ADVERTISEMENT

ಜೇವರ್ಗಿ: ಬಾಲಕಿಯರ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2025, 13:49 IST
Last Updated 25 ಫೆಬ್ರುವರಿ 2025, 13:49 IST
ಜೇವರ್ಗಿ ಪಟ್ಟಣದ ದತ್ತನಗರ ಬಡಾವಣೆಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ  ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ವಿದ್ಯಾರ್ಥಿನಿಯ ಸಮಸ್ಯೆ ಆಲಿಸಿ ಫೋಟೊಗೆ ಪೋಸ್ ನೀಡಿದರು
ಜೇವರ್ಗಿ ಪಟ್ಟಣದ ದತ್ತನಗರ ಬಡಾವಣೆಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ  ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ವಿದ್ಯಾರ್ಥಿನಿಯ ಸಮಸ್ಯೆ ಆಲಿಸಿ ಫೋಟೊಗೆ ಪೋಸ್ ನೀಡಿದರು   

ಜೇವರ್ಗಿ: ಇಲ್ಲಿನ ದತ್ತನಗರ ಬಡಾವಣೆಯ ವಕೀಲ ಲೇಔಟ್‌ನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಂಗಳವಾರ ಭೇಟಿ ನೀಡಿ ವಸತಿ ನಿಲಯಗಳ ವ್ಯವಸ್ಥೆ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿದರು.

ಅಡುಗೆ ಕೋಣೆ, ವಿದ್ಯಾರ್ಥಿಗಳ ಕೊಠಡಿಗಳು, ಶೌಚಾಲಯಗಳು, ಗ್ರಂಥಾಲಯ, ಕಂಪ್ಯೂಟರ್ ಕೊಠಡಿಗಳನ್ನು ಪರಿಶೀಲಿಸಿದ ನಂತರ ವಿದ್ಯಾರ್ಥಿಗಳ ಕೋಣೆಗೆ ತೆರಳಿ ಸಮಸ್ಯೆ ಆಲಿಸಿದರು.

ಆಹಾರದಲ್ಲಿ ರುಚಿಯ ಕೊರತೆ, ನೀರಿನ ಸಮಸ್ಯೆ, ಸೋಲಾರ ವ್ಯವಸ್ಥೆ, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುವವರಿಗೆ ಸಿಇಟಿ ಪುಸ್ತಕ ನೀಡುವ ಹಾಗೂ ಕಳೆದ ಕೆಲ ದಿನಗಳಿಂದ ಸ್ಯಾನಿಟರಿ ಪ್ಯಾಡ್ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿ ಎದುರು ವಿದ್ಯಾರ್ಥಿನಿಯರು ಸಮಸ್ಯೆ ತೋಡಿಕೊಂಡರು.

ADVERTISEMENT

ವಸತಿ ನಿಲಯ ಮೇಲ್ವೀಚಾರಕಿ ಸಮಿತ್ರಾ ಗಾಜರೆ ಮಾತನಾಡಿ,‘ಈ ವಸತಿ ನಿಲಯದಲ್ಲಿ ನೀರಿನ ಸಮಸ್ಯೆ ಇರುವುದರಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ನೀಡಬೇಕು. ವಸತಿ ನಿಲಯದಲ್ಲಿ ಶುಚಿತ್ವ ಕಾಯ್ದುಕೊಳ್ಳಬೇಕು. ಗಿಡಮರಗಳನ್ನು ಬೆಳೆಸಿ ಸುಂದರ ಪರಿಸರ ನಿರ್ಮಾಣ ಮಾಡಬೇಕು ಎಂದು ನಿಲಯ ಮೇಲ್ವೀಚಾರಕರಿಗೆ ಸೂಚಿಸಿದರು.

ನಂತರ ವಿದ್ಯಾರ್ಥಿಗಳೊಂದಿಗೆ ಬೆರೆತು, ವಿದ್ಯಾರ್ಥಿಗಳು ಕಲಿಕೆಯ ಕಡೆ ಹೆಚ್ಚಿನ ಗಮನ ಹರಿಸಬೇಕು. ಕಳೆದ ಬಾರಿಕ್ಕಿಂತ ಈ ಬಾರಿ ಹೆಚ್ಚಿನ ಫಲಿತಾಂಶ ಬರುವಂತೆ ನೋಡಿಕೊಳ್ಳಬೇಕು ಎಂದರು.

ನಂತರ ಪಟ್ಟಣದ ಎಪಿಎಂಸಿ ಹತ್ತಿರ ನಿರ್ಮಿ‍ಸುತ್ತಿರುವ ಇಂದಿರಾ ಕ್ಯಾಂಟಿನ್, ಶಾಪಿಂಗ್ ಕಾಂಪ್ಲೆಕ್ಸ್, ತಾಲ್ಲೂಕಿನ ಕೆಲ್ಲೂರ ಹತ್ತಿರದ ಹತ್ತಿ ಖರೀದಿ ಕೇಂದ್ರ, ಯಡ್ರಾಮಿ ತಾಲ್ಲೂಕಿನ ಇಜೇರಿ ಗ್ರಾಮದ ನಾಡ ಕಚೇರಿ, ರೈತ ಸಂಪರ್ಕ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರ, ಚಿಗರಳ್ಳಿಯಿಂದ ಯಡ್ರಾಮಿವರೆಗೆ ನಡೆಯುತ್ತಿರುವ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿ ಕಾಮಗಾರಿ ಕಳಪೆಯಾಗದಂತೆ ಗುಣಮಟ್ಟದ ರಸ್ತೆ ನಿರ್ಮಿಸುವಂತೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಜೇವರ್ಗಿ ತಹಶೀಲ್ದಾರ್ ಮಲ್ಲಣ್ಣ ಯಲಗೋಡ, ಯಡ್ರಾಮಿ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ, ಸಮಾಜ ಕಲ್ಯಾಣ ಅಧಿಕಾರಿ ಸಂಗಣಗೌಡ ಪಾಟೀಲ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಶ್ವನಾಥ ಬಿರಾದಾರ, ಲೋಕೋಪಯೋಗಿ ಇಲಾಖೆ ಎಇಇ ತಾಜಮುಲ್ಲಾ ಹುಸೇನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಗುರುಶಾಂತಯ್ಯ ಗದ್ದಗಿಮಠ ಸೇರಿ ಇತರ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.