ADVERTISEMENT

ಅನುದಾನದ ಭರವಸೆ; ಕ್ರೀಡಾಭಿವೃದ್ಧಿಗೆ ಸಂಕಲ್ಪ

ಜಿಲ್ಲಾಮಟ್ಟದ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 6:58 IST
Last Updated 11 ಜನವರಿ 2023, 6:58 IST
ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಗ್ರಾಮೀಣ ಕ್ರೀಡಾಕೂಟ‌ವನ್ನು ಮಂಗಳವಾರ ನಡೆದ ಚಿತ್ತಾಪುರ ಮತ್ತು ಕಮಲಾಪೂರ ಯುವಕರು ವಿಭಾಗದಲ್ಲಿ ಕಬ್ಬಡಿ ಆಡಿದರು–ಪ್ರಜಾವಾಣಿ ಚಿತ್ರ
ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಗ್ರಾಮೀಣ ಕ್ರೀಡಾಕೂಟ‌ವನ್ನು ಮಂಗಳವಾರ ನಡೆದ ಚಿತ್ತಾಪುರ ಮತ್ತು ಕಮಲಾಪೂರ ಯುವಕರು ವಿಭಾಗದಲ್ಲಿ ಕಬ್ಬಡಿ ಆಡಿದರು–ಪ್ರಜಾವಾಣಿ ಚಿತ್ರ   

ಕಲಬುರಗಿ:‌ ‘ಜಿಲ್ಲೆಯ ಸಮಗ್ರ ಕ್ರೀಡಾಭಿವೃದ್ಧಿಗೆ ಸಂಕಲ್ಪ ತೊಟ್ಟಿದ್ದು, ಹೆಚ್ಚಿನ ಅನುದಾನ ತರಲಾಗುವುದು. ಈಗಾಗಲೇ ಕ್ರೀಡಾಂಗಣದಲ್ಲಿರುವ ಟೆನಿಸ್‌ ಹಾಗೂ ಬ್ಯಾಡ್ಮಿಂಟನ್‌ ಅಂಗಣದ ನವೀಕರಣಕ್ಕೆ ಅನುದಾನಕ್ಕೆ ಅನುಮತಿ ದೊರೆತಿದೆ. ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು’ ಎಂದು ವಿಧಾನ ಪರಿಷತ್‌ ಸದಸ್ಯ ಶಶಿಲ್‌ ನಮೋಶಿ ಭರವಸೆ ನೀಡಿದರು.

ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 2022–23ನೇ ಸಾಲಿನ ಜಿಲ್ಲಾಮಟ್ಟದ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ‘ಕ್ರೀಡಾಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ಕೆಕೆಆರ್‌ಡಿಬಿ ಅಧ್ಯಕ್ಷರು ಮತ್ತು ಆಯುಕ್ತರ ಜೊತೆ ಚರ್ಚಿಸಲಾಗಿದ್ದು, ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೇ ಟೆನಿಸ್‌ ಅಂಗಣದ ಅಭಿವೃದ್ಧಿಗೆ ₹ 34 ಲಕ್ಷ ಮತ್ತು ಬ್ಯಾಡ್ಮಿಂಟನ್‌ ಅಂಗಣದ ಅಭಿವೃದ್ಧಿಗೆ ₹ 64 ಲಕ್ಷ ಅನುದಾನಕ್ಕೆ ಅನುಮತಿ ಸಿಕ್ಕಿದೆ’ ಎಂದರು.

‘ಗ್ರಾಮೀಣ ಕ್ರೀಡಾಕೂಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಪಾಲ್ಗೊಳ್ಳಬೇಕಿತ್ತು. ಆದರೆ, ಸರ್ಕಾರ, ಚುನಾಯಿತ ಪ್ರತಿನಿಧಿಗಳ ಪ್ರೋತ್ಸಾಹ ಹಾಗೂ ಪ್ರಾತಿನಿಧ್ಯದ ಕೊರತೆಯಿಂದ ಕ್ರೀಡಾಭಿವೃದ್ಧಿ ಕುಂಠಿತಗೊಂಡಿರುವುದು ಬೇಸರದ ಸಂಗತಿ ಎಂದರು.

ADVERTISEMENT

ಉಪಾಹಾರದ ಬಳಿಕ ಕ್ರೀಡಾಕೂಟ ಆರಂಭ: ವಿವಿಧ ತಾಲ್ಲೂಕುಗಳಿಂದ ಕ್ರೀಡಾಕೂಟಕ್ಕಾಗಿ ಬಂದಿದ್ದ ತಂಡಗಳ ವ್ಯವಸ್ಥಾಪಕರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳ ನಡುವಿನ ಸಂವಹನ ಕೊರತೆ ಮತ್ತು ಗೊಂದಲದಿಂದ ಮಧ್ಯಾಹ್ನದವರೆಗೂ ಕ್ರೀಡಾಕೂಟ ಆರಂಭವಾಗಲಿಲ್ಲ.

ರಾಷ್ಟ್ರಮಟ್ಟದ ಕೊಕ್ಕೊ ಆಟಗಾರ ಕಾಶೀನಾಥ ಕ್ರೀಡಾಜ್ಯೋತಿ ಹಸ್ತಾಂತರಿಸಿದರು. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ದೇಶಕಿ ಜಿ.ಗಾಯತ್ರಿ ಸ್ವಾಗತಿಸಿದರು. ಸರ್ಕಾರಿ ಅಂಧ ಮಕ್ಕಳಶಾಲೆ ವಿದ್ಯಾರ್ಥಿಗಳು, ನಾಡಗೀತೆ ಪ್ರಸ್ತುತ ಪಡಿಸಿದರು. ಕ್ರೀಡಾಪಟು ಶಿವಲಿಂಗ ಸ್ವಾಮಿ ಪ್ರತಿಜ್ಞಾ ವಿಧಿ ಬೋಧಿಸಿದರು. ಕ್ರೀಡಾಂಗಣದ ತರಬೇತುದಾರ ಸಂಜಯ ಬಾಣಾದ ವಂದಿಸಿದರು.

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅವಿನಾಶ ಕುಲಕರ್ಣಿ, ತರಬೇತುದಾರರಾದ ರಾಜು ಚೌಹಾಣ, ಪ್ರವೀಣ ಪುಣೆ, ತೀರ್ಪುಗಾರರು ಹಾಗೂ ಕ್ರೀಡಾಪಟುಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.