ADVERTISEMENT

ಧರ್ಮಸ್ಥಳ ಪ್ರಕರಣ ಸಿಐಬಿ ತನಿಖೆಗೆ ವಹಿಸಿ: ರಾಜಕುಮಾರ ಪಾಟೀಲ ತೇಲ್ಕೂರ್

ಧರ್ಮಸ್ಥಳ ಅಭಿಮಾನಿಗಳ ವೇದಿಕೆ ನೇತೃತ್ವದಲ್ಲಿ ನೂರಾರು ಮಂದಿಯಿಂದ ಬೃಹತ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 6:02 IST
Last Updated 14 ಆಗಸ್ಟ್ 2025, 6:02 IST
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರು ಧರ್ಮಸ್ಥಳ ಅಭಿಮಾನಿಗಳ ವೇದಿಕೆಯಿಂದ ಪ್ರತಿಭಟಿಸಲಾಯಿತು
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರು ಧರ್ಮಸ್ಥಳ ಅಭಿಮಾನಿಗಳ ವೇದಿಕೆಯಿಂದ ಪ್ರತಿಭಟಿಸಲಾಯಿತು   

ಕಲಬುರಗಿ: ‘ಸುಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಅವರ ಕುಟುಂಬದ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯಿಂದ ನಗರದಲ್ಲಿ ಬುಧವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

‘ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರೀಶ ಮಟ್ಟಣ್ಣನವರ ಸೇರಿದಂತೆ ಐವರು ವೀರೇಂದ್ರ ಹೆಗ್ಗಡೆ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಧರ್ಮಸ್ಥಳ ಕ್ಷೇತ್ರ ಹಾಗೂ ಹೆಗ್ಗಡೆ ಕುಟುಂಬದ ಗೌರವಕ್ಕೆ ಚ್ಯುತಿ ತರುತ್ತಿದ್ದಾರೆ. ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಲಾಯಿತು.

ನಗರದ ಜಗತ್ ವೃತ್ತದಲ್ಲಿ ಬೆಳಿಗ್ಗೆ 11 ಗಂಟೆ ಹೊತ್ತಿಗೆ ಬಿಜೆಪಿ ಹಾಗೂ ವಿವಿಧ ಸಂಘಟನೆಗಳ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಜಮಾಯಿಸಿದರು. ಅಲ್ಲಿಂದ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತ ಜಿಲ್ಲಾಧಿಕಾರಿ ಕಚೇರಿ ತನಕ ಮೆರವಣಿಗೆ ನಡೆಸಿದರು.

ADVERTISEMENT

‘ಜನಾಗ್ರಹ’ ಬ್ಯಾನರ್‌ನಡಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ‘ಅಸತ್ಯ ಅಳಿಯಲಿ, ಧರ್ಮಸ್ಥಳ ಉಳಿಯಲಿ’, ‘ಅಂಕುಶ ಇಲ್ಲದ ಯೂಟೂಬರ್‌ಗಳಿಗೆ ಕಡಿವಾಣ ಹಾಕಲೇಬೇಕು’, ‘ಧರ್ಮಸ್ಥಳ ರಕ್ಷಣೆ ನಮ್ಮ ಹೊಣೆ’, ‘ಧರ್ಮೋ ರಕ್ಷತಿ‌ ರಕ್ಷತಃ’, ಸಮಾಜ ಘಾತುಕ ಶಕ್ತಿಗಳಿಗೆ ಧಿಕ್ಕಾರ’, ‘ಸತ್ಯಮೇವ ಜಯತೆ’, ‘ನಮ್ಮ ಪೂಜ್ಯರು ನಮ್ಮ ಹೆಮ್ಮೆ’ ಮತ್ತಿತ್ತರ ಭಿತ್ತಿ ಫಲಕ ಹಿಡಿದು ನೂರಾರು ಜನರು ಸಾಗಿ ಬಂದರು. ಮೆರವಣಿಗೆಯು ಜಗತ್‌ ವೃತ್ತದಿಂದ ಅನ್ನಪೂರ್ಣ ಕ್ರಾಸ್‌, ಲಾಹೋಟಿ ಪೆಟ್ರೋಲ್ ಬಂಕ್‌ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು.

ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆ ಸಂಚಾರ ತಡೆದು ಪ್ರತಿಭಟಿಸಲಾಯಿತು. ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ರಾಜಕುಮಾರ ಪಾಟೀಲ ತೇಲ್ಕೂರ್, ‘ಧರ್ಮಸ್ಥಳ ಪ್ರಕರಣದ ಹಿಂದೆ ಕಾಣದ ಕೈಗಳಿವೆ. ಧರ್ಮ ಅಳಿಸುವ ಕೆಲಸ ಷಡ್ಯಂತ್ರವಿದೆ. ಅಲ್ಲಿನ ಜಿಲ್ಲಾಧಿಕಾರಿ, ಪೊಲೀಸ್‌ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಕಾಂಗ್ರೆಸ್‌ ನಾಯಕರ ಕುಮ್ಮಕ್ಕಿದ್ದು, ಅದರಿಂದಲೇ ಎಸ್‌ಐಟಿ ರಚನೆಯಾಗಿದೆ. ಎಸ್‌ಐಟಿಯಿಂದ ಈ ಪ್ರಕರಣದಲ್ಲಿ ನ್ಯಾಯ ಸಿಗುವ ವಿಶ್ವಾಸವಿಲ್ಲ. ಕೂಡಲೇ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಆಗ್ರಹಿಸಿದರು.

ಸಾಮಾಜಿಕ ಹೋರಾಟಗಾರ ಸಿದ್ರಾಮಯ್ಯ ಹಿರೇಮಠ ಸೇರಿದಂತೆ ಹಲವರು ಮಾತನಾಡಿದರು. ಬಳಿಕ ಮುಖ್ಯಮಂತ್ರಿ ಅವರಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ದತ್ತಾತ್ರೇಯ ಪಾಟೀಲ ರೇವೂರ, ಮುಖಂಡರಾದ ನಾಗಲಿಂಗಯ್ಯ ಮಠಪತಿ, ಅನಿಲಕುಮಾರ ಡಾಂಗೆ, ಸದಾನಂದ ಪೆರ್ಲ, ಸಿ.ಎನ್‌.ಬಾಬಳಗಾಂವ, ಲಕ್ಷ್ಮೀಕಾಂತ ಸ್ವಾದಿ, ಮಲ್ಲಿಕಾರ್ಜುನ ಸಾರವಾಡ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

‘ವಿಧಾನಸೌಧದಲ್ಲೂ ಗುಂಡಿ ಅಗೆಯುತ್ತೀರಾ?’

ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ರಾಜಕುಮಾರ್‌ ಪಾಟೀಲ ತೇಲ್ಕೂರ ‘ಅನಾಮಿಕ ದೂರುದಾರನಿಗೆ ಒದ್ದು ಮಂಪರು ಪರೀಕ್ಷೆಗೆ ಒಳಪಡಿಸಿ ಸರ್ಕಾರ ಸತ್ಯ ಹೊರಗೆಳೆಯಬೇಕಿತ್ತು. ಅನಾಮಿಕ ತೋರಿಸಿದಂತೆ 13–14 ಕಡೆ ಸರ್ಕಾರ ಗುಂಡಿ ತೋಡುತ್ತಿದೆ. ವಿಧಾನಸೌಧದ ಕೆಳಗೆ ಹೈಕೋರ್ಟ್‌ ಕೆಳಗೂ ಹೆಣ ಹೂತಿದ್ದೇನೆ ಎಂದು ಅನಾಮಿಕ ಹೇಳಿದರೆ ಸಿದ್ದರಾಮಯ್ಯನವರೇ ಅಲ್ಲಿಯೂ ಗುಂಡಿ ಅಗೆಸುತ್ತೀರಾ?’ ಎಂದು ಪ್ರಶ್ನಿಸಿದರು.

ಸುಳ್ಳು ಸುದ್ದಿ ಹರಡುವವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳದಿದ್ದರೆ ನಾವೇ ಹೋರಾಟದ ಮೂಲಕ ಅವರ ಬಾಯಿ ಮುಚ್ಚಿಸಬೇಕಾಗುತ್ತದೆ.
-ನಿತಿನ್‌ ಗುತ್ತೇದಾರ, ಬಿಜೆಪಿ ಮುಖಂಡ
ಧರ್ಮಸ್ಥಳ ಪ್ರಕರಣದ ಕುರಿತು ಶಾಸಕರು ಸಚಿವರು ಅಧಿವೇಶನದಲ್ಲಿ ಚರ್ಚಿಸಬೇಕು. ಇಲ್ಲದಿದ್ದರೆ ಮುಂದೆ ಕ್ಷೇತ್ರಗಳಿಗೆ ಬಂದಾಗ ಜನಪ್ರತಿನಿಧಿಗಳಿಗೆ ಧರ್ಮಸ್ಥಳದ ಅಭಿಮಾನಿಗಳು ಕಪ್ಪುಬಟ್ಟೆ ಪ್ರದರ್ಶಿಸಲಿದ್ದಾರೆ.
-ದಿವ್ಯಾ ಹಾಗರಗಿ, ಬಿಜೆಪಿ ನಾಯಕಿ
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸುಕುಧಾರಿಯನ್ನು ಮೊದಲು ಸಮಗ್ರ ತನಿಖೆಗೆ ಒಳಪಡಿಸಬೇಕು. ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಬೇಕು.
-ರವಿ ಬಿರಾದಾರ, ಲಿಂಗಾಯತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.