ರಾಜ್ಯದಗಳ ಸಹಸ್ರಾರು ಭಕ್ತರು ಬಂದು ಹೋಗುತ್ತಾರೆ. ದೇವಸ್ಥಾನವು ಮಾತ್ರ ಅಭಿವೃದ್ಧಿಯಾಗುತ್ತಿಲ್ಲ. ಇದರಿಂದಾಗಿ ಭಕ್ತರು ಸಾಕಷ್ಟು ಸಮಸ್ಯೆ ಅನುಭವಿಸುವಂತಾಗಿದೆ. ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನವು ಕೇವಲ ಆದಾಯಕ್ಕೆ ಮಾತ್ರ ಎಂಬಂತಾಗಿದೆ. ಕೂಡಲೇ ಕ್ಷೇತ್ರದಲ್ಲಿ ವಾಹನ ಪಾರ್ಕಿಂಗ್, ಹೈಟೆಕ್ ಶೌಚಾಲಯ, ಶುದ್ಧ ಕುಡಿಯುವ ನೀರು, ಗುಣಮಟ್ಟದ ರಸ್ತೆ, ಸಿಸಿ ಟಿವಿ ವ್ಯವಸ್ಥೆ ಮಾಡಿಸಬೇಕು. ಸರ್ಕಾರ ₹ 200 ಕೋಟಿ ಅನುದಾನ ಮಂಜೂರು ಮಾಡಿ ಪ್ರವಾಸಿ ತಾಣವನ್ನಾಗಿಸುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.

‘ಸರ್ಕಾರ ಬದಲಾಗುತ್ತಾ ಹೋದರೂ ಗಾಣಗಾಪುರವನ್ನು ಯಾವುದೇ ಸರ್ಕಾರಗಳು ಅಭಿವೃದ್ಧಿ ಮಾಡಿಲ್ಲ. ಹಣ ಬಿಡುಗಡೆಯಾಗುತ್ತಲೇ ಇದೆ. ಆದರೆ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ’ ಎಂದರು.

ADVERTISEMENT

ಬಸವ ಸ್ವಾಮೀಜಿ, ಮುರುಳಾರಾಧ್ಯ ಶಿವಾಚಾರ್ಯರು, ಶಿವಾನಂದ ಸ್ವಾಮೀಜಿ, ಚನ್ನಶೇಖರ ಶಿವಾಚಾರ್ಯರು, ಮುಖಂಡರಾದ ಮಲ್ಲಿಕಾರ್ಜುನ ಸಿಂಗೆ, ರಾಜು ಉಕಲಿ, ಜಮೀಲ್ ಗೌಂಡಿ, ಮಾರುತಿ ಮೂರನೆತ್ತಿ, ತಿಪ್ಪಣ್ಣ ಚಿನ್ಮಳ್ಳಿ, ಖಾಜಾಸಾಬ ಚೌಗಡಿ, ದತ್ತು ಹೇರೂರ, ರಾಜೇಂದ್ರ ಸರದಾರ, ವಿಜಯ ವಡಗೇರಿ, ಭಾಗಪ್ಪ ವಡಗೇರಿ, ಸಿದ್ದು ಡಾಂಗೆ, ಅಂಬರೀಶ ಕಾಮನಕೇರಿ ಸೇರಿದಂತೆ ಅನೇಕ ಗಣ್ಯರು, ಸ್ವಾಮೀಜಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.