ಕಲಬುರಗಿ: ‘ಯಾವುದೇ ಪಕ್ಷದ ನಾಯಕ ಇನ್ನೊಬ್ಬ ನಾಯಕನ ಮತ ಕ್ಷೇತ್ರಕ್ಕೆ ಹೋಗಿ, ಅವರನ್ನು ನಾಯಿ ಎಂದು ಬೈದ ಮೇಲೂ ಅವರನ್ನು ಸ್ವಾಗತ ಮಾಡಿ ಹೂವಿನ ಹಾರ ಹಾಕುತ್ತಾರಾ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಪ್ರಶ್ನಿಸಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಜಿಲ್ಲೆಗೆ ಬಂದು ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ತಕ್ಷಣವೇ ಪ್ರಿಯಾಂಕ್ ಅವರ ತವರು ಕ್ಷೇತ್ರಕ್ಕೆ ಹೋಗಿದ್ದರಿಂದ ಕಾರ್ಯಕರ್ತರು ಬೈದಿದ್ದನ್ನು ಪ್ರಶ್ನಿಸಿ ಕ್ಷಮೆಗೆ ಒತ್ತಾಯಿಸಿದ್ದಾರೆ. ಇದೊಂದು ಸ್ವಾಭಾವಿಕ ಪ್ರತಿಕ್ರಿಯೆ’ ಎಂದರು.
‘ನಾರಾಯಣಸ್ವಾಮಿ ಅವರನ್ನು ಕೂಡಿ ಹಾಕುವಂತೆ ಪ್ರಿಯಾಂಕ್ ಅವರು ಪ್ರಚೋದನೆ ಕೊಟ್ಟಿಲ್ಲ. ವಿನಾಕಾರಣ ಬೈದು ಚಿತ್ತಾಪುರಕ್ಕೆ ಹೋಗಿದ್ದರಿಂದ ಅಲ್ಲಿನವರು ಸಹಜವಾಗಿ ಕೇಳಿದ್ದಾರೆ. ಅವರನ್ನು ಕೂಡಿಹಾಕುವಲ್ಲಿ ಪ್ರಿಯಾಂಕ್ ಅವರ ಪಾತ್ರವಿಲ್ಲ. ಬೈಯಿಸಿಕೊಂಡ ಪ್ರಿಯಾಂಕ್ ಅವರೇ ಸಂತ್ರಸ್ತರಾಗಿದ್ದಾರೆ. ಆದರೆ, ನಾರಾಯಣಸ್ವಾಮಿ ತಾವೇ ಸಂತ್ರಸ್ತರಂತೆ ವರ್ತಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.
‘ವಿವೇಕ ಕಳೆದುಕೊಂಡ ಬಿಜೆಪಿ ನಾಯಕರ ಬುದ್ಧಿ ಭ್ರಷ್ಟವಾಗಿದೆ. ಅಧಿಕಾರ ಕಳೆದುಕೊಂಡ ಹತಾಶೆಯರಾಗಿ ಯಾವ ವಿಚಾರಕ್ಕೆ ಪ್ರತಿಭಟನೆ, ಟೀಕೆ ಮಾಡಬೇಕು ಎಂಬುದು ಗೊತ್ತಿಲ್ಲ. ಬಿಜೆಪಿಯ ವರಿಷ್ಠರು ಇದನ್ನು ಗಮನಿಸಬೇಕು. ಅನುಭವದ ಕೊರತೆಯಿಂದಾಗಿ ನಾರಾಯಣಸ್ವಾಮಿ ಅವರಿಗೆ ವಿಧಾನ ಪರಿಷತ್ತಿನ ವಿಪಕ್ಷದ ನಾಯಕನ ಸ್ಥಾನ ನಿರ್ವಹಣೆ ಮಾಡಲು ಆಗುತ್ತಿಲ್ಲ. ಸಂಯಮ ಕಳೆದುಕೊಂಡು ಪಕ್ಷಕ್ಕೆ ಮುಜುಗರ ತರುತ್ತಿರುವವರನ್ನು ವಿಪಕ್ಷ ಸ್ಥಾನದಿಂದ ವಜಾ ಮಾಡಬೇಕು’ ಎಂದು ಹೇಳಿದರು.
‘ಕಲಬುರಗಿಯಲ್ಲಿ ವಿರೇಂದ್ರ ಪಾಟೀಲ ಆದಿಯಾಗಿ ಇಲ್ಲಿಯವರೆಗಿನ ಎಲ್ಲ ಕಾಂಗ್ರೆಸ್ ನಾಯಕರು ಸಾರ್ವಜನಿಕರ ಹಿತಾಸಕ್ತಿಗಾಗಿ ಕೆಲಸ ಮಾಡಿದ್ದಾರೆ. ವಿರೋಧ ಪಕ್ಷದವರನ್ನು ಸದೆ ಬಡೆಯುವ ರಾಜಕಾರಣ ಮಾಡಿಲ್ಲ. ಬಿಜೆಪಿಗರ ನಡೆ ನೋಡಿದ ಜನರು ನಗುತ್ತಿದ್ದಾರೆ. ಪ್ರಿಯಾಂಕ್ ಅವರಿಗೆ ವಿನಾಕಾರಣ ಬೈದಿರುವುದ ಅಕ್ಷಮ್ಯ ಅಪರಾಧ. ನಾರಾಯಣಸ್ವಾಮಿ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೇಷ್ಮೆ ಉದ್ದಿಮೆಗಳ ನಿಗಮದ ಅಧ್ಯಕ್ಷೆ ಕನೀಜ್ ಫಾತಿಮಾ, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಮುಖಂಡ ಸುಭಾಷ್ ರಾಠೋಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.