ಚಿತ್ತಾಪುರ: ವೀರಶೈವ ಸಮಾಜದ ಹೆಸರು ಹೇಳಿಕೊಂಡು ಕೆಲವು ಪಟ್ಟಭದ್ರರ ಗುಂಪು ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ನೋಂದಣಿ ಮಾಡಿಸಿದ್ದಾರೆ. ತಾಲ್ಲೂಕು ವೀರಶೈವ ಸಮಾಜಕ್ಕೂ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಕ್ಕೂ ಮತ್ತು ನೋಂದಣಿ ಮಾಡಿಸಿಕೊಂಡಿರುವ ಟ್ರಸ್ಟಿಗೂ ಸಂಬಂಧವಿಲ್ಲ. ಸರ್ಕಾರದ ಅನುದಾನ ಬಸವೇಶ್ವರ ಚಾರಿಟೇಬಲ್ ಟ್ರಸ್ಟಿಗೆ ಬಿಡುಗಡೆ ಮಾಡಬಾರದು’ ಎಂದು ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಭಾ ಮುಖಂಡರು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನ ಸರ್ಕಾರಿ ಗೃಹ ಕಚೇರಿಯಲ್ಲಿ ಮಂಗಳವಾರ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದ ಮುಖಂಡರ ನಿಯೋಗ, ‘ಚಿತ್ತಾಪುರ ಪಟ್ಟಣದಲ್ಲಿ ಈಗಾಗಲೇ ತಾಲ್ಲೂಕು ವೀರಶೈವ ಸಮಾಜ ಟ್ರಸ್ಟ್ ಇದೆ, ನೋಂದಣಿಯನ್ನೂ ಮಾಡಲಾಗಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಘಟಕವೂ ಇದೆ. ಹೀಗಿರುವಾಗಲೂ ಸಮಾಜದ ಹೆಸರು ಹೇಳಿಕೊಂಡು ಕೆಲವರು ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ನೋಂದಣಿ ಮಾಡಿಕೊಂಡಿದ್ದಾರೆ. ಟ್ರಸ್ಟ್ ರಚನೆ ಕುರಿತು ಸಮಾಜದ ಸಭೆಯಲ್ಲಿ ಯಾರೊಬ್ಬರೂ ಚರ್ಚೆ ಮಾಡಿಲ್ಲ’ ಎಂದು ಮನವಿ ಪತ್ರದಲ್ಲಿ ಸಚಿವರ ಗಮನಕ್ಕೆ ತಂದಿದ್ದಾರೆ.
ಬಸವೇಶ್ವರ ಚಾರಿಟೇಬಲ್ ಟ್ರಸ್ಟ್‌ನವರು ವೀರಶೈವ ಸಮಾಜದ ಹೆಸರು ಹೇಳಿ ಕೆಲವರಿಂದ ಹಣ ಸಂಗ್ರಹ ಮಾಡಿದ್ದಾರೆ. ಎರಡು ಎಕರೆ ಜಮೀನು ಖರೀದಿಸಿ ವೀರಶೈವ ಸಮಾಜದ ಹೆಸರಿನಲ್ಲಿ ಸರ್ಕಾರದ ಅನುದಾನ ಪಡೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ತಾಲ್ಲೂಕು ವೀರಶೈವ ಸಮಾಜ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಬಸವೇಶ್ವರ ಚಾರಿಟೇಬಲ್ ಟ್ರಸ್ಟಿಗೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ಆ ಟ್ರಸ್ಟ್‌ಗೆ ಸರ್ಕಾರದ ಅನುದಾನ ನೀಡಿದರೆ ಅದು ವೀರಶೈವ ಸಮಾಜಕ್ಕೆ ಅನ್ವಯವಾಗಲಾರದು. ಟ್ರಸ್ಟ್‌ನ ಹೆಸರಿನಲ್ಲಿ ಸರ್ಕಾರ ಅನುದಾನ ಬಿಡುಗಡೆ ಮಾಡಬಾರದು’ ಎಂದು ಮುಖಂಡರು ಸಚಿವರಿಗೆ ಮನವಿ ಮಾಡಿದ್ದಾರೆ.
ವೀರಶೈವ ಲಿಂಗಾಯತ ಮುಖಂಡರಾದ ಶಿವರಾವ್ ಪಾಟೀಲ ಬೆಳಗುಂಪಾ, ಲಿಂಗಾರೆಡ್ಡಿ ಭಾಸರೆಡ್ಡಿ, ಸೋಮಶೇಖರ ಪಾಟೀಲ ಬೆಳಗುಂಪಾ, ರಮೇಶ ಮರಗೋಳ, ವೀರಣ್ಣಗೌಡ ಪರಸರೆಡ್ಡಿ, ಭೀಮರೆಡ್ಡಿ ಕುರಾಳ, ಶಿವಾನಂದ ಪಾಟೀಲ, ಶಿವಲಿಂಗಪ್ಪಾ ವಾಡೇದ್, ರಾಜಶೇಖರ ತಿಮ್ಮನಾಯಕ, ಆನಂದ ಪಾಟೀಲ ನರಿಬೋಳ, ಸಿದ್ಧಣ್ಣಗೌಡ ಮಾಲಿಪಾಟೀಲ ದಿಗ್ಗಾಂವ್, ಶಾಂತಣ್ಣಾ ಚಾಳೀಕರ್, ಜಗಣ್ಣಗೌಡ ರಾಮತೀರ್ಥ, ನಾಗುಗೌಡ ಅಲ್ಲೂರ್, ಚಂದ್ರಶೇಖರ ಅವಂಟಿ, ಮಲ್ಲಿನಾಥ ಇಂದೂರು, ಶರಣಗೌಡ ಚಾಮನೂರು, ನಾಗರೆಡ್ಡಿ ಗೋಪಸೇನ್, ಬಸವರಾಜ ಪಾಟೀಲ್ ಬೆಳಗುಂಪಾ, ಸಿದ್ಧಣ್ಣಗೌಡ ಪಾಟೀಲ್ ಆರ್.ಡಿ, ರವೀಂದ್ರರೆಡ್ಡಿ ಭಂಕಲಗಾ, ಅಣ್ಣಾರಾವ ಬಾಳಿ, ವೀರಣ್ಣಾ ಸುಲ್ತಾಪುರ, ರಾಮರೆಡ್ಡಿ ಕೊಳ್ಳಿ, ಓಂಕಾರೇಶ್ವರ ರೇಷ್ಮಿ, ಮಹಾಂತಗೌಡ ಪಾಟೀಲ ದಂಡಗುಂಡ, ರಮೇಶ ಬಮ್ಮನಳ್ಳಿ, ನಾಗರಾಜ ಹೂಗಾರ, ರವೀಂದ್ರ ಇವಣಿ, ಜಗದೇವ ದಿಗ್ಗಾಂವಕರ್, ಮಲ್ಲು ಇಂದೂರು ಕಮರವಾಡಿ, ಚಂದ್ರಶೇಖರ ಉಟಗೂರು, ರವಿ ಪಡ್ಲ ಅಳ್ಳೊಳ್ಳಿ ಸೇರಿದಂತೆ ಅನೇಕರು ಇದ್ದರು.
ಬಸವನ ಭವನ ನಿರ್ಮಾಣದ ಭರವಸೆ
ಚಿತ್ತಾಪುರ ಪಟ್ಟಣ ವ್ಯಾಪ್ತಿಯಲ್ಲಿ ವೀರಶೈವ ಸಮಾಜದವರು ವಿಶಾಲ ಜಾಗ ಒದಗಿಸಿದರೆ ಸುಸಜ್ಜಿತ ಬೃಹತ್ ಬಸವ ಭವನ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸಿ ವರ್ಷದಲ್ಲಿ ಭವನ ನಿರ್ಮಾಣ ಮಾಡಿಕೊಡಲಾಗುವುದು. ಆದಷ್ಟು ಬೇಗ ಜಾಗದ ವ್ಯವಸ್ಥೆ ಮಾಡಿಕೊಡಿ. ನನ್ನ ಅಧಿಕಾರ ಅವಧಿಯೊಳಗೆ ಬಸವ ಭವನ ಕಾಮಗಾರಿ ಸಿದ್ಧವಾಗುತ್ತದೆ ಎಂದು ಕ್ಷೇತ್ರದ ಶಾಸಕ ಸಚಿವ ಪ್ರಿಯಾಂಕ್ ಖರ್ಗೆ ಅವರು ಭರವಸೆ ನೀಡಿದ್ದಾರೆ ಎಂದು ವೀರಶೈವ ಲಿಂಗಾಯತ ಸಮಾಜದ ಮುಖಂಡರೊಬ್ಬರು ಪ್ರಜಾವಾಣಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.