
ಅಫಜಲಪುರ: ತಾಲ್ಲೂಕಿನ ಶಿರವಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ ಎನ್. ಅವರು ಶಾಲೆಯಲ್ಲಿ ಕಳೆದ ಹಲವಾರು ತಿಂಗಳಿಂದ ಉದ್ದೇಶ ಪೂರ್ವಕವಾಗಿ ವಿರೂಪಗೊಂಡ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರ ಹಾಕಿದ್ದಾರೆ. ಜತೆಗೆ ಮಕ್ಕಳಿಗೆ ದೊರೆಯಬೇಕಾದ ಮೊಟ್ಟೆ, ಬಾಳೆಹಣ್ಣು, ಶೇಗಾ ಚಕ್ಕೆ ವಿತರಿಸಿಲ್ಲ ಹಾಗೂ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡದೆ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಗ್ರಾಮದ ಮುಖಂಡರಾದ ವಿಠ್ಠಲ ಸಿಂಗೆ, ಸೈಬಣ್ಣ ಜಮಾದಾರ ಆರೋಪಿಸಿದರು.
ಮುಖ್ಯ ಶಿಕ್ಷಕಿ ವಿರುದ್ಧ ದಾಖಲೆ ಸಮೇತ ಶುಕ್ರವಾರ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಅಮಾನತುಗೊಳಿಸಲು ಮನವಿ ಸಲ್ಲಿಸಿದ್ದಾರೆ.
ಬಳಿಕ ಮಾತನಾಡಿದ ಅವರು, ಹಲವು ತಿಂಗಳಿಂದ ಅಕ್ರಮವಾಗಿ ಶಾಲೆ ಬಿಡುವುದು, ಮತ್ತೆ ಬಂದು ಹಾಜರಿ ಪುಸ್ತಕದಲ್ಲಿ ಶಾಲೆ ಬಿಟ್ಟ ದಿನಗಳ ಸಹಿ ಮಾಡುವುದು, ಆದೇಶವಿಲ್ಲದಿದ್ದರೂ ಹಾಜರಿ ಪುಸ್ತಕದಲ್ಲಿ ಅನ್ಯಕಾರ್ಯ ನಿಮಿತ್ತ(ಒಡಿ) ಅಂತ ನಮೂದಿಸಿ ಶಾಲೆಗೆ ಗೈರಾಗುವುದು. ಅಲ್ಲದೆ ಮಕ್ಕಳಿಗೆ ಮೊಟ್ಟೆ, ಬಾಳೆ ಹಣ್ಣು ವಿತರಿಸದೆ ಹಣವನ್ನು ಎತ್ತಿ ಹಾಕಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಷಯ ಬೋಧನೆ ಮಾಡದೆ ಕಾಲ ಹರಣ ಮಾಡಿ, ಮಕ್ಕಳ ಶಿಕ್ಷಣದ ಗುಣಮಟ್ಟ ಕುಸಿಯುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ಷಪಡಿಸಿದರು.
ಅಂಬೇಡ್ಕರ ಭಾವಚಿತ್ರಕ್ಕೆ ಅವಮಾನಗೊಳಿಸಿದರೂ ಈವರೆಗೂ ಯಾವೊಬ್ಬ ಅಧಿಕಾರಿಗೂ ಶಾಲೆಗೆ ಭೇಟಿ ನೀಡಿಲ್ಲ. ಪ್ರಭಾರ ಮುಖ್ಯ ಶಿಕ್ಷಕಿಯನ್ನು ಶೀಘ್ರವಾಗಿ ಅಮಾನತುಗೊಳಿಸದಿದ್ದರೆ, ಶಾಲೆಗೆ ಬೀಗಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮಹಾಂತೇಶ ಬಳೂಂಡಗಿ, ಬಸವರಾಜ ಲಾಳಸಂಗಿ, ಶ್ರೀಶೈಲ ಸಿಂಗೆ, ಧರೇಶ ಅಂಜುಟಗಿ, ಸೈಬಣ್ಣ ಜಮಾದಾರ, ಪದ್ಮಾಕರ ಕುಲಕರ್ಣಿ ಮತ್ತಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.