
ಕಲಬುರಗಿ: ‘ರಾಜ್ಯದಲ್ಲಿ ₹3,202 ಕೋಟಿಗೂ ಅಧಿಕ ಹಣ ಡೆಫ್ ಅಕೌಂಟ್‌ನಲ್ಲಿದೆ. ಕಲಬುರಗಿ ಜಿಲ್ಲೆಯಲ್ಲಿಯೇ 3.8 ಲಕ್ಷ ನಿಷ್ಕ್ರೀಯ ಖಾತೆಗಳಿದ್ದು, ₹118.67 ಕೋಟಿ ಹಣ ಡೆಫ್ ಅಕೌಂಟ್‌ನಲ್ಲಿದೆ. ಅದನ್ನು ಖಾತೆದಾರರು, ಅವರು ಇಲ್ಲದಿದ್ದರೆ ವಾರಸುದಾರರು ಹಿಂಪಡೆಯಬೇಕು’ ಎಂದು ಬೆಂಗಳೂರಿನ ಆರ್‌ಬಿಐ ಸಹಾಯಕ ಮಹಾ ಪ್ರಬಂಧಕ (ಎಜಿಎಂ) ಬೂಬುಲ್ ಬರ್ದೋಯಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಹಳೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನದಲ್ಲಿ ಮಾತನಾಡಿದ ಅವರು, ‘ದೀರ್ಘಕಾಲದಿಂದ ಹಕ್ಕು ಪಡೆಯದೆ ಉಳಿದಿರುವ ಬ್ಯಾಂಕ್ ಠೇವಣಿಗಳು, ವಿಮಾ ಕಂತುಗಳು ಮತ್ತು ಷೇರುಗಳನ್ನು ಅವುಗಳ ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರಿಗೆ ಹಸ್ತಾಂತರಿಸುವ ಉದ್ದೇಶದಿಂದ ಭಾರತದ ಹಣಕಾಸು ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಬ್ಯಾಂಕ್, ವಿಮೆ ಮತ್ತು ಇತರ ಇಲಾಖಾ ಶಾಖೆಗಳಲ್ಲಿ ಅಭಿಯಾನ ನಡೆಯಲಿದೆ. ದೀರ್ಘಕಾಲದವರೆಗೆ ಹಕ್ಕು ಪಡೆಯದ ಹಣಕಾಸಿನ ಸ್ವತ್ತುಗಳನ್ನು ಹಸ್ತಾಂತರಿಸುವುದು ಇದರ ಮುಖ್ಯ ಉದ್ದೇಶವಾಗಿದೆ’ ಎಂದು ತಿಳಿಸಿದರು.
ಜಿಲ್ಲಾ ಮಾರ್ಗದರ್ಶಿ (ಲೀಡ್) ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರವಿಗೌಡ ಮಾತನಾಡಿ, ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಅಭಿಯಾನ ನಡೆಯುತ್ತಿದೆ. ಬ್ಯಾಂಕ್, ವಿಮೆ, ಅಂಚೆ, ಷೇರು ಮತ್ತಿತರ ಹಣಕಾಸು ಸಂಸ್ಥೆಗಳಲ್ಲಿರುವ ನಿಮ್ಮ ಹಣವನ್ನು ವಾರಸುದಾರರು ವಾಪಸ್ ಪಡೆಯಬಹುದಾಗಿದೆ. ಖಾತೆದಾರರು ಮೃತಪಟ್ಟಿದ್ದರೆ ಅವರ ಕುಟುಂಬದವರು, ಅವಲಂಬಿತರು ಹಣ, ಪರಿಹಾರ ಪಡೆಯಲು ಸಾಧ್ಯವಾಗುವಂತೆ ಬ್ಯಾಂಕಿನ ಸಿಬ್ಬಂದಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು’ ಎಂದು ಹೇಳಿದರು. ಸಾರ್ವಜನಿಕರೂ ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್, ಕಲುರಗಿಯ ಎಲ್ಲ ಬ್ಯಾಂಕ್ ಮತ್ತು ಅವುಗಳ ಶಾಖೆಯ ವ್ಯವಸ್ಥಾಪಕರು ಮತ್ತು ಬ್ಯಾಂಕಿನ ಸಿಬ್ಬಂದಿ, ಎಲ್.ಐ.ಸಿ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಏನಿದು ಡೆಫ್ ಅಕೌಂಟ್?
ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ. ಇದು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ವಹಿಸುವ ನಿಧಿಯಾಗಿದ್ದು 10 ವರ್ಷಗಳವರೆಗೆ ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗಳಿಂದ ಹಣವನ್ನು ವರ್ಗಾಯಿಸಲಾಗುತ್ತದೆ. ಒಂದು ಬ್ಯಾಂಕ್ ಖಾತೆಯು 10 ವರ್ಷಗಳವರೆಗೆ ಯಾವುದೇ ವಹಿವಾಟುಗಳಿಲ್ಲದೆ ನಿಷ್ಕ್ರಿಯವಾಗಿದ್ದರೆ ಆ ಖಾತೆಯ ಹಣವನ್ನು ಬ್ಯಾಂಕ್ RBI ನಿರ್ವಹಿಸುವ DEAF ನಿಧಿಗೆ ವರ್ಗಾಯಿಸುತ್ತದೆ. ಈ ಹಣವು ಖಾತೆದಾರರದ್ದೇ ಆಗಿರುತ್ತದೆ ಮತ್ತು ಅದನ್ನು ಹಿಂಪಡೆಯಬಹುದು.
12334 ರೈತರ ಖಾತೆ ಸೇರದ ಹಣ
ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್ ಪಟೇಲ್ ‘ರೈತರ ಖಾತೆಗೆ ಬೆಳೆಹಾನಿ ಪರಿಹಾರದ ಮೊತ್ತ ಹಾಕಲಾಗಿದೆ. ಆದರೆ ಆಧಾರ್ ಲಿಂಕ್ ಆಗದ ಹೆಸರು ವ್ಯತ್ಯಾಸವಾದ ನಾನಾ ಕಾರಣಗಳಿಗೆ ಜಿಲ್ಲೆಯ 12334 ರೈತರ ಖಾತೆಗೆ ಹಣ ಸಂದಾಯವಾಗಿಲ್ಲ. ಇನ್ನು 3800 ರೈತರ ಖಾತೆಗಳಿಗೆ ಆಧಾರ್ ಲಿಂಕ್ ಆಗದ ಕಾರಣ ಬೆಳೆವಿಮೆ ಪರಿಹಾರವೂ ಅವರ ಖಾತೆಗೆ ಸೇರಿಲ್ಲ. ಎರಡ್ಮೂರು ವರ್ಷಗಳಿಂದ ಹಾಗೇ ಉಳಿದಿದೆ. ಬ್ಯಾಂಕಿನವರು ರೈತರನ್ನು ಸಂಪರ್ಕಿಸಿ ಸಮಸ್ಯೆ ಸರಿಪಡಿಸಬೇಕು. ರೈತರು ಬ್ಯಾಂಕಿಗೆ ಬಂದಾಗ ಬೆಂಬಲ ನೀಡಬೇಕು. ಸರ್ಕಾರಿ ಯೋಜನೆಗಳ ದುಡ್ಡು ಅವರ ಶ್ರಮದ ದುಡ್ಡು ಅವರದೇ ಖಾತೆ ಸೇರುವಂತೆ ನೋಡಿಕೊಳ್ಳಬೇಕು’ ಎಂದು ಬ್ಯಾಂಕಿನ ಅಧಿಕಾರಿಗಳಿಗೆ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.