ADVERTISEMENT

ಕಲಬುರಗಿ | ಮಾರುಕಟ್ಟೆಯಲ್ಲಿ ಮಾವಿನ ದರ್ಬಾರ್: ಹಳದಿ ಸುಂದರಿಯ ಅಂದಕ್ಕೆ ಮನಸೋತ ಜನ

ಕಿರಣ ನಾಯ್ಕನೂರ
Published 27 ಏಪ್ರಿಲ್ 2025, 7:29 IST
Last Updated 27 ಏಪ್ರಿಲ್ 2025, 7:29 IST
ಕಲಬುರಗಿಯ ಸೂಪರ್‌ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿರುವ ವಿವಿಧ ತಳಿಯ ಮಾವು
ಕಲಬುರಗಿಯ ಸೂಪರ್‌ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿರುವ ವಿವಿಧ ತಳಿಯ ಮಾವು   

ಕಲಬುರಗಿ: ‘ಮೊದಲು ಆ ಹಣ್ಣಿನ ಆಕಾರ, ಅಂದ–ಚೆಂದ, ಬಣ್ಣ, ಅದರ ಸುವಾಸನೆ ಎಲ್ಲವನ್ನೂ ಆಸ್ವಾದಿಸು. ನಂತರ ಸಿಪ್ಪೆ, ಸಿಪ್ಪೆಯ ರುಚಿ, ಅದರ ತೆಳು ಅಥವಾ ದಪ್ಪ ಪದರ; ಹೀಗೆ ಒಂದೊಂದೇ ಭಾಗವನ್ನು ಸೇವಿಸುತ್ತಾ ಕೊನೆಗೆ ಅತಿ ಮುಖ್ಯವಾದ ಆ ಹಣ್ಣಿನ ತಿರುಳಿಗೆ ಬರುತ್ತೀಯ. ಅಲ್ಲಿ ಸೊಗಸಾದ ರಸಭರಿತ ಮಾವಿನ ರುಚಿ ಆಸ್ವಾದಿಸುತ್ತೀಯ. ಅದರಲ್ಲೇ ಸ್ವರ್ಗೀಯ ತೃಪ್ತಿ, ಆನಂದ ಇದೆ ಅಲ್ಲವೆ? ಹಾಗಾಗಿ ಹಣ್ಣು ತಿನ್ನುವುದಕ್ಕಿಂತ, ಅದರ ಈ ಎಲ್ಲ ಸ್ತರಗಳೂ ಸೇರಿ, ನಮ್ಮನ್ನು ಆ ಸ್ವರ್ಗೀಯ ಆನಂದಕ್ಕೆ ಕೊಂಡೊಯ್ಯಬೇಕು. ಆಗಲೇ ಅದಕ್ಕೊಂದು ಅರ್ಥ...’

ಮಾರುಕಟ್ಟೆಗಳ ತುಂಬ ಮಾವಿನ ಹಣ್ಣುಗಳೇ ತುಂಬಿರುವಾಗ, ಮೈ ತುಂಬಿಕೊಂಡಿರುವ ‘ಹಳದಿ ಸುಂದರಿ’ ಕೈ ಬೀಸಿ ಕರೆಯುವಾಗ ಚೀನಾ ದೇಶದ ನರ್ತಕ ಲೀಕುನ್‌ಕ್ಸಿನ್‌ ಅವರ ‘ಮಾವೋನ ಕೊನೆಯ ನರ್ತಕ’ ಆತ್ಮಕಥೆಯಲ್ಲಿನ ಮೇಲಿನ ಸಾಲುಗಳಲ್ಲಿರುವಂತೆ ರುಚಿ ನೋಡುವ ಮನಸಾಗದೇ ಇರದು.

ನಗರದ ಯಾವುದೇ ಮಾರುಕಟ್ಟೆ, ಮುಖ್ಯ ರಸ್ತೆಗೆ ಹೋದರೂ ಮಾವಿನ ಹಣ್ಣುಗಳೇ ಕಾಣುತ್ತವೆ. ಅಂಗಡಿಗಳ ಸಮೀಪ ಹಾಯ್ದರೂ ಸಾಕು, ಒಂದು ಸಾರಿ ಅರೆಗಣ್ಣಾಗಿ ಮೂಗೇರಿಸುವಂತೆ ಮಾಡುವ ವಾಸನೆ ಮಾವುನ್ನು ಖರೀದಿಸಿಯೇ ಮುಂದೆ ಹೋಗುವಂತೆ ಮಾಡುತ್ತದೆ. 

ADVERTISEMENT

ಹೆಚ್ಚು ಆವಕವಾಗುತ್ತಿರುವುದರಿಂದ ಇಷ್ಟು ದಿನ ಸೇಬು, ಪೇರಲ, ಕಲ್ಲಂಗಡಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳ ಅಂಗಡಿಗಳಲ್ಲಿ ಈಗ ಮಾವಿನ ಹಣ್ಣುಗಳೇ ಹೆಚ್ಚಾಗಿ ಕಾಣುತ್ತಿವೆ. ಅದರಲ್ಲೂ ತಾಜ್‌ ಸುಲ್ತಾನ್‌ಪುರ ಹಣ್ಣಿನ ಮಾರುಕಟ್ಟೆಯಲ್ಲಿ ಬಗೆಬಗೆಯ ಮಾವುಗಳೇ ತುಂಬಿರುತ್ತವೆ. ಎಸ್‌.ಬಿ ಟೆಂಪಲ್ ರಸ್ತೆ, ಆಳಂದ ರಸ್ತೆ, ರೈಲು ನಿಲ್ದಾಣ, ಬಸ್‌ ನಿಲ್ದಾಣ ರಸ್ತೆ, ಕಣ್ಣಿ ಮಾರುಕಟ್ಟೆ ಸೇರಿ ಪ್ರಮುಖ ರಸ್ತೆ, ವೃತ್ತಗಳಲ್ಲಿ ಮಾವಿನ ಹಣ್ಣುಗಳ ವ್ಯಾಪಾರ ಜೋರಾಗಿದೆ.

ಮಹಾರಾಷ್ಟ್ರದ ರತ್ನಗಿರಿ ಮತ್ತು ದೇವಗಡದ ಆಪೂಸ್ ತಳಿಯ ಹಣ್ಣುಗಳಿಗೆ ಬೇಡಿಕೆ ಹೆಚ್ಚಿದೆ. ಸಿಂಧೂರ, ಮಲ್ಲಿಕಾ, ಹಿಮಾಯತ್‌, ಮಲ್‌ಗೋವಾ ತಳಿಯ ಮಾವುಗಳಿದ್ದು ಇವುಗಳ ಬೆಲೆಯೂ ಹೆಚ್ಚೇ ಇದೆ. ರಸಪೂರಿ, ಬಾದಾಮಿ, ಮಲ್ಲಿಕಾ, ಕೇಸರಿ, ತೋತಾಪುರಿ, ದಶೇರಿ ಹಣ್ಣುಗಳು ಹೆಚ್ಚು ಮಾರಾಟವಾಗುತ್ತಿವೆ.

ಆಪೂಸ್ ಒಂದು ಬಾಕ್ಸ್‌ಗೆ (18 ಹಣ್ಣು) ₹600ರಿಂದ, ಕಲ್ಮಿ ಹಣ್ಣು ಕೆ.ಜಿಗೆ ₹120, ಸಿಂದೂರ ₹100 ಇದೆ. ಬಹುತೇಕ ಮಾವಿನ ಹಣ್ಣುಗಳ ಬೆಲೆ ಕಡಿಮೆ ಎಂದರೂ ₹100 ಮೇಲೆಯೇ ಇದೆ. ಕೆಲ ವ್ಯಾಪಾರಿಗಳು 100 ಲೆಕ್ಕದಲ್ಲೂ ಮಾರಾಟ ಮಾಡುತ್ತಿದ್ದಾರೆ.

ಜಿಲ್ಲೆಯ ಚಿಂಚೋಳಿಯಲ್ಲಿ ಹೆಚ್ಚು ಮಾವು ಬೆಳೆದರೂ ನಗರದ ಮಾರುಕಟ್ಟೆಗೆ ಹೈದರಾಬಾದ್‌, ಮಹಾರಾಷ್ಟ್ರದ ಉದಗೀರ್‌, ಲಾತೂರ್‌, ನಾಂದೇಡ್‌, ಪುಣೆ ಸುತ್ತಮುತ್ತಲಿನ ಪ್ರದೇಶಗಳಿಂದ ಹಣ್ಣುಗಳು ಬಂದಿವೆ.

ಕಳೆದ ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆ, ಬಿರುಗಾಳಿಯಿಂದ ಮಾವಿನ ಕಾಯಿಗಳು ಉದುರಿವೆ. ಇದರ ನೇರ ಪರಿಣಾಮ ಸಮಯ, ಪೂರೈಕೆ ಮತ್ತು ಬೆಲೆಯ ಮೇಲಾಗಿದೆ.

‘ಈ ವೇಳೆಗಾಗಲೇ ಕಾಯಿಗಳು ಮಾರುಕಟ್ಟೆಗೆ ಬರಬೇಕಿತ್ತು. ಮಳೆ, ಗಾಳಿಯ ಪರಿಣಾಮ ಮಾವಿನ ಕಾಯಿಗಳು ಉದುರಿದ್ದು ಮಾರುಕಟ್ಟೆಗೆ ನಿರೀಕ್ಷೆಯಷ್ಟು ಆವಕ ಬಂದಿಲ್ಲ. ದರವೂ ಹೆಚ್ಚಳವಾಗಿದೆ. ಮಾರುಕಟ್ಟೆಗೆ ಹಣ್ಣುಗಳ ಪೂರೈಕೆಯಾಗಲು ವರ್ಷಕ್ಕಿಂತ ವಿಳಂಬವಾಗಿದೆ’ ಎಂದು ವ್ಯಾಪಾರಿ ಸಿದ್ದವೀರಪ್ಪ ತಿಳಿಸಿದರು.

‘ಮಳೆ ಮತ್ತು ಗಾಳಿಯಿಂದ ಕಾಯಿಗಳು ಉದುರಿರುವ ಬಗ್ಗೆ ಮಾಹಿತಿ ಇದೆ. ನಮ್ಮ ಸಿಬ್ಬಂದಿ ಕ್ಷೇತ್ರಕಾರ್ಯದಲ್ಲಿ ತೊಡಗಿದ್ದು ಹಾನಿಯಾದ ಬಗ್ಗೆ ಇನ್ನೆರಡು ದಿನಗಳಲ್ಲಿ ಗೊತ್ತಾಗುತ್ತದೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಂತೋಷ ಇನಾಮದಾರ ತಿಳಿಸಿದರು.

ಕಲಬುರಗಿಯ ಸೂಪರ್‌ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿರುವ ವಿವಿಧ ತಳಿಯ ಮಾವು
ಇನ್ನೊಂದು ವಾರದಲ್ಲಿ ಹೆಚ್ಚು ಆವಕದ ನಿರೀಕ್ಷೆ ಇದೆ. ಬಹಳ ಕಾಯಿ/ ಹಣ್ಣುಗಳು ಬಂದರೆ ಬೆಲೆ ಇಳಿಕೆಯಾಗಬಹುದು. ಆಪುಸ್‌ಗೆ ಹೆಚ್ಚಿನ ಬೇಡಿಕೆ ಇದೆ
ಸಿರಾಜ್ ಮಾವಿನ ಹಣ್ಣುಗಳ ಸಗಟು ವ್ಯಾಪಾರಿ
ಚಿಂಚೋಳಿ ತಾಲ್ಲೂಕಿನಲ್ಲಿ ಬೆಳೆದ ಹಣ್ಣುಗಳು ಆಂಧ್ರ ತೆಂಲಗಾಣಕ್ಕೆ ಹೋಗುತ್ತವೆ. ಆಪೂಸ್‌ಗೆ ಹೆಚ್ಚು ಬೇಡಿಕೆಯಿದ್ದು ಧಾರವಾಡ ಬೆಳಗಾವಿಯಿಂದ ಹಣ್ಣುಗಳು ಬರುತ್ತವೆ
ಸಂತೋಷ ಇನಾಮದಾರ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ
ಚಿಂಚೋಳಿಯಲ್ಲೇ ಹೆಚ್ಚು
ಜಿಲ್ಲೆ ವ್ಯಾಪ್ತಿಯ ಒಟ್ಟು 400 ಹೆಕ್ಟೇರ್‌ ಪ್ರದೇಶದಲ್ಲಿ ಮಾವಿನ ಬೆಳೆ ಇದೆ. ಇದರಲ್ಲಿ 250 ಹೆಕ್ಟೇರ್‌ನಲ್ಲಿ ಇಳುವರಿ ಬರುತ್ತದೆ. ಚಿಂಚೋಳಿ ವ್ಯಾಪ್ತಿಯಲ್ಲೇ ಹೆಚ್ಚು ಮಾವಿನ ಬೆಳೆ ಇದೆ. ‘ಚಿಂಚೋಳಿ ಮುಕ್ತಂಪುರ ಪ್ರದೇಶದಲ್ಲಿ ಹೆಚ್ಚು ಮಾವು ಬೆಳೆಯಲಾಗಿದೆ. ಆಂಧ್ರದ ರೈತರು ಹೆಚ್ಚಿನ ಪ್ರದೇಶದಲ್ಲಿ ಮಾವಿನ ಕೃಷಿಯಲ್ಲಿ ತೊಡಗಿದ್ದಾರೆ. ಬಿಸಿಲಿನ ವಾತಾವರಣದಲ್ಲಿ ಕೇಸರಿ ತಳಿಯ ಮಾವು ಉತ್ತಮವಾಗಿ ಬೆಳೆಯುವುದರಿಂದ ನಾವು ಅದನ್ನೇ ಹೆಚ್ಚು ಪ್ರೋತ್ಸಾಹಿಸುತ್ತಿದ್ದೇವೆ. ಬಂಗನಪಲ್ಲಿ ತಳಿಯನ್ನೂ ಚಿಂಚೋಳಿ ಸೀಮೆಯಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ. ಆಂಧ್ರದ ಬೆಳೆಗಾರರು ಮತ್ತು ವ್ಯಾಪಾರಿಗಳ ಮಧ್ಯೆ ಮಾರುಕಟ್ಟೆ ಸರಳಿಪಳಿ ಇರುವುದರಿಂದ ನಮ್ಮ ಜಿಲ್ಲೆಯಲ್ಲಿ ಈ ಇಳುವರಿ ಮಾರಾಟಕ್ಕೆ ಬರುವುದಿಲ್ಲ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಂತೋಷ ಇನಾಮದಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.