ಚಿತ್ತಾಪುರ: ಮೊಹರಂ ಹಬ್ಬವು ಮುಸ್ಲಿಮರು ಮತ್ತು ಹಿಂದೂಗಳು ಸಾಮೂಹಿಕವಾಗಿ ಆಚರಿಸುವ ಹಬ್ಬವಾಗಿದೆ. ಎಲ್ಲಾ ಧರ್ಮದವರು ಪರಸ್ಪರ ಗೌರವ, ಪ್ರೀತಿ, ವಿಶ್ವಾಸ, ನಂಬಿಕೆಯಿಂದ ಹಬ್ಬದ ಆಚರಣೆ ಮಾಡಬೇಕು. ಧಾರ್ಮಿಕ ಸೌಹಾರ್ದಕ್ಕೆ ಯಾರೂ ಧಕ್ಕೆ ತರುವ ಕೆಲಸ ಮಾಡಬಾರದು ಎಂದು ಕಾಳಗಿ ಸಿಪಿಐ ಜಗದೇವಪ್ಪಾ ಪಾಳಾ ಹೇಳಿದರು.
ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿ ಮೊಹರಂ ನಿಮಿತ್ತ ಮಾಡಬೂಳ ಪೊಲೀಸ್ ಠಾಣೆಯಿಂದ ಶನಿವಾರ ಆಯೋಜಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸಮಾಜದಲ್ಲಿ ಜನರು ಶಾಂತಿಯಿಂದ, ನೆಮ್ಮದಿಯಿಂದ, ಸಡಗರ, ಸಂತೋಷದಿಂದ ಹಬ್ಬವನ್ನು ಆಚರಿಸಿ ಸಂಭ್ರಮಿಸುವಂತೆ ಗ್ರಾಮಸ್ಥರು ನೋಡಿಕೊಳ್ಳಬೇಕು. ಮೊಹರಂ ಕೋಮುಸಾಮರಸ್ಯೆ ಗಟ್ಟಿಗೊಳಿಸುವ ಹಬ್ಬವಾಗಿದೆ. ಧರ್ಮಭೇದ ಮರೆತು ಜನರು ಹಬ್ಬ ಆಚರಣೆ ಮಾಡುತ್ತಾರೆ. ಯಾರಾದರೂ ಸಾರ್ವಜನಿಕ ಶಾಂತಿಗೆ ಭಂಗವುಂಟು ಮಾಡಿದರೆ, ಸಾಮಾಜಿಕ ಸಾಮರಸ್ಯೆಕ್ಕೆ ಧಕ್ಕೆ ತರುವ ಕೆಲಸ ಮಾಡಿದರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಎಚ್ಚರಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಲೀಲಾ ಜಗನ್ನಾಥ ಪಾಳೇದಕರ್, ಮಾಡಬೂಳ ಠಾಣೆಯ ಪಿಎಸ್ಐ ಚೇತನ್, ಪಿಎಸ್ಐ ಶೀಲಾದೇವಿ (ತನಿಖೆ), ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮುನಿಯಪ್ಪ ಕೊಳ್ಳಿ, ಗ್ರಾಮದ ಮುಖಂಡರಾದ ಡಾ.ದಾವೂದ್ ಪಟೇಲ್, ಅಬ್ದುಲ್ ಹಮೀದ್ ಯಾದಗಿರಿ, ಸಾಬಣ್ಣ ಕೊಳ್ಳಿ, ಸಾಬಣ್ಣ ಭರಾಟೆ, ರಮೇಶ ಕವಡೆ, ಶಿವಕುಮಾರ ಪಾಳೇದಕರ್, ಪ್ರಕಾಶ ಯಾದಗಿರಿ, ಗ್ರಾಮ ಪಂಚಾಯಿತಿ ಸದಸ್ಯರಾದ ಹಣಮಂತ ಭರಾಟೆ, ಅಸ್ಫಾಕ್ ಡಕಾರೆ, ಬಶೀರ್ ಮೋತಿಪಟೇಲ್, ಇಸಾಕ್ ಯಾದಗಿರಿ, ಈರಣ್ಣ ಕುರಕುಂಟಿ ಮತ್ತಿತರರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.