ವಡಗೇರಾ: ತಾಲ್ಲೂಕಿನ ಕೋನಹಳ್ಳಿಯಿಂದ ರೋಟ್ನಡಗಿ ಕ್ರಾಸ್‌ವರೆಗಿನ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ವಾಹನ ಸವಾರರು ಹಾಗೂ ರೈತರು ದೂರಿದ್ದಾರೆ.
ರಸ್ತೆಯಲ್ಲಿ ದೊಡ್ಡಮಟ್ಟದ ಕಂದಕಗಳು ಬಿದ್ದಿವೆ. ಹಾಗೆಯೇ ರಸ್ತೆಗೆ ಹಾಕಿರುವ ಟಾರ್ ಕಿತ್ತು, ಜಲ್ಲಿ ಕಲ್ಲುಗಳು ರಸ್ತೆಯ ತುಂಬೆಲ್ಲ ಹರಡಿವೆ. ವಾಹನ ಸವಾರರು ಸ್ವಲ್ಪ ಮೈಮರೆತರೆ ವಾಹನದಿಂದ ಬಿದ್ದು ಕೈಕಾಲು ಮುರಿದುಕೊಳ್ಳುವದು ಗ್ಯಾರಂಟಿ ಎಂದು ಈ ರಸ್ತೆ ಪ್ರಯಾಣಿಕರು ದೂರುತ್ತಾರೆ.
ಕೇವಲ 9 ಕಿ.ಮೀ ಅಂತರವನ್ನು ಕ್ರಮಿಸಲು ವಾಹನಗಳು ಸುಮಾರು ಮುಕ್ಕಾಲು ಗಂಟೆ ಸಮಯ ತೆಗೆದುಕೊಳ್ಳುತ್ತವೆ. ಇದರಿಂದಾಗಿ ವಾಹನ ಸವಾರರು ಸಕಾಲದಲ್ಲಿ ತಮ್ಮ ಸ್ಥಳವನ್ನು ತಲುಪಲು ಆಗುತ್ತಿಲ್ಲ. ಹಾಗೆಯೇ ತುರ್ತು ಸಮಯದಲ್ಲಿ ರೋಗಿಗಳಿಗೆ, ಗರ್ಭಿಣಿಯರಿಗೆ ವಡಗೇರಾದಲ್ಲಿ ಇರುವ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದರೆ ಸಾಕಷ್ಟು ಸಮಸ್ಯೆಯಾಗುತ್ತಿದೆ.
ಇನ್ನು ರೈತರು ಬಂಡಿಯಲ್ಲಿ ಕೃಷಿ ಸಾಮಗ್ರಿಗಳನ್ನು ತೆಗೆದುಕೊಂಡು ಜಮೀನುಗಳಿಗೆ ತೆರಳಬೇಕಾದರೆ ಹರಸಾಹಸ ಪಡಬೇಕು ಎಂದು ರೈತರು ಹೇಳುತ್ತಾರೆ.
ಈ ರಸ್ತೆ ದುರಸ್ತಿ ಬಗ್ಗೆ ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.