ADVERTISEMENT

ಮಹಾಗಾಂವ ತಾಲ್ಲೂಕು ರಚನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 13:55 IST
Last Updated 8 ಜನವರಿ 2021, 13:55 IST
ಸುಭಾಶ್ಚಂದ್ರ ಜಿ.ಖಪಾಟೆ
ಸುಭಾಶ್ಚಂದ್ರ ಜಿ.ಖಪಾಟೆ   

ಕಲಬುರ್ಗಿ: ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಮಹಾಗಾಂವ ಹೋಬಳಿ ಕೇಂದ್ರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಕರ್ನಾಟಕ ಪತ್ರಕರ್ತರ ಸಂಘದ ಉಪಾಧ್ಯಕ್ಷ ಸುಭಾಶ್ಚಂದ್ರ ಜಿ.ಖಪಾಟೆ ಒತ್ತಾಯಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮಹಾಗಾಂವಕ್ಕೆ ಭೇಟಿ ಕೊಟ್ಟಾಗ ತಾಲ್ಲೂಕು ಕೇಂದ್ರದ ಭರವಸೆ ಈಡೇರಿಸುವುದಾಗಿ ತಿಳಿಸಿದ್ದರು. ಆದರೆ ಇದುವರೆಗೂ ಅವರು ವಿಷಯದ ಕುರಿತು ಪ್ರಸ್ತಾಪ ಮಾಡಿಲ್ಲ. ಈಗ ಮುಖ್ಯಮಂತ್ರಿ ಸ್ಥಾನದಲ್ಲಿರುವ ಅವರು ಅಂದು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ನಿಜಾಮರ ಕಾಲದಲ್ಲಿ ಮಹಾಗಾಂವ ತಾಲ್ಲೂಕು ಕೇಂದ್ರವಾಗಿತ್ತು ಎನ್ನುವುದಕ್ಕೆ ದಾಖಲೆಗಳಿವೆ. ಮಹಾಗಾಂವನಲ್ಲಿ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಕೇಂದ್ರಗಳು, ರೈಲು ನಿಲ್ದಾಣ, ಸರ್ಕಾರಿ ಆಸ್ಪತ್ರೆ, ಸರ್ಕಾರಿ ಪಶುವೈದ್ಯಕೀಯ ಕಾಲೇಜು, ಗಂಡೋರಿ ನಾಲಾ ಯೋಜನೆಯ ಕಚೇರಿ ಕಟ್ಟಡಗಳು ಸೇರಿದಂತೆ ಹಲವಾರು ಸೌಲಭ್ಯಗಳಿವೆ. ತಾಲ್ಲೂಕು ಕೇಂದ್ರವಾಗುವ ಎಲ್ಲ ಅರ್ಹತೆ ಹೊಂದಿದ್ದರೂ ಸ್ಥಳೀಯ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಬೇಡಿಕೆ ಈಡೇರಿಲ್ಲ ಎಂದರು.

ADVERTISEMENT

10 ಗ್ರಾಮ ಪಂಚಾಯಿತಿಯ 60 ಹಳ್ಳಿಗಳನ್ನು ಸೇರಿಸಿ ಮಹಾಗಾಂವ ತಾಲ್ಲೂಕು ರಚನೆಗೆ ಸರ್ಕಾರ ಮುಂದಾಗಬೇಕು. ಒಂದು ವೇಳೆ ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಜ.21ರಿಂದ ಮಹಾಗಾಂವ ಗ್ರಾಮದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.