ADVERTISEMENT

ದೇವರ ದಾಸಿಮಯ್ಯ ಮೂರ್ತಿ ಪ್ರತಿಪ್ಠಾಪನೆ ಇಂದು

500ಕ್ಕೂ ಹೆಚ್ಚು ಮಹಿಳೆಯರಿಂದ ಕುಂಭ ಕಳಸದೊಂದಿಗೆ ಸಾರೋಟನಲ್ಲಿ ಮೂರ್ತಿಯ ಭವ್ಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 7:07 IST
Last Updated 11 ಏಪ್ರಿಲ್ 2019, 7:07 IST
ಕಮಲಾಪುರದಲ್ಲಿ ಬುಧವಾರ ದಾಸಿಮಯ್ಯ ಮೂರ್ತಿ ಮೆರವಣಿಗೆಯಲ್ಲಿ ಕುಂಭ ಕಳಸ ಹೊತ್ತು ಸಾಗಿದ ಮಹಿಳೆಯರು (ಎಡಚಿತ್ರ). ದೇವರ ದಾಸಿಮಯ್ಯನವರ ಮೂರ್ತಿ
ಕಮಲಾಪುರದಲ್ಲಿ ಬುಧವಾರ ದಾಸಿಮಯ್ಯ ಮೂರ್ತಿ ಮೆರವಣಿಗೆಯಲ್ಲಿ ಕುಂಭ ಕಳಸ ಹೊತ್ತು ಸಾಗಿದ ಮಹಿಳೆಯರು (ಎಡಚಿತ್ರ). ದೇವರ ದಾಸಿಮಯ್ಯನವರ ಮೂರ್ತಿ   

ಕಮಲಾಪುರ (ಕಲಬುರ್ಗಿ): ನಗರದಲ್ಲಿ ಜೀರ್ಣೋದ್ಧಾರಗೊಳಿಸಿರುವ ಪುರಾತನ ದೇವರ ದಾಸಿಮಯ್ಯ ದೇವಸ್ಥಾನದಲ್ಲಿ ಇಂದು (ಗುರುವಾರ) ಪ್ರತಿಷ್ಠಾಪನೆ ಗೊಳ್ಳಲಿರುವ ಮೂರ್ತಿಯ ಭವ್ಯ ಮೆರವಣಿಗೆ ಬುಧವಾರ ನಡೆಯಿತು.

ಸಂಗಮರಮರಿ ಕಲ್ಲಿನಲ್ಲಿ ಕೆತ್ತಿದ ಸುಂದರ ಮೂರ್ತಿಯನ್ನು ಸಾರೋಟಿನಲ್ಲಿಟ್ಟು ಬಸ್‌ ನಿಲ್ದಾಣದಿಂದ ದೇವರ ದಾಸಿಮಯ್ಯ ದೇವಾಲಯದವರೆಗೆ ಮೆರವಣಿಗೆ ಮಾಡಲಾಯಿತು. ಡೊಳ್ಳು, ಬಾಜಾ ಭಜಂತ್ರಿಯೊಂದಿಗೆ ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಕುಂಭ ಕಳಸ ಹೊತ್ತು ಮೆರವಣಿಗೆಯಲ್ಲಿ ಸಾಗಿದರು.

ನೇಕಾರ ಸಮಾಜದ ಬಾಂಧವರು ದೇವರ ದಾಸಿಮಯ್ಯ ದೇವಸ್ಥಾನವನ್ನು ಪುನರುಜ್ಜೀವನಗೊಳಿಸಿ ಕಳೆದ ವರ್ಷ ಗೋಪುರ ನಿರ್ಮಿಸಿ ಕಳಸಾರೋಹಣ ನೆರವೇರಿಸಿದ್ದರು. ಗುರುವಾರ ಬೆಳಿಗ್ಗೆ 9ಕ್ಕೆ ದಾಸಿಮಯ್ಯನವರ ಮೂರ್ತಿಗೆ ಹಾರಕೂಡ ಚನ್ನವೀರ ಶಿವಾಚಾರ್ಯ, ಬಬಲಾದ ಗುರುಪಾದಲಿಂಗ ಶಿವ ಯೋಗಿಗಳು ಪ್ರಾಣ ಪ್ರತಿಷ್ಠಾಪನೆ ಮಾಡುವರು. ಸಂಜೆ 5ಕ್ಕೆ ಪಲ್ಲಕ್ಕಿ ಉತ್ಸವ, ರಾತ್ರಿ 11ಕ್ಕೆ ಅಗ್ನಿ ಪ್ರವೇಶ, ರಥೋತ್ಸವ ಜರುಗಲಿದೆ.

ADVERTISEMENT

ಇತಿಹಾಸ: 11ನೇ ಶತಮಾನದಲ್ಲಿ ದಾಸಿಮಯ್ಯನವರು ಶ್ರೀಶೈಲಕ್ಕೆ ತೆರಳಿ ಚಂದ್ರಗುಂಡ ಶಿವಾಚಾರ್ಯರಿಂದ ಗುರುದೀಕ್ಷೆ ಪಡೆದರು. ಅಲ್ಲಿಂದ ಮರಳುವಾಗ ಪೊಟ್ಟಲಕೇರಾ (ಹೈದರಾಬಾದ್‌ ಸಮೀಪದ ಇಂದಿನ ಪಟಾನ್‌ಚೋರ್‌) ಪಟ್ಟಣದಲ್ಲಿ ಜೈನ ರಾಜ ಜೈಸಿಂಹ ಹಾಗೂ ದಾಸಿಮಯ್ಯ ನಡುವೆ ಧರ್ಮ ಸೂಕ್ಷ್ಮ ಕುರಿತು ಚರ್ಚೆ ನಡೆಯಿತು. ಚರ್ಚೆಯಲ್ಲಿ ಸೋತ ರಾಜ ಜಾಯಸಿಂಹ ಹಾಗೂ ರಾಣಿ ಸುಗ್ಗಲದೇವಿ ಹಾಗೂ ಅಲ್ಲಿನ ಜೈನ ಮುನಿಗಳು ದಾಸಿಮಯ್ಯನವರಿಂದ ಲಿಂಗದೀಕ್ಷೆ ಪಡೆದರು.

ಅಲ್ಲಿಂದ ಮುಂದೆ ಸಾಗಿ ಕೆಲವು ಆದಿವಾಸಿ ಸಮುದಾಯಗಳಿಗೆ ದೀಕ್ಷೆ ನೀಡಿದರು. ನಂತರ ಬಸವಕಲ್ಯಾಣ ತಾಲ್ಲೂಕಿನ ಬೋರಾಳ ಹಾಗೂ ಕಲಬುರ್ಗಿ ತಾಲ್ಲೂಕಿನ ಕಮಲಾಪುರದ ಜೈನರಿಗೂ ಲಿಂಗದೀಕ್ಷೆ ನೀಡಿ ಈ ಮಾರ್ಗವಾಗಿ ಮುದನೂರಕ್ಕೆ ಹೋಗಿದ್ದರು. ಆ ಸಮಯದಲ್ಲಿ ಕಮಲಾ ಪುರದಲ್ಲಿ ದಾಸಿಮಯ್ಯನವರು ಒಂದು ದಿನ ತಂಗಿದ್ದರು. ಅದೇ ಸ್ಥಳದಲ್ಲಿ ನಮ್ಮ ಪೂರ್ವಜರು ಲಿಂಗ ಸ್ಥಾಪಿಸಿ ದಾಸಿಮಯ್ಯನವರ ದೇವಾಲಯ ಕಟ್ಟಿದರು. ಇದು ಅಂದಿನ ಕುರುಹಾಗಿದೆ ಎಂದು ನಿವೃತ್ತ ಶಿಕ್ಷಕ ದಾಸಿಮಯ್ಯ ಗಣಮುಖಿ
ವಿವರಿಸಿದರು.

‘ಮೂಲತಃ ಜೈನರ ನೆಲೆವೀಡಾದ ಕಮಲಾಪುರಲ್ಲಿ ಇಂದು ಲಿಂಗಾಯತರು, ಜೇಡರು, ಮುಸ್ಲಿಮರು, ಮರಾಠರು ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ. ಜೈನ ಧರ್ಮ ಕ್ಷೀಣಿಸುತ್ತಿದ್ದಂತೆ ಅವರ ಅವಶೇಷಗಳು ಶೈವ ಪರಂಪರೆಗೆ ತಿರುಗಿದವು. ಜೈನ ದೇವಾಲಯಗಳು ಶೈವ ಮಂದಿರಗಳಾದವು, ಬಸದಿಗಳು ಮಠಗಳಾಗಿ ಪರಿವರ್ತನೆಯಾದವು.

ಹಾಗೆಯೇ ಅನೇಕ ಜೈನ ಕುಟುಂಬಗಳು ಶೈವ ಪರಂಪರೆಗೆ ಮತಾಂತರವಾದವು. ದಾಸಿಮಯ್ಯ ನವರ ಅನುಯಾಯಿಗಳಾದ ಕೆಲವು ಕುಟುಂಬಗಳು ನೇಯ್ಗೆ ಕಾಯಕ ಆರಂಭಿಸಿದರು. ನೇಯ್ಗೆ ವೃತ್ತಿಯೊಂದಿಗೆ ಜೇಡರ ಸಮುದಾಯ ಬೆಳೆಯುತ್ತಾ ಬಂದು ಇಂದು ಸುಮಾರು 500 ಕುಟುಂಬಗಳು ಕಮಲಾಪುರದಲ್ಲಿವೆ. ದಿನ ಕಳೆದಂತೆ ನೇಕಾರಿಕೆ ವೃತ್ತಿ ಕ್ಷೀಣಿಸುತ್ತಾ ಬಂದಿದೆ ಎಂದು ಅವರು ಹೇಳಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಶಂಕರರಾವ ಬೇನೂರ, ಮುಖಂಡ ರಾದ ಗುರುಪಾದಪ್ಪ ಕಶೆಟ್ಟಿ, ಪುಂಡಲೀಕರಾವ ಚಿರಡೆ, ದಾಸಿಮಯ್ಯ ವಡ್ಡಣಕೇರಿ, ಸಿದ್ದಪ್ಪ ಮಾಗಾ, ಸಂಗಪ್ಪ ಮರಕುಂದಿ, ಸಂತೋಷ ಮಾಗಾ, ಚಂದ್ರಶೇಖರ ಗೌಡಗೋಳ, ಶೇಖರ್‌ ಮಾಗಾ, ಗುರುಪಾದಪ್ಪ ರಾಜೇಶ್ವರ, ರಾಜಶೇಖರ ಕಚೇರಿ, ನಾಗರಾಜ ಹುಂಚಿಗಿಡ, ಘಂಟೆಪ್ಪ ನಾಗೂರ, ಬಂಡಪ್ಪ ಬೇನೂರ, ಶಿವಪುತ್ರಪ್ಪ ಡಾವರಗಾಂವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.