ADVERTISEMENT

ಜಗಜೀವನ ರಾಮ್ ಕೊಡುಗೆ ಅಪಾರ: ಆರ್.ವೆಂಕಟೇಶಕುಮಾರ್

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 10:03 IST
Last Updated 5 ಏಪ್ರಿಲ್ 2019, 10:03 IST
ಡಾ.ಬಾಬು ಜಗಜೀವನ ರಾಮ್ ಅವರ 112ನೇ ಜಯಂತ್ಯುತ್ಸವ ಅಂಗವಾಗಿ ಜಗಜೀವನ ರಾಮ್ ಅವರ ಪುತ್ಥಳಿಗೆ ಜಿಲ್ಲಾಡಳಿತ ವತಿಯಿಂದ ಮಾಲಾರ್ಪಣೆ ಮಾಡಲಾಯಿತು
ಡಾ.ಬಾಬು ಜಗಜೀವನ ರಾಮ್ ಅವರ 112ನೇ ಜಯಂತ್ಯುತ್ಸವ ಅಂಗವಾಗಿ ಜಗಜೀವನ ರಾಮ್ ಅವರ ಪುತ್ಥಳಿಗೆ ಜಿಲ್ಲಾಡಳಿತ ವತಿಯಿಂದ ಮಾಲಾರ್ಪಣೆ ಮಾಡಲಾಯಿತು   

ಕಲಬುರ್ಗಿ: ‘ಡಾ.ಬಾಬು ಜಗಜೀವನ ರಾಮ್ ಅವರು ತಮ್ಮ ಬದುಕಿನುದ್ದಕ್ಕೂ ಎಲ್ಲಾ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಮಹಾನ್ ನಾಯಕರಾಗಿದ್ದಾರೆ’ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಹೇಳಿದರು.

ನಗರದ ಸಾರ್ವಜನಿಕ ಉದ್ಯಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪಾಲಿಕೆ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನ ರಾಮ್ ಅವರ 112ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸುವಲ್ಲಿ ಬಾಬೂಜಿ ಕೊಡುಗೆ ಅಪಾರವಾಗಿದೆ. ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಎಲ್ಲರಲ್ಲೂ ಸಮಾನತೆ ತರುವುದು ಅವರ ಮುಖ್ಯ ಉದ್ದೇಶವಾಗಿತ್ತು. ದೇಶದಲ್ಲಿ ಸಮರ್ಪಕವಾಗಿ ಎಲ್ಲರಿಗೂ ಆಹಾರ ದೊರೆಯದೇ ಇದ್ದಾಗ ಕೇಂದ್ರದಲ್ಲಿ ಕೃಷಿ ಸಚಿವರಾಗಿ ಕೃಷಿಯಲ್ಲಿ ಗಣನೀಯ ಬದಲಾವಣೆ ತಂದರು. ಹಸಿರು ಕ್ರಾಂತಿ ರೂಪಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿದರು. ಆಹಾರ ಉತ್ಪಾದನೆ ಹೆಚ್ಚಿಸಿದರು’ ಎಂದು ಬಣ್ಣಿಸಿದರು.

ADVERTISEMENT

‘ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಟ್ಟಿಗೆ ಭಾರತವನ್ನು ಸೇರಿಸುವಲ್ಲಿ ಜಗಜೀವನ ರಾಮ್ ಅವರ ಪಾತ್ರ ಮಹತ್ವದ್ದಾಗಿದೆ. ಸಾಮಾಜಿಕ ಸುಧಾರಣೆ, ಹಸಿರು ಕ್ರಾಂತಿ ಅಲ್ಲದೇ ಇನ್ನೂ ಹಲವಾರು ಕ್ಷೇತ್ರಗಳ ಅಭಿವೃದ್ಧಿಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ’ ಎಂದು ಹೇಳಿದರು.

ಇದಕ್ಕೂ ಮುನ್ನ ಸಾರ್ವಜನಿಕ ಉದ್ಯಾನದಲ್ಲಿರುವ ಡಾ.ಬಾಬು ಜಗಜೀವನ ರಾಮ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ ಪಿ., ಪಾಲಿಕೆ ಆಯುಕ್ತೆ ಬಿ.ಫೌಜಿಯಾ ತರನ್ನುಮ್, ಶಾಮ ನಾಟಿಕಾರ, ಬಾಬು ಸುಂಟಾಣ, ಚಂದ್ರಿಕಾ ಪರಮೇಶ್ವರ, ರಾಜು ವಾಡೇಕರ, ಶಿಷ್ಟಾಚಾರ ತಹಶೀಲ್ದಾರ್ ಪ್ರಕಾಶ ಚಿಂಚೋಳಿಕರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.