ADVERTISEMENT

ಎಂಎಸ್‌ಪಿ ನೋಂದಣಿಗೆ ನಿರಾಸಕ್ತಿ!: ತೊಗರಿ ಖರೀದಿ ಕೇಂದ್ರಗಳತ್ತ ಬಾರದ ರೈತರು

ಮಲ್ಲಿಕಾರ್ಜುನ ನಾಲವಾರ
Published 13 ಮಾರ್ಚ್ 2025, 7:18 IST
Last Updated 13 ಮಾರ್ಚ್ 2025, 7:18 IST
ಆಳಂದ ತಾಲ್ಲೂಕಿನಲ್ಲಿನ ಬೆಂಬಲ ಬೆಲೆ ತೊಗರಿ ಖರೀದಿ ಕೇಂದ್ರ
ಆಳಂದ ತಾಲ್ಲೂಕಿನಲ್ಲಿನ ಬೆಂಬಲ ಬೆಲೆ ತೊಗರಿ ಖರೀದಿ ಕೇಂದ್ರ   

ಕಲಬುರಗಿ: ಕನಿಷ್ಠ ಬೆಂಬಲ ಬೆಲೆ ಯೋಜನೆ (ಎಂಎಸ್‌ಪಿ) ಮೂಲಕ ರೈತರಿಂದ ತೊಗರಿ ಖರೀದಿಗೆ ಜಿಲ್ಲೆಯಲ್ಲಿ 196 ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದರೂ ರೈತರಿಂದ ನೋಂದಣಿ ಮತ್ತು ಮಾರಾಟಕ್ಕೆ ನಿರಾಸಕ್ತಿ ವ್ಯಕ್ತವಾಗಿದೆ.

ಪ್ರಸಕ್ತ ವರ್ಷದಲ್ಲಿ 5.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದ್ದು, ಸುಮಾರು 50 ಲಕ್ಷ ಕ್ವಿಂಟಲ್ ಇಳುವರಿ ಬಂದಿದೆ. ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಗೆ 65 ಹಾಗೂ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಗೆ 131 ಖರೀದಿ ಕೇಂದ್ರಗಳನ್ನು ಹಂಚಿಕೆ ಮಾಡಲಾಗಿದೆ. 

ಒಂದು ಕ್ವಿಂಟಲ್‌ಗೆ ₹7,550 ಬೆಂಬಲ ಬೆಲೆ ಹಾಗೂ ₹ 450 ರಾಜ್ಯ ಸರ್ಕಾರದ ಪ್ರೋತಾಹ ಧನ ಸೇರಿ ₹ 8,000 ನಿಗದಿ ಮಾಡಿ, ನೋಂದಣಿಗೆ ಮಾರ್ಚ್ 18ರವರೆಗೆ ಮತ್ತು ಮಾರಾಟಕ್ಕೆ ಏಪ್ರಿಲ್ 2ರವರೆಗೆ ಅವಕಾಶ ನೀಡಿದ್ದರೂ ರೈತರು ಆಸಕ್ತಿ ತೋರುತ್ತಿಲ್ಲ.

ADVERTISEMENT

‘ಇದುವರೆಗೂ ಜಿಲ್ಲೆಯ ಖರೀದಿ ಕೇಂದ್ರಗಳಲ್ಲಿ 15,403 ರೈತರು ನೋಂದಣಿ ಮಾಡಿಕೊಂಡಿದ್ದು, ಅವರಲ್ಲಿ 1,223 ರೈತರು ಮಾತ್ರ 18,128 ಕ್ವಿಂಟಲ್ ತೊಗರಿ ಮಾರಿದ್ದಾರೆ. ಅವರಲ್ಲಿ ಬಹುತೇಕ ರೈತರು ಜೇವರ್ಗಿ ಮತ್ತು ಆಳಂದ ತಾಲ್ಲೂಕಿನವರೇ ಇದ್ದಾರೆ’ ಎಂದು ಎಪಿಎಂಸಿ ಕಾರ್ಯದರ್ಶಿ ಸಂತೋಷ್ ಬಡ್ಗೆ ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ 65 ಕೇಂದ್ರಗಳಲ್ಲಿ 58 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಮೂರು ಕೇಂದ್ರಗಳಿಗೆ ಕಾರ್ಯದರ್ಶಿಗಳಿಲ್ಲ. ಉಳಿದವು ಚಟುವಟಿಕೆಗಳಿಂದ ಕೂಡಿಲ್ಲ. ಉಳಿದ 58 ಕೇಂದ್ರಗಳಲ್ಲಿ ನೋಂದಾಯಿತರಾದ 4,537 ರೈತರಲ್ಲಿ 280 ರೈತರು 4,247 ಕ್ವಿಂಟಲ್ ತೊಗರಿ ಮಾರಾಟ ಮಾಡಿದ್ದಾರೆ. ಸಹಕಾರ ಮಾರಾಟ ಮಹಾಮಂಡಳಿಯ 131 ಕೇಂದ್ರಗಳಲ್ಲಿ 10,871 ರೈತರು ನೋಂದಾಯಿಸಿದ್ದು, ಅವರಲ್ಲಿ 943 ರೈತರು 13,881 ಕ್ವಿಂಟಲ್ ತೊಗರಿ ಮಾರಿದ್ದಾರೆ.

ಮುಹೂರ್ತ ವ್ಯಾಪಾರದತ್ತ ರೈತರ ಚಿತ್ತ: ಕಳೆದ ವರ್ಷಕ್ಕಿಂತ ಈ ವರ್ಷ ಒಂದು ಕ್ವಿಂಟಲ್‌ ತೊಗರಿ ಮೇಲೆ ₹2,400 ಕಡಿಮೆ ಆಗಿದ್ದರಿಂದ ರೈತರು ಶರಣಬಸವೇಶ್ವರ ಜಾತ್ರೆಯ ಮುಹೂರ್ತ ವ್ಯಾಪಾರದತ್ತ ಚಿತ್ತ ನೆಟ್ಟಿದ್ದಾರೆ.

2024ರ ಮಾರ್ಚ್ 4ರಂದು ಒಂದು ಕ್ವಿಂಟಲ್ ತೊಗರಿ ಕನಿಷ್ಠ ₹9,551, ಗರಿಷ್ಠ ₹10,463 ಹಾಗೂ ಮಾದರಿ ₹10,200ಕ್ಕೆ ಮಾರಾಟ ಆಗಿತ್ತು. ಈ ವರ್ಷ ಅದೇ ದಿನ (ಮಾ.4) ತೊಗರಿ ಧಾರಣೆ ಕನಿಷ್ಠ ₹6,111, ಗರಿಷ್ಠ ₹8,023 ಹಾಗೂ ಮಾದರಿ ದರ ₹7,275ಕ್ಕೆ ಕುಸಿದಿದೆ. ಹೀಗಾಗಿ, ಮಾರುಕಟ್ಟೆಗೆ ತೊಗರಿ ತರಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಶರಣಬಸವೇಶ್ವರ ಜಾತ್ರೆಯ ಅಡತ್ ವ್ಯಾಪಾರದ ದಿನ ದರ ಏರಿಕೆಯ ನಿರೀಕ್ಷೆ ಇರಿಸಿಕೊಂಡು, ಎದರು ನೋಡುತ್ತಿದ್ದಾರೆ.

ಮೂಲಸೌಕರ್ಯಗಳ ಕೊರತೆ: ‘ಗ್ರಾಮೀಣ ಭಾಗದ ಕೆಲವು ಸಹಕಾರ ಸಂಘಗಳ ಖರೀದಿ ಕೇಂದ್ರಗಳಲ್ಲಿ ದಾಸ್ತಾನಿಗೆ ಕಟ್ಟಡದಂತಹ ಮೂಲಸೌಕರ್ಯಗಳಿಲ್ಲ. ಆನ್‌ಲೈನ್ ನೋಂದಣಿಗೆ ಕಂಪ್ಯೂಟರ್ ಸಹ ಇರಲಿಲ್ಲ. ಜಿಲ್ಲಾಧಿಕಾರಿಗಳು ಅನುದಾನ ಕಲ್ಪಿಸಿ ಕಂಪ್ಯೂಟರ್ ವ್ಯವಸ್ಥೆ ಮಾಡಿದ್ದರು. ಕೆಲವು ತಾಲ್ಲೂಕುಗಳ ಗ್ರಾಮಗಳಲ್ಲಿ ಖರೀದಿ ಕೇಂದ್ರ ತೆರೆಯದೆ, ರೈತರು ಮಾರಾಟಕ್ಕೆ ಮುಂದೆ ಬರುತ್ತಿಲ್ಲ ಎಂದು ಹೇಳುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ, ತಾಲ್ಲೂಕಿನ ಕೇಂದ್ರಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ, ಸಭೆ ಮಾಡುತ್ತಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಮಂಗಲಗಿ ಖರೀದಿ ಕೇಂದ್ರದವರು ರೈತರಿಂದ ದಾಖಲೆಗಳನ್ನು ಪಡೆದು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದುವರೆಗೂ ಖರೀದಿ ಪ್ರಕ್ರಿಯೆ ಆರಂಭಿಸಿಲ್ಲ. ಎಲ್ಲ ರೈತರು ಸೇರಿ ಒಂದು ಲಾರಿಯಷ್ಟು ತೊಗರಿ ತಂದರೆ ಖರೀದಿಸುವುದಾಗಿ ಹೇಳುತ್ತಿದ್ದಾರೆ.
–ಅನಿಲ್ ಜಾಧವ, ರೈತ ಕಾಳಗಿ ತಾಲ್ಲೂಕಿನ ಮಂಗಲಗಿ

‘₹10 ಸಾವಿರ ದರ ನಿಗದಿಗೆ ಬೇಡಿಕೆ’

‘ಕಳೆದ ಬಾರಿಗಿಂತ ಈ ವರ್ಷ ಇಳುವರಿ ಉತ್ತಮವಾಗಿದ್ದು ದರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ₹7550 ಎಂಎಸ್‌ಪಿ ನಿಗದಿ ಮಾಡಿದೆ. ರಾಜ್ಯ ಸರ್ಕಾರವು ₹450 ಪ್ರೋತ್ಸಾಹ ಧನ ಸೇರಿಸಿ ₹8000 ಕೊಡುತ್ತಿದ್ದರೂ ರೈತರು ₹10 ಸಾವಿರ ದರಕ್ಕೆ ಬೇಡಿಕೆ ಇರಿಸಿದ್ದಾರೆ’ ಎಂದು ಎಪಿಎಂಸಿ ಕಾರ್ಯದರ್ಶಿ ಅಲ್ಲಾಬಕಾಷ್ ಬಿಜಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಜಯಪುರದ ಎಪಿಎಂಸಿಯಲ್ಲಿ ದಿನಂಪ್ರತಿ ಕ್ವಿಂಟರ್ ತೊಗರಿ ಧಾರಣೆ ₹7000 ಆಸುಪಾಸಿನಲ್ಲಿದ್ದು ಖರೀದಿ ಕೇಂದ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದೆ. ಆದರೆ ಕಲಬುರಗಿಯಲ್ಲಿ ₹8000 ದರವಿದ್ದು ಎಪಿಎಂಸಿಗಳಲ್ಲಿ ಆವಾಕ ಪ್ರಮಾಣ ಹೆಚ್ಚಾಗಿದೆ. ಜತೆಗೆ ಶರಣಬಸವೇಶ್ವರ ಜಾತ್ರೆಯ ಮುಹೂರ್ತ ವ್ಯಾಪಾರದ ಮೇಲೆಯೂ ನಿರೀಕ್ಷೆ ಇರಿಸಿಕೊಂಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.