ADVERTISEMENT

ಪರಿಹಾರ ಕೇಂದ್ರ ತೆರೆಯಲು ಆಗ್ರಹ

ಕೋಡ್ಲಿಯಿಂದ ಕಾಳಗಿ ತಹಶೀಲ್ದಾರ್ ಕಚೇರಿವರೆಗೆ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 1:04 IST
Last Updated 23 ಸೆಪ್ಟೆಂಬರ್ 2020, 1:04 IST
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕೋಡ್ಲಿಯಿಂದ ಕಾಳಗಿ ತಹಶೀಲ್ದಾರ್ ಕಚೇರಿವರೆಗೆ ಪ್ರಾಂತ ರೈತ ಸಂಘದ ಸದಸ್ಯರು ಪಾದಯಾತ್ರೆ ನಡೆಸಿದರು
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕೋಡ್ಲಿಯಿಂದ ಕಾಳಗಿ ತಹಶೀಲ್ದಾರ್ ಕಚೇರಿವರೆಗೆ ಪ್ರಾಂತ ರೈತ ಸಂಘದ ಸದಸ್ಯರು ಪಾದಯಾತ್ರೆ ನಡೆಸಿದರು   

ಕಾಳಗಿ: ಅತಿವೃಷ್ಟಿಯಿಂದ ನಿರಾಶ್ರಿತರಾಗಿರುವ ಜನರಿಗೆ ಕೂಡಲೇ ಸರ್ಕಾರ ಪರಿಹಾರ ಕೇಂದ್ರ ತೆರೆದು ನೆರವಿಗೆ ಬರಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಸೋಮವಾರ ಕೋಡ್ಲಿಯಿಂದ ಕಾಳಗಿ ತಹಶೀಲ್ದಾರ್ ಕಚೇರಿಯವರೆಗೆ ಪಾದಯಾತ್ರೆ ನಡೆಸಿತು.

ತಾಲ್ಲೂಕಿನಲ್ಲಿ ಧಾರಾಕಾರ ಮಳೆಯಿಂದ ರೈತರ ಹೊಲ ಕೊಚ್ಚಿಹೋಗಿ ಜಮೀನು ಹಾಳಾಗಿವೆ. ಹಳ್ಳಿಗಳಲ್ಲಿ ಮನೆಗಳು ಬಿದ್ದು ಬಡವರು ಒಪ್ಪತ್ತಿನ ಊಟಕ್ಕೂ ಪರದಾಡುವಂತಾಗಿದೆ.ಕಾಳಗಿ ತಾಲ್ಲೂಕನ್ನು ಅತಿವೃಷ್ಟಿ, ಪ್ರವಾಹ ಪೀಡಿತ ಪ್ರದೇಶವೆಂದು ಘೋಷಿಸಬೇಕು. ಉದ್ದು, ಹೆಸರು ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿದರು.

ಅಲ್ಲಾಪುರ ಕೆರೆ ನೀರಿನಿಂದ ರೈತರ ಜಮೀನುಗಳಿಗೆ ನೀರುಣಿಸಲು ಅದರ ಮುಖ್ಯ ಕಾಲುವೆ, ಕಿರು ಕಾಲುವೆ, ಎಡ ಮತ್ತು ಬಲದಂಡೆ ಕಾಲುವೆಗಳನ್ನು ದುರಸ್ತಿ ಮಾಡಿಸಬೇಕು, ವಿವಿಧ ಮಾಸಾಶನಗಳನ್ನು ತಕ್ಷಣ ಬಿಡುಗಡೆ ಮಾಡಬೇಕು, ರೈತರ ಸಾಲ ಮನ್ನಾ ಮಾಡಬೇಕು ಎಂದು ಘೋಷಣೆ ಕೂಗುತ್ತ ತಹಶೀಲ್ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಬೇಡಿಕೆಗಳು ಈಡೇರಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ADVERTISEMENT

ಬಳಿಕ ಗ್ರೇಡ್-2 ತಹಶೀಲ್ದಾರ್ ಶಾಂತಗೌಡ ಬಿರಾದಾರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಮುಖಂಡ ಗುರುನಂದೇಶ ಕೋಣಿನ, ದೇವಿಂದ್ರಪ್ಪ ಪಾಟೀಲ, ಶಬ್ಬೀರಮಿಯಾ, ಗೌರಿಶಂಕರ ಕಿಣ್ಣಿ, ಸಂತೋಷಕುಮಾರ ಹೊಸಳ್ಳಿ, ರಾಮಚಂದ್ರ ಹೊಸಳ್ಳಿ, ಯೋಗೇಶ ಹೆಬ್ಬಾಳ, ಮಲ್ಲು ಚಿಕ್ಕ ಅಗಸಿ, ಆಕಾಶ ಸಾಲಿಮಠ, ವೀರೇಶ ಸಾಲಿಮಠ, ಅಲ್ಲಾ ಪಟೇಲ ಮೊಘಾ, ಇಸ್ಮಾಯಿಲ್, ಶ್ರಾವಣಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.