ಕಮಲಾಪುರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದ ನಿಮಿತ್ತ ಸೆ.15ರಂದು ಬೆಳಿಗ್ಗೆ 8.30ಕ್ಕೆ ತಾಲ್ಲೂಕಿನಲ್ಲಿ 28 ಕಿ.ಮೀ ಮಾನವ ಸರಪಳಿ ನಿರ್ಮಿಸಲಾಗುವುದು ಎಂದು ತಹಶೀಲ್ದಾರ್ ಮೋಸಿನ್ ಅಹಮ್ಮದ್ ತಿಳಿಸಿದರು.
ಈ ಕುರಿತು ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಸರ್ಕಾರದ ಆದೇಶದಂತೆ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತಿದೆ. 12 ನೇ ಶತಮಾನದಲ್ಲಿ ಶರಣರು ಬಸವಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿ ಮೊದಲ ಬಾರಿಗೆ ಸಂಸತ್ತು, ಪ್ರಜಾಪ್ರಭುತ್ವದ ಮಾದರಿಯನ್ನು ವಿಶ್ವಕ್ಕೆ ಪರಿಚಯಿಸಿದರು. ಹೀಗಾಗಿ ಬಸವಕಲ್ಯಾಣದ ಅನುಭವ ಮಂಟಪದಿಂದ ಚಾಮರಾಜನಗರದವರೆಗೆ ಬೆಳಿಗ್ಗೆ 8.30ಕ್ಕೆ ಏಕಕಾಲಕ್ಕೆ ಮಾನವ ಸರಪಳಿ ನಿರ್ಮಿಸಲಾಗುವುದು. 9ಕ್ಕೆ ಡ್ರೋನ್ ಮೂಲಕ ಚಿತ್ರೀಕರಿಸಲಾಗುವುದು. 9.15ಕ್ಕೆ ಸಂವಿಧಾನ ಪೀಠಿಕೆ ಪಠಣ, 9.30ಕ್ಕೆ ಜೈ ಭಾರತ, ಜೈ ಕರ್ನಾಟಕ ಘೋಷಣೆ ಮೂಲಕ ಮುಕ್ತಾಯಗೊಳ್ಳಲಿದೆ. ಕಮಲಾಪುರದಲ್ಲಿ ಕಿಣ್ಣಿ ಸಡಕ್‌ನಿಂದ ಕಗ್ಗನಮರಡಿ ಕ್ರಾಸ್‌ವರೆಗೆ ರಾಷ್ಟ್ರೀಯ ಹೆದ್ದಾರಿಗುಂಟ ಸುಮಾರು 50 ಸಾವಿರ ಜನರಿಂದ ಈ ಮಾನವ ಸರಪಳಿ ರಚನೆ ಮಾಡಲಾಗುವುದು ಎಂದರು.
ಶಾಲೆ ಮಕ್ಕಳು, ಎಲ್ಲ ಇಲಾಖೆ ಸಿಬ್ಬಂಧಿಗಳು, ಸಾರ್ವಜನಿಕರು ಭಾಗವಹಿಸಲಿದ್ದಾರೆ. ಪ್ರತಿ ಕಿ.ಮೀ ಒಬ್ಬ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ನೇಮಿಸಿದ್ದೇವೆ. 6 ಕಿ.ಮೀ ಸೆಕ್ಟರ್ ಅಧಿಕಾರಿ, ನೋಡಲ್ ಅಧಿಕಾರಿ ನೇಮಿಸಿದ್ದೇವೆ. ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ಎಲ್ಲ ಇಲಾಖೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ’ ಎಂದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಾಂತಪ್ಪ ಹಾದಿಮನಿ, ಉಪತಹಶೀಲ್ದಾರ್ ಶಿವಕುಮಾರ ಶಾಬಾ, ಪಿಎಸ್‌ಐ ಸಂಗೀತಾ ಸಿಂಧೆ, ಆಶಾ ರಾಠೋಡ, ಅನುಜಕುಮಾರ, ರಘುನಂದನ ದ್ಯಾಮಣಿ, ಮಂಜುನಾಥ ಬಿರಾದಾರ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.