ADVERTISEMENT

ಜಿಲ್ಲಾ ಮಟ್ಟದ ದೇವದಾಸಿ ಮಹಿಳೆಯರ, ಕುಟುಂಬದ ಸದಸ್ಯರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 6:38 IST
Last Updated 17 ಆಗಸ್ಟ್ 2025, 6:38 IST
ಕಲಬುರಗಿಯಲ್ಲಿ ನಡೆದ ದೇವದಾಸಿ ಮಹಿಳೆಯರ ಸಮಾವೇಶದಲ್ಲಿ ಯು.ಬಸವರಾಜ ಮಾತನಾಡಿದರು. ಮೀನಾಕ್ಷಿ ಬಾಳಿ, ಶ್ರೀಗಂಧ, ಮೀನಾಕ್ಷಿ ಧನ್ನಿ, ಚಂದಮ್ಮ ಭಾಗವಹಿಸಿದ್ದರು            ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ನಡೆದ ದೇವದಾಸಿ ಮಹಿಳೆಯರ ಸಮಾವೇಶದಲ್ಲಿ ಯು.ಬಸವರಾಜ ಮಾತನಾಡಿದರು. ಮೀನಾಕ್ಷಿ ಬಾಳಿ, ಶ್ರೀಗಂಧ, ಮೀನಾಕ್ಷಿ ಧನ್ನಿ, ಚಂದಮ್ಮ ಭಾಗವಹಿಸಿದ್ದರು            ಪ್ರಜಾವಾಣಿ ಚಿತ್ರ   

ಕಲಬುರಗಿ: ‘ರಾಜ್ಯ ಸರ್ಕಾರ ನಮ್ಮ ಹೋರಾಟದ ಫಲವಾಗಿ ದೇವದಾಸಿ ಪದ್ಧತಿ ನಿರ್ಮೂಲನೆ ಮಾಡುವ ಮತ್ತು ದೇವದಾಸಿ ಮಹಿಳೆಯರ ಮಕ್ಕಳ ತಂದೆಯನ್ನು ಗುರುತಿಸುವ ಹಕ್ಕು ಸೇರಿದಂತೆ ಸಮಗ್ರ ಪುನರ್ವಸತಿ ಕಲ್ಪಿಸುವ ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ ಜಾರಿಗೆ ತರಲು ಮುಂದಾಗಿದೆ. ಇದು ಸ್ವಾಗತಾರ್ಹ’ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಗೌರವಾಧ್ಯಕ್ಷ ಯು.ಬಸವರಾಜ ತಿಳಿಸಿದರು.

ನಗರದ ಹಮಾಲವಾಡಿಯ ಹಸನ್‌ಖಾನ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ವಿಮೋಚನಾ ಸಂಘ ಹಾಗೂ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಗಳು ಜಂಟಿಯಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ದೇವದಾಸಿ ಮಹಿಳೆಯರ ಹಾಗೂ ಅವರ ಕುಟುಂಬದ ಸದಸ್ಯರ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಈ ಕಾಯ್ದೆ ರೂಪಿಸಬೇಕೆಂದು, ಒಬ್ಬರನ್ನೂ ಬಿಡದೆ ವಯೋ ಭೇದವನ್ನು ಮಾಡದೇ ಇಡೀ ದೇವದಾಸಿ ಮಹಿಳೆಯರ ಕುಟುಂಬವನ್ನು ಮರು ಸಮೀಕ್ಷೆಗೊಳಪಡಿಸಬೇಕು ಎಂಬ ಎರಡು ಬೇಡಿಕೆಗಳನ್ನಿಟ್ಟುಕೊಂಡು 15 ವರ್ಷಗಳಿಂದ ಹೋರಾಟ ಮಾಡುತ್ತಿದ್ದೆವು. ವಿಳಂಬವಾಗಿಯಾದರೂ ಈ ಮಸೂದೆ ಮಂಡನೆಯಾಗುತ್ತಿದೆ’ ಎಂದರು.

ADVERTISEMENT

‘ನಮ್ಮ ಹಕ್ಕೊತ್ತಾಯದ ನಂತರವೇ 2007ರಲ್ಲಿ ಮತ್ತೊಂದು ಸಮೀಕ್ಷೆ ನಡೆಸಿ 46,650 ದೇವದಾಸಿ ಮಹಿಳೆಯರನ್ನು ಗುರುತಿಸಿತಲ್ಲದೆ ಅದರಲ್ಲಿ ಕೇವಲ 24,284 ಜನರಿಗೆ ಅಸಮರ್ಪಕ ಪುನರ್ವಸತಿ ಕಲ್ಪಿಸಿದೆ’ ಎಂದು ದೂರಿದ ಅವರು, ‘ಗಣತಿಯಾಚೆ ಇರುವ ಸುಮಾರು 20 ಸಾವಿರಕ್ಕೂ ಅಧಿಕ ಮಹಿಳೆಯರು ಸಮೀಕ್ಷೆಯ ಪರಿಗಣನೆಯಲ್ಲಿಲ್ಲ. ಗಣತಿಯಲ್ಲಿ ಉಳಿದ 22,376 ಮಹಿಳೆಯರಿಗೆ ಪುನರ್ವಸತಿ ಒದಗಿಸಲಿಲ್ಲ. ಹಾಗಿದ್ದರೆ ಇವರೆಲ್ಲ ಹೇಗೆ ಬದುಕ ಬೇಕು ಎಂದು ಸಂಘಗಳು ಸರ್ಕಾರವನ್ನು ಪ್ರಶ್ನಿಸಿದ್ದವು’ ಎಂದು ಹೇಳಿದರು.

ಸುಗಂಧ ಸ್ವಾಗತಿಸಿದರು. ಮೀನಾಕ್ಷಿ ಧನ್ನಿ ವಂದಿಸಿದರು. ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಪ್ರಧಾನ ಕಾರ್ಯದರ್ಶಿ ಚಂದಮ್ಮ ವೇದಿಕೆಯಲ್ಲಿದ್ದರು.  

ದೌರ್ಜನ್ಯದ ದೇವದಾಸಿ ಪದ್ಧತಿಯಿಂದ ನೊಂದ ಮಹಿಳೆಯರು ಅದು ಮುಂದುವರಿಯದಂತೆ ತಡೆಯಲು ಹೋರಾಟ ಮಾಡಬೇಕು. ಕೂಡಲೇ ಮಸೂದೆಯನ್ನು ಸಾರ್ವಜನಿಕ ಚರ್ಚೆಗೆ ಇಡಬೇಕು. ಬೇಗನೇ ಕಾಯ್ದೆಗೆ ಒಪ್ಪಿಗೆ ನೀಡಬೇಕು
ಮೀನಾಕ್ಷಿ ಬಾಳಿ, ರಾಜ್ಯ ಅಧ್ಯಕ್ಷೆ ಜನವಾದಿ ಮಹಿಳಾ ಸಂಘಟನೆ

ಸೆಪ್ಟೆಂಬರ್‌ನಲ್ಲಿ ಬೆಂಗಳೂರು ಚಲೋ

ಮಾಜಿ ದೇವದಾಸಿಯರಿಗೆ ವಸತಿ ಭೂಮಿ ಮತ್ತು ಮಾಸಿಕ ಕನಿಷ್ಠ ₹ 3 ಸಾವಿರ ಪಿಂಚಣಿ ಮಕ್ಕಳ ಪುನರ್ವಸತಿ ಮುಂತಾದ ಹಕ್ಕೊತ್ತಾಯಗಳಿಗಾಗಿ ಸೆಪ್ಟೆಂಬರ್‌ ತಿಂಗಳ ಎರಡನೇ ವಾರ ಬೆಂಗಳೂರಿನಲ್ಲಿ ಅನಿರ್ದಿಷ್ಟ ಅವಧಿಯ ಧರಣಿ ನಡೆಸಲು ಹಾಗೂ ಧರಣಿಗೆ ಕನಿಷ್ಠ ಸಾವಿರ ಮಹಿಳೆಯರು ಮತ್ತು ಮಕ್ಕಳನ್ನು ಸಂಘಟಿಸಲು ಸಮಾವೇಶ ನಿರ್ಧರಿಸಿತು. ಈ ನಿರ್ಣಯವನ್ನು ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಅಧ್ಯಕ್ಷ ಸುಧಾಮ ಧನ್ನಿ ಮಂಡಿಸಿದರು. ಪಾಂಡುರಂಗ ಮಾವಿನಕರ್ ಅನುಮೋದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.