ADVERTISEMENT

50 ವರ್ಷಗಳ ಗೆಳೆತನ ಮರೆಯಲಾಗದು: ಧರ್ಮಸಿಂಗ್ ಜೊತೆಗಿನ ಒಡನಾಟ ನೆನಪಿಸಿಕೊಂಡ ಖರ್ಗೆ

ಎನ್. ಧರ್ಮಸಿಂಗ್ ಜನ್ಮ ದಿನಾಚರಣೆ; ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 12:53 IST
Last Updated 25 ಡಿಸೆಂಬರ್ 2018, 12:53 IST
ದಿ. ಎನ್.ಧರ್ಮಸಿಂಗ್ ಅವರ 82ನೇ ಜನ್ಮ ದಿನಾಚರಣೆ ಅಂಗವಾಗಿ ಅವರ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು
ದಿ. ಎನ್.ಧರ್ಮಸಿಂಗ್ ಅವರ 82ನೇ ಜನ್ಮ ದಿನಾಚರಣೆ ಅಂಗವಾಗಿ ಅವರ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು   

ಕಲಬುರ್ಗಿ: ‘ನನ್ನ ಹಾಗೂ ದಿ. ಎನ್.ಧರ್ಮಸಿಂಗ್ ಅವರ 50 ವರ್ಷಗಳ ಗೆಳೆತನವನ್ನು ಮರೆಯಲಾಗದು. 50 ವರ್ಷಗಳ ಒಡನಾಟದ ಪ್ರತಿಯೊಂದು ಕ್ಷಣಗಳೂ ಇಂದಿಗೂ ನೆನಪಿವೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿ. ಎನ್.ಧರ್ಮಸಿಂಗ್ ಅವರ 82ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಧರ್ಮಸಿಂಗ್ ನಮ್ಮನ್ನು ಅಗಲಿದ್ದಾರೆ ಎಂದು ನನಗೆ ಅನಿಸಿಲ್ಲ. ಅವರು ಜೀವಂತ ಇದ್ದಾರೆ ಎಂಬ ಭಾವನೆ ನನ್ನದು. ಅವರು ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದರು. ಕಾಂಗ್ರೆಸ್‌ನ ತತ್ವ–ಸಿದ್ಧಾಂತ ಮತ್ತು ಇಂದಿರಾಗಾಂಧಿ ಅವರ ಜನಪರ ಕಾರ್ಯಕ್ರಮಗಳಿಂದಾಗಿ ನಾವಿಬ್ಬರೂ 1969ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದೆವು. ನಿರಂತರ 50 ವರ್ಷ ಕೆಲಸ ಮಾಡಿದೆವು’ ಎಂದು ಹೇಳಿದರು.

ADVERTISEMENT

‘ಸಮ್ಮಿಶ್ರ ಸರ್ಕಾರವನ್ನು ಹೇಗೆ ನಡೆಸಿಕೊಂಡು ಹೋಗಬೇಕು ಎಂಬುದನ್ನು ಧರ್ಮಸಿಂಗ್ ಅವರಿಂದ ಕಲಿಯಬೇಕು. ಈಗಿನ ಸಮ್ಮಿಶ್ರ ಸರ್ಕಾರ ಹೇಗೆ ನಡೆದಿದೆ, ಎಷ್ಟೊಂದು ತೊಂದರೆಗಳು ಬರುತ್ತಿವೆ ಎಂಬುದನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳುವುದನ್ನು ನೀವು ಕೇಳಿರಬಹುದು. ಆದಾಗ್ಯೂ, ಕುಮಾರಸ್ವಾಮಿ ಅವರು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ನಮ್ಮ ಪಕ್ಷದ ಯೋಜನೆಗಳನ್ನೂ ಅನುಷ್ಠಾನಗೊಳಿಸುತ್ತಿದ್ದಾರೆ’ ಎಂದು ತಿಳಿಸಿದರು.

ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ ಮಾತನಾಡಿ, ‘ಧರ್ಮಸಿಂಗ್ ಅವರು ಕಲಬುರ್ಗಿಯಷ್ಟೇ ಬೀದರ್ ಜಿಲ್ಲೆಯೊಂದಿಗೂ ನಂಟು ಹೊಂದಿದ್ದರು. ಅವರು ಹಗಲು–ರಾತ್ರಿ ಕೆಲಸ ಮಾಡುತ್ತಿದ್ದರು. ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದರು’ ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ‘ಧರ್ಮಸಿಂಗ್ ಅವರು ಬಡವರು, ಶೋಷಿತರು, ರೈತರ ಪರ ಕಾಳಜಿ ಉಳ್ಳವರಾಗಿದ್ದರು. ಈ ಭಾಗದ ಜನರ ಮನಸ್ಸಿನಲ್ಲಿ ಅವರು ಇಂದಿಗೂ ನೆಲೆಸಿದ್ದಾರೆ. ಖರ್ಗೆ ಮತ್ತು ಧರ್ಮಸಿಂಗ್ ಇಬ್ಬರ ಹೋರಾಟದ ಫಲವಾಗಿ 371 (ಜೆ) ಕಾಯ್ದೆ ಜಾರಿಗೆ ಬಂದಿದೆ. ಇದರಿಂದ ಈ ಭಾಗದ ವಿದ್ಯಾರ್ಥಿಗಳು, ಯುವಕರಿಗೆ ಸಾಕಷ್ಟು ಅನುಕೂಲವಾಗಿದೆ’ ಎಂದರು.

ಶಾಸಕ ಎಂ.ವೈ.ಪಾಟೀಲ ಮಾತನಾಡಿ, ಧರ್ಮಸಿಂಗ್–ಖರ್ಗೆ ಒಂದೇ ನಾಣ್ಯದ ಎರಡು ಹಾಗೂ ಶುಭ ನುಡಿಯುವ ಶಕುನದ ಹಕ್ಕಿಗಳಿದ್ದಂತೆ ಇದ್ದರು. ಆದರೆ, ಒಂದು ಹಕ್ಕಿ ಹಾರಿ ಹೋಗಿದ್ದು, ಇನ್ನೊಂದು ಹಕ್ಕಿಯ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಪ್ರಿಯಾಂಕ್ ಖರ್ಗೆ ಹಾಗೂ ಡಾ. ಅಜಯಸಿಂಗ್ ಇವರಿಬ್ಬರೂ ಕೂಡ ಒಟ್ಟಿಗೆ ಹೋಗಬೇಕು, ಅಭಿವೃದ್ಧಿ ಕೆಲಸಗಳನ್ನು ಒಟ್ಟಿಗೆ ಮಾಡಬೇಕು’ ಎಂದು ಆಶಿಸಿದರು.

ಕಾಂಗ್ರೆಸ್ ಮುಖಂಡ ಬಿ.ಆರ್.ಪಾಟೀಲ ಮಾತನಾಡಿ, ‘ಧರ್ಮಸಿಂಗ್ ಅವರು ನಡೆದು ಬಂದ ದಾರಿ, ಮಾಡಿದ ಸಾಧನೆಯನ್ನು ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳಬೇಕು. ಅವರ ಆದರ್ಶದ ಹಾದಿಯಲ್ಲಿ ಎಲ್ಲರೂ ಮುಂದೆ ಹೋಗಬೇಕು’ ಎಂದು ತಿಳಿಸಿದರು.

ಶಾಸಕರಾದ ಇಕ್ಬಾಲ್ ಅಹಮ್ಮದ್ ಸರಡಗಿ, ಡಾ. ಉಮೇಶ ಜಾಧವ, ಚಂದ್ರಶೇಖರ ಪಾಟೀಲ, ಅರವಿಂದ ಅರಳಿ, ಕನ್ನೀಜ್ ಫಾತಿಮಾ, ಬಿ.ನಾರಾಯಣರಾವ, ಶರಣಪ್ಪ ಮಟ್ಟೂರ, ಧರ್ಮಸಿಂಗ್ ಅವರ ಪತ್ನಿ ಪ್ರಭಾವತಿ, ಪುತ್ರರು ಹಾಗೂ ಶಾಸಕರಾದ ಡಾ. ಅಜಯಸಿಂಗ್, ವಿಜಯಸಿಂಗ್, ಮೇಯರ್ ಮಲ್ಲಮ್ಮ ವಳಕೇರಿ, ಪಾಲಿಕೆ ಸದಸ್ಯ ಶರಣಕುಮಾರ ಮೋದಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಡಾ. ಶರಣಪ್ರಕಾಶ ಪಾಟೀಲ, ರೇವೂನಾಯಕ ಬೆಳಮಗಿ, ಅಲ್ಲಮಪ್ರಭು ಪಾಟೀಲ, ಪ್ರೊ.ನರಸಿಂಹಪ್ಪ, ಡಾ. ಭೀಮಾಶಂಕರ ಬಿಲಗುಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.