ADVERTISEMENT

ಆಳಂದ | ಸರ್ಕಾರಿ ಶಾಲೆಗೆ ಹಳೆಯ ವಿದ್ಯಾರ್ಥಿಗಳ ನೆರವು

ಜವಳಗಾ(ಜೆ): ‘ನನ್ನ ಶಾಲೆ ನನ್ನ ಜವಾಬ್ದಾರಿ’ಗೆ ಕಾರ್ಯರೂಪ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 5:48 IST
Last Updated 14 ಫೆಬ್ರುವರಿ 2024, 5:48 IST
 ಜವಳಗಾ ಜೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್ ಕಲಿಯುತ್ತಿರುವ ವಿದ್ಯಾರ್ಥಿಗಳು.
 ಜವಳಗಾ ಜೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್ ಕಲಿಯುತ್ತಿರುವ ವಿದ್ಯಾರ್ಥಿಗಳು.   

ಆಳಂದ: ಇತ್ತೀಚಿಗಷ್ಟೇ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸರ್ಕಾರಿ ಶಾಲೆಗಳು ಹಳೆಯ ವಿದ್ಯಾರ್ಥಿಗಳ ನೆರವಿನಿಂದ ಅಭಿವೃದ್ಧಿ ಕಾಣಲಿ ಎಂದು ನನ್ನ ಶಾಲೆ ನನ್ನ ಜವಾಬ್ದಾರಿ ಎಂಬ ನೂತನ ಕಾರ್ಯಕ್ರಮವನ್ನು ಘೋಷಿಸಿದ್ದಾರೆ. ಆದರೆ ಅದು ಸರ್ಕಾರದ ಮಟ್ಟದಲ್ಲಿ ಅನುಷ್ಠಾನ ಆಗುವುದಕ್ಕಿಂತ ಮುಂಚೆಯೇ ಜವಳಗಾ(ಜೆ) ಗ್ರಾಮದ ವಿದ್ಯಾರ್ಥಿಗಳು ತಮ್ಮ ಶಾಲೆಯಲ್ಲಿ ಅನುಷ್ಠಾನಗೊಳಿಸಿದ್ದಾರೆ.

ತಾಲ್ಲೂಕಿನ ಜವಳಗಾ(ಜೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ಶಾಲೆಗೆ ಬೇಕಾದ ಸೌಲಭ್ಯಗಳು ಒದುಗಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಸದ್ಯ ಗ್ರಾಮದಲ್ಲಿ 1ರಿಂದ 8ನೇ ತರಗತಿಯವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದ್ದು, 141 ವಿದ್ಯಾರ್ಥಿಗಳು ಇದ್ದಾರೆ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿದ್ದರಿಂದ ಜನರು ಹೆಚ್ಚಾಗಿ ಮರಾಠಿ ಮತ್ತು ಕನ್ನಡ ಮಾತನಾಡುತ್ತಾರೆ.

ADVERTISEMENT

ಆಂಗ್ಲ ಮಾಧ್ಯಮದ ಹಾವಳಿ ಹಾಗೂ ಮರಾಠಿ ಭಾಷೆ ನಡುವೆಯೂ ಕನ್ನಡ ಶಾಲೆಗಳು ಉಳಿಯಲಿ, ಬೆಳೆಯಲಿ ಎಂಬುದು ಹಳೆಯ ವಿದ್ಯಾರ್ಥಿಗಳ ಆಶಯ. ತಾವು ಕಲಿತ ಶಾಲೆಗೆ ಏನಾದರೂ ಅಳಿಲು ಸೇವೆ ಮಾಡಬೇಕು ಎಂದು ನಿಶ್ಚಯಿಸಿದ ಹಳೆಯ ವಿದ್ಯಾರ್ಥಿಗಳು, ಶಾಲೆಗೆ ಬೇಕಾದ ಉಪಕರಣಗಳನ್ನು ನೀಡಿ ಮತ್ತೇ ಸರ್ಕಾರಿ ಶಾಲೆಗಳ ಕಡೆ ವಿದ್ಯಾರ್ಥಿಗಳು ತಿರುಗಿ ಬರುವಂತೆ ಮಾಡಿದ್ದಾರೆ.

ಶಾಲೆಯ ಮತ್ತೊಂದು ವಿಶೇಷವೆಂದರೆ ಇಲ್ಲಿ ಒಬ್ಬ ಗೌರವ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಪಕ್ಕದ ಅಣೂರ ಗ್ರಾಮದವರಾಗಿದ್ದು, ಬಿಎಸ್‌ಸಿ ಕಂಪ್ಯೂಟರ್ ಸೈನ್ಸ್ ಓದಿದ್ದಾರೆ. ಫಲಾಪೇಕ್ಷೆಯಿಲ್ಲದೇ ಊರಿನಿಂದ ಬಂದು ಮಕ್ಕಳಿಗೆ ಗಣಿತ ಹಾಗೂ ಕಂಪ್ಯೂಟರ್ ಶಿಕ್ಷಣ ನೀಡುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿ, ಈಗ ಬೇರೆ ಊರುಗಳಲ್ಲಿ ಉದ್ಯೋಗದಲ್ಲಿರುವ ಹಳೆಯ ವಿದ್ಯಾರ್ಥಿಗಳು ತಮ್ಮ ಕೈಲಾದ ದೇಣಿಗೆ ಸಂಗ್ರಹಿಸಿ ಶಾಲೆಗೆ ಬೇಕಾದ 11 ಕಂಪ್ಯೂಟರ್, 1 ಪ್ರಿಂಟರ್, 1 ಅಲ್ಮೇರಾ ಮತ್ತು ಶಾಲೆಯಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ನಡೆಸಲು 1 ಟೆಂಟ್ ಖರೀದಿಸಿ ಕೊಟ್ಟಿದ್ದಾರೆ. ಕೆಲವರು ನಗದು ಹಣ ನೀಡಿ, ಶಾಲೆಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಖರೀದಿಸಬಹುದು ಎಂದು ಇಚ್ಛೆ ವ್ಯಕ್ತಪಡಿಸಿದ್ದಾರೆ.

 ಜವಳಗಾ ಜೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್ ಕಲಿಯುತ್ತಿರುವ ವಿದ್ಯಾರ್ಥಿಗಳು.

ಹಳೆ ವಿದ್ಯಾರ್ಥಿಗಳು ಶಾಲೆಗೆ ಹೊಸ ಸ್ವರೂಪ ಕೊಡುವ ನಿಟ್ಟಿನಲ್ಲಿ ಒಂದು ಸಣ್ಣ ಸಹಾಯ ಮಾಡಿದ್ದೇವೆ. ಮುಂದೆಯೂ ಕೂಡ ಸಹಾಯ ಮಾಡುತ್ತೇವೆ. ಒಟ್ಟಿನಲ್ಲಿ ನಮಗೆ ಅಕ್ಷರ ಕಲಿಸಿದ ಶಾಲೆಯನ್ನು ಅಭಿವೃದ್ಧಿಗೊಳಿಸುವ ಹಂಬಲವಿದೆ-ಲಿಂಗರಾಜ ಲೆಂಡೆ ಹಳೆಯ ವಿದ್ಯಾರ್ಥಿ ಜವಳಗಾ(ಜೆ)

- ಹಳೆ ವಿದ್ಯಾರ್ಥಿಗಳು ಶಾಲೆ ಬೆಳವಣಿಗೆಗೆ ಸಹಕಾರ ನೀಡಿದ್ದಾರೆ. ಇದರಿಂದ ಖಾಸಗಿ ಆಂಗ್ಲ್ ಮಾಧ್ಯಮ ಹಾಗೂ ನೆರೆಯ ಮಹಾರಾಷ್ಟ್ರಕ್ಕೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಬಹುದು ಎಂಬ ನಿರೀಕ್ಷೆಯಿದೆ. ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಆದ್ಯತೆ ನೀಡಿದರೇ ಸಮಸ್ಯೆ ಬಗೆಹರಿದಂತೆ ಆಗುತ್ತದೆ- ಸೂರ್ಯಕಾಂತ ಮಂಡ್ಲೆ ಮುಖ್ಯಶಿಕ್ಷಕ ಜವಳಗಾ(ಜೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.