ADVERTISEMENT

ಫೆ 5, 6, 7ರಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಡಾ.ಮನು ಬಳಿಗಾರ

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಘೋಷಣೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 14:13 IST
Last Updated 12 ನವೆಂಬರ್ 2019, 14:13 IST
ಮನು ಬಳಿಗಾರ
ಮನು ಬಳಿಗಾರ   

ಕಲಬುರ್ಗಿ: ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನ 2020ರ ಫೆಬ್ರುವರಿ 5, 6 ಹಾಗೂ 7ರಂದು ಇಲ್ಲಿನ ಗುಲಬರ್ಗಾ ವಿ.ವಿ. ಆವರಣದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ ಘೋಷಿಸಿದರು.

ವಿ.ವಿ. ಆವರಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಫೆಬ್ರುವರಿ ಎರಡನೇ ವಾರದಿಂದ ಶಾಲಾ ಪರೀಕ್ಷೆಗಳು ಆರಂಭವಾಗಲಿರುವುದರಿಂದ ಫೆಬ್ರುವರಿ ಮೊದಲ ವಾರವೇ ಮುಗಿಸಲು ನಿರ್ಧರಿಸಿದ್ದೇವೆ. ಡಿಸೆಂಬರ್‌ನಲ್ಲಿ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು’ ಎಂದರು.

‘ಗುಲಬರ್ಗಾ ವಿ.ವಿ.ಯ ಮುಖ್ಯ ಕ್ರೀಡಾಂಗಣದಲ್ಲಿ ಮುಖ್ಯ ವೇದಿಕೆ ನಿರ್ಮಾಣವಾಗಲಿದೆ. ವಿ.ವಿ.ಯ ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಂಗಣ ಹಾಗೂ ಆಡಳಿತ ಕಚೇರಿ ಇರುವ ಕಾರ್ಯಸೌಧದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಎರಡು ಸಮಾನಾಂತರ ಗೋಷ್ಠಿಗಳನ್ನು ನಡೆಸಲಾಗುವುದು. ಪ್ರತಿನಿಧಿಗಳು ಜನವರಿ ಮೊದಲ ವಾರದವರೆಗೆ ಹೆಸರು ನೋಂದಾಯಿಸಿಕೊಳ್ಳಬಹುದು’ ಎಂದು ಹೇಳಿದರು.

ADVERTISEMENT

‘ಸಮ್ಮೇಳನಕ್ಕೆ ₹ 10ರಿಂದ ₹ 12 ಕೋಟಿ ವೆಚ್ಚವಾಗಲಿದೆ. ಕಲಬುರ್ಗಿಯ ಸಂಘ ಸಂಸ್ಥೆಗಳು, ದಾನಿಗಳು ಊಟದ ವ್ಯವಸ್ಥೆಯನ್ನು ವಹಿಸಿಕೊಳ್ಳಲು ಮುಂದೆ ಬಂದರೆ ₹ 1ರಿಂದ ₹ 1.5 ಕೋಟಿ ಕಡಿಮೆಯಾಗಬಹುದು. ಸುಮಾರು 75 ಸಾವಿರದಿಂದ 80 ಸಾವಿರ ಜನರು ಏಕಕಾಲಕ್ಕೆ ಊಟ ಮಾಡಲು ಅನುಕೂಲವಾಗುವಂತೆ 150 ಊಟದ ಕೌಂಟರ್‌ಗಳನ್ನು ತೆರೆಯಲಾಗುವುದು. 750 ಪುಸ್ತಕ ಹಾಗೂ ವಾಣಿಜ್ಯ ಮಳಿಗೆಗಳನ್ನು ವೇದಿಕೆ ಬಳಿ ನಿರ್ಮಿಸಲಾಗುವುದು’ ಎಂದರು.

‘ಸಮ್ಮೇಳನಾಧ್ಯಕ್ಷರು ಕಲ್ಯಾಣ ಕರ್ನಾಟಕದವರೇ ಆಗಬೇಕೋ, ಹೊರಗಿನವರು ಆಗಬೇಕು ಎಂಬುದರ ಬಗ್ಗೆ ಈಗಲೇ ಏನನ್ನೂ ಹೇಳಲಾರೆ. ಕಾರ್ಯಕಾರಿ ಸಮಿತಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ಪ್ರಾದೇಶಿಕ ಮಿತಿಗಳನ್ನು ದಾಟುವುದು ಸಾಧ್ಯವಾದರೆ ಸಾಹಿತ್ಯಿಕ ಸಾಂಸ್ಕೃತಿಕ ಮಿತಿಗಳನ್ನೂ ದಾಟಬಹುದು. ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಸಮ್ಮೇಳನಾಧ್ಯಕ್ಷರು ಯಾರಾಗಬೇಕು ಎಂಬ ಬಗ್ಗೆ ವೈಯಕ್ತಿಕ ಅಭಿಪ್ರಾಯವನ್ನು ಹೇಳಲಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕಲಬುರ್ಗಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಸಮಾಲೋಚನಾ ಸಭೆಯಲ್ಲಿ ಸಾಹಿತ್ಯಾಸಕ್ತರು ಮಂಡಿಸಿದ ಅಭಿಪ್ರಾಯಗಳನ್ನು ಒಪ್ಪಿಕೊಂಡಿದ್ದೇನೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ಸವಾಲುಗಳು ಹಾಗೂ ಪರಿಹಾರಗಳು, ನೈಸರ್ಗಿಕ ವಿಕೋಪ, ದಲಿತ ಬಂಡಾಯ ಸಾಹಿತ್ಯಗೋಷ್ಠಿ, ಈ ಭಾಗದ ತತ್ವಪದಕಾರರು, ಶರಣರು, ಸಂತರ ಕೊಡುಗೆಗಳು, ಚಿತ್ರಕಲೆ, ಸಂಗೀತ, ಕೃಷಿ, ನೀರಾವರಿ ಬಗ್ಗೆಯೂ ಗೋಷ್ಠಿಗಳನ್ನು ನಡೆಸಲಾಗುವುದು. ಈ ಭಾಗದ ಪ್ರತಿಭೆಗಳಿಗೆ ಅನ್ಯಾಯ ಆಗದಂತೆಯೂ ಸಮ್ಮೇಳನದಲ್ಲಿ ಎಚ್ಚರ ವಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.