ADVERTISEMENT

ಕಲಬುರಗಿ: ಹೊರಗುತ್ತಿಗೆ ನೌಕರರ ವೇತನ ಪಾವತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 15:22 IST
Last Updated 7 ಏಪ್ರಿಲ್ 2024, 15:22 IST
ಭೀಮಶೆಟ್ಟಿ ಯಂಪಳ್ಳಿ
ಭೀಮಶೆಟ್ಟಿ ಯಂಪಳ್ಳಿ   

ಕಲಬುರಗಿ: ‘ಜಿಲ್ಲೆಯ ಸಮಾಜ ಕಲ್ಯಾಣ, ಬಿಸಿಎಂ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಹಾಸ್ಟೆಲ್‌ ಮತ್ತು ವಸತಿ ಶಾಲೆಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ ಬಾಕಿ ವೇತನ ಪಾವತಿಸಬೇಕು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಆಗ್ರಹಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜ ಕಲ್ಯಾಣ ಇಲಾಖೆಯಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ 4–5 ತಿಂಗಳ ವೇತನ ಬಾಕಿ ಇದೆ. ಸರ್ಕಾರದಿಂದ ಇನ್ನೂ ₹3.64 ಕೋಟಿ ಅನುದಾನ ಬರಬೇಕಾಗಿದೆ. ಚಿಂಚೋಳಿ ತಾಲ್ಲೂಕಿನ ಒಂಟಿಚಿಂತಾ, ಪಾಲತ್ಯಾ ತಾಂಡಾ ಮತ್ತು ಚಿಂಚೋಳಿಯ ಆಶ್ರಮ ಶಾಲೆಗಳಲ್ಲಿನ ನೌಕರರಿಗೆ 18 ತಿಂಗಳಿಂದ ಸಂಬಳ ಕೊಟ್ಟಿಲ್ಲ. ಏಜೆನ್ಸಿಯು ಈ ಶಾಲೆಗಳ ₹33 ಲಕ್ಷ ಅನುದಾನ ಪಡೆದು ತಿಂಗಳಾದರೂ ವೇತನ ಪಾವತಿಸಿಲ್ಲ’ ಎಂದು ದೂರಿದರು.

‘ಸಮಾಜ ಕಲ್ಯಾಣ ಇಲಾಖೆ ನೌಕರರ ವೇತನ ಪಾವತಿಗೆ 2021ರಿಂದ ಮೈಸೂರಿನ ಶಾರ್ಪ್‌ ಎಂಬ ಮ್ಯಾನ್‌ಪವರ್‌ ಏಜೆನ್ಸಿಯು ಟೆಂಡರ್‌ ಪಡೆದಿದೆ. ಪ್ರತಿ ತಿಂಗಳು ನೌಕರರ ಹೆಸರಿಗೆ ಇಪಿಎಫ್ ಮತ್ತು ಇಎಸ್‌ಐ ಸರಿಯಾಗಿ ಪಾವತಿಸಿಲ್ಲ. ಅಲ್ಲದೆ, ಪ್ರತಿ ನೌಕರರಿಗೆ ತಿಂಗಳ ವೇತನದಲ್ಲಿ ₹1,000 ದಿಂದ ₹1,500 ಕಡಿಮೆ ಪಾವತಿಸುತ್ತಿದೆ. ಈ ಬಗ್ಗೆ ನೌಕರರು ಬ್ಯಾಂಕ್‌ ಸ್ಟೇಟ್‌ಮೆಂಟ್ ಸಮೇತ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಮತ್ತು ಕಾರ್ಮಿಕ ಇಲಾಖೆಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಪುನಃ ಇದೇ ಏಜೆನ್ಸಿಗೆ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ವಸತಿನಿಲಯಗಳ ಟೆಂಡರ್‌ ಮುಂದುವರಿಸಿರುವುದು ಖಂಡನೀಯ. ಕೂಡಲೇ ಈ ಏಜೆನ್ಸಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಕಪ್ಪು ಪಟ್ಟಿಗೆ ಸೇರಿಸಿ ನೌಕರರಿಗೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಬಿಸಿಎಂ ಇಲಾಖೆಯಲ್ಲಿಯೂ ಕೂಡ ನೌಕರರಿಗೆ 4–5 ತಿಂಗಳ ಬಾಕಿ ವೇತನ ಪಾವತಿಸಿಲ್ಲ. ಜಿಲ್ಲೆಯಲ್ಲಿ ಈ ನೌಕರರ ವೇತನಕ್ಕಾಗಿ ₹497.25 ಲಕ್ಷ ಅನುದಾನ ಬೇಕಾಗಿತ್ತು. ಆದರೆ, ಈಗ ₹44 ಲಕ್ಷ ಮಾತ್ರ ಅನುದಾನ ಬಂದಿದೆ. ಸರ್ಕಾರದಿಂದ ಇನ್ನೂ ₹453.25 ಲಕ್ಷ ಬರಬೇಕಾಗಿದೆ’ ಎಂದು ತಿಳಿಸಿದರು.

‘ಇನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನೌಕರರಿಗೆ 2–3 ತಿಂಗಳ ಬಾಕಿ ವೇತನ ಪಾವತಿಸಿಲ್ಲ. ₹1.34 ಕೋಟಿ ಅನುದಾನ ಬರಬೇಕಾಗಿದೆ. ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರು ಅತ್ಯಂತ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಗಮನ ಹರಿಸಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಬೇಕು. ಎಲ್ಲ ನೌಕರರ ಬಾಕಿ ವೇತನ ಪಾವತಿಗೆ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಉಪಾಧ್ಯಕ್ಷ ಮೇಘರಾಜ ಖಠಾರೆ, ಜಿಲ್ಲಾಧ್ಯಕ್ಷ ಪರಶುರಾಮ ಹಡಗಲಿ, ಜಿಲ್ಲಾ ಕಾರ್ಯದರ್ಶಿ ಕಾಶಿನಾಥ ಬಂಡಿ, ಮಾರುತಿ ಚವ್ಹಾಣ, ಲಲಿತಾಬಾಯಿ ಚವ್ಹಾಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.