ಚಿಂಚೋಳಿ: ವಿವಿಧೆಡೆಯಿಂದ ಸಮಸ್ಯೆಗಳ ಮೂಟೆ ಹೊತ್ತು ಇಲ್ಲಿಗೆ ಬಂದವರು ಸಾಲಾಗಿ ವೇದಿಕೆ ಹತ್ತಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೈಮುಗಿದು ತಮ್ಮ ಕಷ್ಟಕಾರ್ಪಣ್ಯಗಳನ್ನು ಹೇಳಿಕೊಂಡರು. ತಾಳ್ಮೆಯಿಂದ ಅವರ ಕಷ್ಟಗಳಿಗೆ ಕಿವಿಯಾಗಿ, ಮನವಿಯನ್ನು ಪರಿಶೀಲಿಸಿ ಅವರಿಗೆ ಸ್ಪಂದಿಸುವಂತೆ ತಮ್ಮ ಅಧಿಕಾರಿಗಳ ತಂಡಕ್ಕೆ ಸಚಿವರು ಸೂಚಿಸಿದರು.
ನ್ಯಾಯ ಸಿಗದೆ ಕಚೇರಿಗಳಿಗೆ ಅಲೆದಾಡಿದವರಿಗೆ ಸಚಿವರ ಭೇಟಿ ಆಶಾಕಿರಣ ಮೂಡಿಸಿತಾದರೂ, ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಸುರಿದ ಜೋರು ಮಳೆಯು ಬಂದವರ ನೆರವಿನ ಭರವಸೆಯನ್ನು ನೀರಲ್ಲಿ ಕೊಚ್ಚಿಕೊಂಡು ಹೋಗುವಂತೆ ಮಾಡಿತು.
ತಾಲ್ಲೂಕಿನ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ‘ಜನತಾ ದರ್ಶನ ಹಾಗೂ ಜನಸ್ಪಂದನಾ’ ಕಾರ್ಯಕ್ರಮ ಆಯೋಜಿಸಿತ್ತು. ಚಿಂಚೋಳಿ, ಸೇಡಂ, ಕಾಳಗಿ, ಚಿತ್ತಾಪುರ... ಹೀಗೆ ಹಲವು ತಾಲ್ಲೂಕುಗಳಿಂದ ಬಂದಿದ್ದ ಬಹಳಷ್ಟು ಮಂದಿ ಸಚಿವರಿಗೆ ಕೈಮುಗಿದು ನೆರವು ಕೇಳಿದರು.
ಗ್ರಾಮ ಪಂಚಾಯಿತಿಯಿಂದ ನಾಲ್ಕು ತಿಂಗಳಿಂದ ವೇತನ ಸಿಗದೆ ಸ್ವಚ್ಛತೆ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರು ಕಣ್ಣಲ್ಲಿ ಕಣ್ಣೀರು ತುಂಬಿಕೊಂಡೇ ತಮ್ಮ ಕಷ್ಟವನ್ನು ಹೇಳಿಕೊಂಡರು. ಪಿಡಿಒ ಅವರನ್ನು ಕರೆದು ಕಾರಣ ಕೇಳಿದ ಸಚಿವರು, ‘ವಾರದೊಳಗೆ ಬಾಕಿ ಕೊಡದೆ ಇದ್ದರೆ ಅಮಾನತು ಮಾಡಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.
ವಿಳಂಬ ಧೋರಣೆ ತೋರಿದ ಅಧಿಕಾರಿಗಳ ನಡೆಗೆ ಸಚಿವರು ಕೊಡುತ್ತಿದ್ದ ಖಡಕ್ ಸಂದೇಶ ಹಾಗೂ ನೊಂದವರನ್ನು ತಮ್ಮ ಮೃದುವಾದ ಮಾತುಗಳಿಂದ ಸಂತೈಸುತ್ತಿದ್ದ ಪರಿಗೆ ಸರತಿ ಸಾಲಿನಲ್ಲಿ ನಿಂತಿದ್ದವರ ಸುಸ್ತು ಮರೆಸುವಂತಿತ್ತು. ಆದರೆ, ವರುಣ ಇದೆಲ್ಲಕ್ಕೂ ತೆರೆ ಎಳೆದು, ಸಾರ್ವಜನಿಕರು ಹಾಗೂ ಅಧಿಕಾರಿಗಳನ್ನು ವೇದಿಕೆಯಿಂದಲೇ ಚದುರಿಸಿದ.
ಮಳೆಯ ನಡುವೆಯೂ ಸಚಿವರು ಕೆಲ ಹೊತ್ತ ಅಹವಾಲುಗಳನ್ನು ಸ್ವೀಕರಿಸಿದರು. ಕೆಲವು ಜನರು ಟೆಂಟ್‌ನಿಂದ ಓಡಿ ಹೋದರು. ಕಷ್ಟಗಳನ್ನು ಹೊತ್ತು ಬಂದಿದ್ದವರು ಕುಳಿತುಕೊಳ್ಳಲು ಹಾಕಿದ್ದ ಕುರ್ಚಿಗಳನ್ನೇ ಕೊಡೆಯನ್ನಾಗಿಸಿಕೊಂಡು ಮಳೆಯಲ್ಲೇ ನೆನೆಯುತ್ತಾ ನಿಂತರು. ಮಳೆ ಇನ್ನಷ್ಟು ಬಿರುಸು ಪಡೆಯುತ್ತಿದ್ದಂತೆ ವೇದಿಕೆಯಿಂದ ನಿರ್ಗಮಿಸಿದ ಸಚಿವರು ಮತ್ತು ಅಧಿಕಾರಿಗಳು, ಆದರ್ಶ ಶಾಲೆಯ ಮಕ್ಕಳೊಂದಿಗೆ ಊಟ ಮಾಡಿದರು. ಸಚಿವರ ಹಿಂದೆಯೇ ಶಾಲೆಗೂ ಹೋದ ಅರ್ಜಿದಾರರು, ಅಲ್ಲಿಯೇ ತಮ್ಮ ಮನವಿಗಳನ್ನು ಸಲ್ಲಿಸಿದರು.
ಅರ್ಜಿಗಳ ವಿಲೇವಾರಿ ವಿಳಂಬ, ವೇತನ ಬಾಕಿ, ನಿವೃತ್ತ ಸೈನಿಕರಿಗೆ ಜಮೀನು ಮಂಜೂರು, ಸಿದ್ಧಶ್ರೀ ಕಾರ್ಖಾನೆ ಜಮೀನು ಅತಿಕ್ರಮಣ, ಬಸ್ ಸೇವೆ ಆರಂಭ ಸೇರಿದಂತೆ ವಿವಿಧ ದೂರುಗಳಿಗೆ ಸಂಬಂಧಿಸಿದ ಅಧಿಕಾರಿಗಳನ್ನು ತಮ್ಮ ಬಳಿ ಕರೆಯಿಸಿಕೊಂಡರು. ಅವುಗಳ ಬಗ್ಗೆ ಕಾರಣ ತಿಳಿದುಕೊಂಡು, ನಿಗದಿತ ಅವಧಿಯಲ್ಲಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ತಾಕೀತು ಮಾಡಿದರು.
790 ಜನರಿಗೆ ಸರ್ಕಾರದ ವಿವಿಧ ಇಲಾಖೆಗಳ ಸೌಲಭ್ಯ ವಿತರಣೆ ಮಾಡಲಾಯಿತು. 800ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು, ಆಧಾರ್ ಸಂಬಂಧಿತ 250ಕ್ಕೂ ಹೆಚ್ಚು ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಗಿದೆ. 895 ಜನರು ಆರೋಗ್ಯ ತಪಾಸಣೆಗೆ ಒಳಗಾದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ ಪಾಂಡೆ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಎಸ್‌ಪಿ ಅಡ್ಡೂರು ಶ್ರೀನಿವಾಸಲು, ಡಿಎಫ್ಒ ಸುಮಿತ್ ಕುಮಾರ್, ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ಚಿಂಚೋಳಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ತಾ.ಪಂ ಇಒ ಶಂಕರ್ ರಾಠೋಡ, ಡಿಇಒ ಹಣಮಂತ ರಾಠೋಡ ಇದ್ದರು.
ಕಲಬುರಗಿ ಕನೆಕ್ಟ್‌ಗೆ ಬಂದ 560 ಅರ್ಜಿಗಳ ಪೈಕಿ 300 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಪೊಲೀಸ್ ಠಾಣೆಗಳ ಕ್ಯೂಆರ್ ಕೋಡ್‌ಗೂ 800ಕ್ಕೂ ಹೆಚ್ಚು ಅಭಿಪ್ರಾಯಗಳು ಬಂದಿವೆಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.