ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಡಿ.ದೇವರಾಜ ಅರಸು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಎಡಿಸಿ ರಾಯಪ್ಪ ಹುಣಸಗಿ, ಚಂದ್ರಿಕಾ ಪರಮೇಶ್ವರ, ಸೋಮಶೇಖರ ವೈ. ಸೇರಿದಂತೆ ಹಲವರು ಭಾಗವಹಿಸಿದ್ದರು
ಕಲಬುರಗಿ: ‘ಡಿ.ದೇವರಾಜ ಅರಸು ಮೌನವಾಗಿ ಸಾಮಾಜಿಕ ಕ್ರಾಂತಿ ನಡೆಸಿದ ನಾಯಕ’ ಎಂದು ಜಿ.ಪಂ ಸಿಇಒ ಭಂವರ್‌ಸಿಂಗ್ ಮೀನಾ ಬಣ್ಣಿಸಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಜಂಟಿಯಾಗಿ ಬುಧವಾರ ಆಯೋಜಿಸಿದ್ದ ಡಿ.ದೇವರಾಜ ಅರಸು 110ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘1970ರ ದಶಕದಲ್ಲೇ ಅರಸು ಅವರು ಉಳುವವನೇ ಭೂಮಿಯ ಒಡೆಯ, ಪರಿಶಿಷ್ಟರ ದೌರ್ಜನ್ಯ ತಡೆ ಕಾಯ್ದೆ, ಹಾಸ್ಟೆಲ್‌ಗಳ ಸ್ಥಾಪನೆಯಂತಹ ಕ್ರಾಂತಿಕಾರಕ ನಿರ್ಧಾರಗಳನ್ನು ಕೈಗೊಂಡರು. ಸಂವಿಧಾನದಲ್ಲಿ ಹೇಳಲಾದ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಆಡಳಿತ ವ್ಯವಸ್ಥೆಯಲ್ಲಿ ಶಿಸ್ತುಬದ್ಧವಾಗಿ ಸಾಕಾರಗೊಳಿಸಿದರು. ಅವರ ಕೊಡುಗೆಯ ಫಲವಾಗಿ ಹಿಂದುಳಿದ ವರ್ಗಗಳ ಜನರು ಸುಧಾರಣೆ ಕಾಣುತ್ತಿದ್ದಾರೆ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮಾತನಾಡಿ, ‘ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಯಾಗಿದ್ದರೆ ಅದಕ್ಕೆ ಕಾರಣ ಅರಸು. ಅವರು ಸ್ಥಾಪಿಸಿದ ಹಾಸ್ಟೆಲ್‌ಗಳ ಫಲವಾಗಿ ನಾನೂ ಸೇರಿದಂತೆ ಹಲವರು ಇಂದು ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಗಿದೆ’ ಎಂದರು.
‘ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ನಾವು ಬಡವರು, ಇಂಗ್ಲಿಷ್ ಬರಲ್ಲ ಎಂಬೆಲ್ಲ ಹಿಂಜರಿಕೆ ಬಿಡಬೇಕು. ಉನ್ನತ ಶಿಕ್ಷಣ, ಉನ್ನತ ಹುದ್ದೆ ಪಡೆಯಲು ಸತತ ಶ್ರಮಹಾಕಿದರೆ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳು ಕಠಿಣ ಪ್ರಯತ್ನಪಟ್ಟರೆ ಪ್ರತಿಫಲ ಸಿಕ್ಕೇ ಸಿಗುತ್ತದೆ. ಯಾವುದೇ ಪರೀಕ್ಷೆ, ಹುದ್ದೆ ಪ್ರಯತ್ನದಿಂದಲೇ ಒಲಿಯುತ್ತದೆ’ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ ಮಾತನಾಡಿ, ‘ಅರಸು ದೊಡ್ಡ ನಾಯಕ. ಅನೇಕ ಜನಪರ ಕೆಲಸಗಳಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡವರು. ಹಿಂದುಳಿದವರ, ಬಡವರ ಕಲ್ಯಾಣಕ್ಕೆ ಅರಸು ಹಾಕಿಕೊಟ್ಟ ಮಾರ್ಗದಲ್ಲಿ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಗುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಮೂಲಕ ಜನಪರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದಾರೆ’ ಎಂದರು.
‘ಅರಸು ಅವರು ಹಿಂದುಳಿದ ವರ್ಗಗಳ ಜನರ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದ್ದರು. ನಾವೆಲ್ಲರೂ ಮಕ್ಕಳಿಗೆ ಶಿಕ್ಷಣ ಕೊಡಿಸುವ ಜೊತೆಗೆ ಅವರಿಗೆ ಸಂಸ್ಕಾರವನ್ನೂ ನೀಡಬೇಕಿದೆ’ ಎಂದರು.
ದೇವರಾಜ ಅರಸು ಅವರ ಕುರಿತು ಸಂಪನ್ಮೂಲ ವ್ಯಕ್ತಿ ಬಿ.ಎಂ.ರಾವೂರ್ ಉಪನ್ಯಾಸ ನೀಡಿದರು. ವಿವಿಧ ಸಮುದಾಯಗಳ ಮುಖಂಡರು ಹಾಜರಿದ್ದರು. ವಸತಿ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ವೀರಶೈವ ಕಲ್ಯಾಣ ಮಂಟಪದ ತನಕ ಅರಸು ಭಾವಚಿತ್ರವನ್ನು ಕಲಾತಂಡದೊಂದಿಗೆ ಅದ್ದೂರಿ ಯಾಗಿ ಮೆರವಣಿಗೆ ನಡೆಸಲಾಯಿತು. ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿ.ಪಂ.ಸಿಇಒ ಭಂವರ್‌ಸಿಂಗ್ ಮೀನಾ ಡೊಳ್ಳು ಬಾರಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸ್ನಾತಕೋತ್ತರ ಪದವಿಯ ಐವರು, ಪದವಿಯ ಇಬ್ಬರು, ಪಿಯುಸಿಯ ಮೂವರು, ಎಸ್‌ಎಸ್ಎಲ್‌ಸಿಯ ಐವರು ವಿದ್ಯಾರ್ಥಿಗಳನ್ನು ಶಾಲು ಹೊದಿಸಿ, ಸ್ಮರಣಿಕೆ, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಭಾಷಣ, ಪ್ರಬಂಧ ಹಾಗೂ ರಸಪ್ರಶ್ನೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಮೆಟ್ರಿಕ್ ಪೂರ್ವ ವಸತಿನಿಲಯಗಳು, ಮೆಟ್ರಿಕ್ ನಂತರದ ವಸತಿ ನಿಲಯಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಸ್ನಾತಕೋತ್ತರ ವಸತಿ ನಿಲಯಗಳ ಒಟ್ಟು 29 ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.