ಕಲಬುರಗಿ: ‘ಅನ್ಯ ಸಮಾಜದವರು ಗುರುತಿಸಿ, ಹುಡುಕಿಕೊಂಡು ಬಂದು ಸನ್ಮಾನ ಮಾಡುವಂತಹ ಸಾಧನೆ ಮಾಡಬೇಕು’ ಎಂದು ಮಹಾನಗರ ಪಾಲಿಕೆ ಮೇಯರ್ ವಿಶಾಲ್ ದರ್ಗಿ ಹೇಳಿದರು.
ಇಲ್ಲಿನ ಕಲಾ ಮಂಡಲದಲ್ಲಿ ಶನಿವಾರ ಕರ್ನಾಟಕ ಸಮತಾ ಸೈನಿಕ ದಳದ ಕಲಬುರಗಿ ವಿಭಾಗ ಮತ್ತು ಜಿಲ್ಲಾ ಸಮಿತಿ ವತಿಯಿಂದ ನಡೆದ 67ನೇ ಧಮ್ಮ ಚಕ್ರ ಪರಿವರ್ತನ ದಿನ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ಸಮಾಜದ ಸಾಧಕರನ್ನು ನಾವೇ ಗುರುತಿಸಿ ಸನ್ಮಾನ ಮಾಡಲಾಗುತ್ತಿದೆ. ಅನ್ಯ ಸಮಾಜದವರೂ ನಮ್ಮನ್ನು ಗುರುತಿಸಿ ಗೌರವಿಸುವಂತೆ ಆಗಬೇಕು’ ಎಂದರು.
‘ಬಹುಸಂಖ್ಯೆಯಲ್ಲಿ ಇರುವ ನಮ್ಮ ಸಮಾಜದವರು ರಸ್ತೆ ಬದಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಂತಹ ಪರಿಸ್ಥಿತಿ ಇದೆ. ನಮ್ಮದೆಯಾದ ಸಮುದಾಯ ಭವನಗಳು ಇಲ್ಲ. ಹೀಗಾಗಿ, ಸಮಾಜದ ಹಿರಿಯರೆಲ್ಲರೂ ಒಗ್ಗೂಡಿ ಪಾಲಿಕೆಗೆ ಮನವಿ ಪತ್ರ ಕೊಟ್ಟರೆ ಗ್ರ್ಯಾಂಡ್ ಹೋಟೆಲ್ ಮುಂಭಾಗದ ಖಾಲಿ ಸ್ಥಳದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.
ಕೋಡ್ಲಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ರಾಜಶೇಖರ ಮಾಂಗ ಮಾತನಾಡಿ, ‘ಶೋಷಿತ ಸಮುದಾಯದ ಮಹಿಳೆಯರು ಮೂಢನಂಬಿಕೆಗಳಿಂದ ಹೊರ ಬಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಧಮ್ಮದ ಹಾದಿಯಲ್ಲಿ ನಡೆಯಬೇಕು. ಮಕ್ಕಳಿಗೆ ಶಿಕ್ಷಣ ನೀಡಿ, ವ್ಯಕ್ತಿತ್ವ ವಿಕಸನಕ್ಕೆ ಶ್ರಮಿಸಬೇಕು’ ಎಂದು ಸಲಹೆ ನೀಡಿದರು.
‘ಬೌದ್ಧ ಧಮ್ಮದಲ್ಲಿ ವೈಜ್ಞಾನಿಕ, ವೈಚಾರಿಕ, ಸಮಾನತೆ ಇರುವುದರಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರು ಅದನ್ನು ಸ್ವೀಕರಿಸಿದರು. ಆಳವಾದ ಅಧ್ಯಯನ, ಪಾಂಡಿತ್ಯದಿಂದ ಸಂವಿಧಾನ ನೀಡುವ ಮೂಲಕ ಶೋಷಿತ ಸಮುದಾಯವನ್ನು ಮೇಲೆತ್ತಲು ಅವಿರತವಾಗಿ ಶ್ರಮಿಸಿದರು’ ಎಂದರು.
ಸಾಹಿತಿ ಧರ್ಮಣ್ಣ ಧನ್ನಿ ಮಾತನಾಡಿ, ‘ಅಂಬೇಡ್ಕರ್ ಅವರು ನಾಗಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಐದು ಲಕ್ಷ ಅನುಯಾಯಿಗಳ ಜತೆಗೆ ಭೌದ್ಧ ಧರ್ಮ ಸ್ವೀಕರಿಸಿದರು. ಹೀಗಾಗಿ, ಈ ದಿನವನ್ನು ನಾವು ಧಮ್ಮ ಚಕ್ರ ಪರಿವರ್ತನ ದಿನವನ್ನಾಗಿ ಆಚರಿಸುತ್ತಿದ್ದೇವೆ’ ಎಂದು ಹೇಳಿದರು.
ವಿವಿಧ ಕ್ಷೇತ್ರಗಳ 22 ಸಾಧಕರಿಗೆ ‘ಸಮತಾ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ಬೀದರ್‌ನ ಧಮ್ಮ ದೀಪ ಭಂತೇಜಿ ಸಾನ್ನಿಧ್ಯ ವಹಿಸಿದ್ದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭೀಮರಾಯ ಕಣ್ಣೂರ, ಗುಲಬರ್ಗಾ ವಿ.ವಿ ಸಿಂಡಿಕೇಟ್‌ನ ಮಾಜಿ ಸದಸ್ಯ ಸುನಿಲಕುಮಾರ ಒಂಟಿ, ವಿಭಾಗದ ಅಧ್ಯಕ್ಷ ಸಂಜೀವ ಟಿ.ಮಾಲೆ, ಪ್ರಧಾನ ಕಾರ್ಯದರ್ಶಿ ಜೈಶಂಕರ ಕೊಪ್ಪಳ, ಜಿಲ್ಲಾಧ್ಯಕ್ಷ ಶಂಕರ ಫೀರಂಗೆ, ಕಾರ್ಮಿಕ ಮುಖಂಡ ವಿಠ್ಠಲ ಎಚ್.ವಾಲೀಕಾರ, ಕಲಾವಿದ ಎಂ.ಎನ್. ಸುಗಂಧಿ, ಮುಖಂಡರಾದ ಈರಣ್ಣ ಜಾನೆ, ಶಿವಪುತ್ರ ಸಿಂಗೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.