ADVERTISEMENT

‘ಮಾನವತಾವಾದದ ಮಹಾನ್ ಚೇತನ’

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮಹಾಪರಿನಿರ್ವಾಣ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 4:46 IST
Last Updated 7 ಡಿಸೆಂಬರ್ 2022, 4:46 IST
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಬಾಬಾಸಾಹೇಬರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಬಾಬಾಸಾಹೇಬರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು   

ಕಲಬುರಗಿ: ‘ಡಾ. ಬಿ.ಆರ್. ಅಂಬೇಡ್ಕರ್ ಅವರು ಮಾನವತಾವಾದದ ಮಹಾನ್ ಹೋರಾಟಗಾರರಾಗಿದ್ದರು. ಅವರು ಶ್ರೇಷ್ಠ ಅರ್ಥಶಾಸ್ತ್ರಜ್ಞ, ರಾಜಕೀಯ ಚಿಂತಕ, ಸಮಾಜ ಸುಧಾರಕರಾಗಿದ್ದರು’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಚಂದ್ರಕಾಂತ ಎಂ.ಯಾತನೂರ ಹೇಳಿದರು.

ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ. ಬಾಬಾಸಾಹೇಬ್‌ ಅಂಬೇಡ್ಕರ್ ಅವರ 66ನೇ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆ ಸಮಯದಲ್ಲಿ ಪ್ರತಿದಿನ 16–18 ಗಂಟೆ ಕೆಲಸ ಮಾಡುತ್ತಿದ್ದರು. ಸಂವಿಧಾನ ರಚನೆಯ ಸಂಪೂರ್ಣ ಜವಾಬ್ದಾರಿ ಅವರ ಮೇಲಿತ್ತೆಂದು ಕರಡು ಸಮಿತಿಯ ಸದಸ್ಯ ಟಿ. ಕೃಷ್ಣಮಾಚಾರಿ ಹೇಳುತ್ತಾರೆ’ ಎಂದರು.

ADVERTISEMENT

‘ಭಾರತದ ಸಂವಿಧಾನವು ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದಾಗಿದೆ. ಅಗತ್ಯವಿದ್ದರೆ ಸಂವಿಧಾನದ ತಿದ್ದುಪಡಿಗೆ ಅವಕಾಶವಿದೆ. ಹಿಂದಿನ ಭಾರತ ಸರ್ಕಾರವು ಸಂವಿಧಾನವನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿತು. ಆದರೆ, ಸಮಿತಿಯು ಸಂವಿಧಾನವನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಹೇಳಿದೆ. ಸಂವಿಧಾನದ ಮೂಲ ರಚನೆಯನ್ನು ಬದಲಾಯಿಸಲು ಅಥವಾ ತಿದ್ದಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ’ ಎಂದು ತಿಳಿಸಿದರು.

‘ಡಾ. ಬಿ.ಆರ್. ಅಂಬೇಡ್ಕರ್. ಮಹಿಳಾ ಸಬಲೀಕರಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹಿಂದೂ ಕೋಡ್ ಬಿಲ್‍ನಿಂದಾಗಿ ಮಹಿಳೆಯರು ಪುರುಷರೊಂದಿಗೆ ಸಮಾನ ಹಕ್ಕುಗಳನ್ನು ಮತ್ತು ಆಸ್ತಿಯಲ್ಲಿ ಸಮಾನ ಹಕ್ಕುಗಳನ್ನು ಅನುಭವಿಸಲು ಸಾಧ್ಯವಾಯಿತು. ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ಮೊದಲ ದೇಶ ಭಾರತವಾಗಿದ್ದು, ಅದರ ಶ್ರೇಯಸ್ಸು ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ’ ಎಂದರು.

ಸಿಯುಕೆಯ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅಧ್ಯಕ್ಷತೆ ವಹಿಸಿ, ‘ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸ್ವಾತಂತ್ರ್ಯ ಚಳವಳಿ, ಸಾಮಾಜಿಕ ಸುಧಾರಣೆಗಳು ಮತ್ತು ಸಂವಿಧಾನದ ಮೂಲಕ ನವ ಭಾರತಕ್ಕೆ ಹೊಸ ದೃಷ್ಟಿಕೋನವನ್ನು ನೀಡಿದ್ದಾರೆ’ ಎಂದು ಹೇಳಿದರು.

‘ಬ್ರಿಟಿಷರು ಹೇಳುತ್ತಿದ್ದರು ನಾವು ಒಮ್ಮೆ ದೇಶ ಬಿಟ್ಟು ಹೋದರೆ ಭಾರತೀಯರು ತಮ್ಮನ್ನು ತಾವು ಆಳಲು ಸಾಧ್ಯವಿಲ್ಲ. ಆದರೆ ಇಂದು ಭಾರತ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಭಾರತೀಯ ಮೂಲದವರು ಬ್ರಿಟಿಷರನ್ನು ಆಳುತ್ತಿದ್ದಾರೆ. ನಾವು ಅಮೆರಿಕಕ್ಕಿಂತ ಹೆಚ್ಚು ಪ್ರಜಾಪ್ರಭುತ್ವವಾದಿಗಳು. ಅಮೆರಿಕದ ಅಧ್ಯಕ್ಷರಾಗಿ ಇನ್ನುವರೆಗೆ ಯಾವುದೇ ಮಹಿಳೆ ಆಯ್ಕೆಯಾಗಿಲ್ಲ. ಆದರೆ ಭಾರತದಲ್ಲಿ ಬಡವರು ಪ್ರಧಾನಿಯಾಗಿದ್ದಾರೆ ಮತ್ತು ಬುಡಕಟ್ಟು ಮಹಿಳೆ ಭಾರತದ ಅಧ್ಯಕ್ಷರಾಗಿದ್ದಾರೆ. ಇದಕ್ಕೆಲ್ಲ ನಮ್ಮ ಸಂವಿಧಾನವೇ ಕಾರಣ’ ಎಂದರು.

‘ನಮ್ಮ ವಿದ್ಯಾರ್ಥಿಗಳ ರಕ್ತದಾನ ಮಾಡುವ ಮನೋಭಾವವನ್ನು ಕಂಡು ನಾನು ರೋಮಾಂಚನಗೊಂಡೆ. ರಕ್ತ ಕೊಡುವುದೆಂದರೆ ಪ್ರಾಣ ಉಳಿಸುವುದೆಂದರ್ಥ. ಇದೆ ನಾವು ಸಮಾಜಕ್ಕೆ ಕೊಡುವ ಕೊಡುಗೆ. ಗುಣಮಟ್ಟದ ಕಾರಣದಿಂದಾಗಿ ನಮ್ಮಲ್ಲಿ ಹೆಚ್ಚಿನವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿಲ್ಲ. ನಾವೆಲ್ಲರೂ ಬದ್ಧತೆ ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡದಿದ್ದರೆ ಮುಂದೊಂದು ದಿನ ನಮ್ಮ ವಿಶ್ವವಿದ್ಯಾಲಯಗಳೂ ಶಾಲೆಗಳಂತಾಗುತ್ತವೆ ಮತ್ತು ಜನರು ಖಾಸಗಿ ವಿಶ್ವವಿದ್ಯಾಲಯಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದ್ದರಿಂದ ಸಾರ್ವಜನಿಕ ಸಂಸ್ಥೆಗಳನ್ನು ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದರು.

ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಘಟಕವು ಜಿಮ್ಸ್ ಮತ್ತು ಎಚ್‍ಡಿಎಫ್‍ಸಿ ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ಸುಮಾರು 250 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ಎನ್ಎಸ್ಎಸ್ ಸಂಯೋಜಕ ಡಾ.ಶಿವಂ ಮಿಶ್ರಾ ಮತ್ತು ವಿಶ್ವವಿದ್ಯಾಲಯದ ವೈದ್ಯಾಧಿಕಾರಿ ಡಾ.ಜ್ಯೋತಿ ತೆಗನೂರ ರಕ್ತದಾನ ಚಟುವಟಿಕೆಗಳನ್ನು ಸಂಯೋಜಿಸಿದರು.

ಸಿಯುಕೆ ಪ್ರಭಾರಿ ಕುಲಸಚಿವ ಪ್ರೊ. ಚನ್ನವೀರ ಆರ್.ಎಂ. ಮಾತನಾಡಿದರು. ಡಾ.ಸಂಗಮೇಶ ಜೆ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕ ಡಾ.ನಿತಿನ್ ಬಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.