ADVERTISEMENT

ವೈದ್ಯರಿಗೆ ನಿರಂತರ ಕಲಿಕೆ ಅಗತ್ಯ: ಡಾ. ನಿಷ್ಠಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 4:33 IST
Last Updated 26 ಏಪ್ರಿಲ್ 2024, 4:33 IST
ಕೆಬಿಎನ್‌ ವೈದ್ಯಕೀಯ ಕಾಲೇಜಿನಲ್ಲಿ ಆಯೋಜಿಸಿದ್ದ ಪದವಿ ದಿನಾಚರಣೆ ಕಾರ್ಯಕ್ರಮದಲ್ಲಿ ಶರಣಬಸವ ವಿ.ವಿ. ಉಪಕುಲಪತಿ ಡಾ.ನಿರಂಜನ್ ನಿಷ್ಠಿ ವಿದ್ಯಾರ್ಥಿನಿಗೆ ಪದವಿ ಪ್ರಮಾಣಪತ್ರ ಪ‍್ರದಾನ ಮಾಡಿದರು. ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೇನಿ, ಪ್ರೊ.ಅಲಿ ರಜಾ ಮೂಸ್ವಿ, ಸಿದ್ದೇಶ ಸಿರವಾರ, ಸಿದ್ಧಲಿಂಗ ಚೆಂಗಟಿ ಅವರನ್ನು ಕಾಣಬಹುದು
ಕೆಬಿಎನ್‌ ವೈದ್ಯಕೀಯ ಕಾಲೇಜಿನಲ್ಲಿ ಆಯೋಜಿಸಿದ್ದ ಪದವಿ ದಿನಾಚರಣೆ ಕಾರ್ಯಕ್ರಮದಲ್ಲಿ ಶರಣಬಸವ ವಿ.ವಿ. ಉಪಕುಲಪತಿ ಡಾ.ನಿರಂಜನ್ ನಿಷ್ಠಿ ವಿದ್ಯಾರ್ಥಿನಿಗೆ ಪದವಿ ಪ್ರಮಾಣಪತ್ರ ಪ‍್ರದಾನ ಮಾಡಿದರು. ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೇನಿ, ಪ್ರೊ.ಅಲಿ ರಜಾ ಮೂಸ್ವಿ, ಸಿದ್ದೇಶ ಸಿರವಾರ, ಸಿದ್ಧಲಿಂಗ ಚೆಂಗಟಿ ಅವರನ್ನು ಕಾಣಬಹುದು   

ಕಲಬುರಗಿ: ‘ವೈದ್ಯರು ಎಂಬಿಬಿಎಸ್, ಎಂ.ಡಿ. ಕಲಿತ ನಂತರವೂ ಪ್ರಾಕ್ಟೀಸ್ ಮಾಡುವ ಅವಧಿಯಲ್ಲಿ ಓದುತ್ತಾ ಇರಬೇಕು. ವೈದ್ಯರಾದ ತಕ್ಷಣ ಕಲಿಕೆ ನಿಲ್ಲುವುದಿಲ್ಲ. ನಿರಂತರ ಓದುವಿಕೆ ಮನುಷ್ಯನನ್ನು ಜ್ಞಾನಿ ಮತ್ತು ಪಂಡಿತರನ್ನಾಗಿ ಮಾಡುತ್ತದೆ’ ಎಂದು ಶರಣಬಸವ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ ನಿಷ್ಠಿ ಅಭಿಪ್ರಾಯಪಟ್ಟರು.

ಖಾಜಾ ಶಿಕ್ಷಣ ಸಂಸ್ಥೆಯ ಖಾಜಾ ಬಂದೇನವಾಜ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಈಚೆಗೆ ಆಯೋಜಿಸಿದ್ದ 2018ನೇ ಬ್ಯಾಚಿನ ವೈದ್ಯಕೀಯ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಇತ್ತೀಚೆಗೆ ವೈದ್ಯರ ಸಂಖ್ಯೆ ಹೆಚ್ಚಾಗುತ್ತಿದ್ದುˌ ವೈದ್ಯರಿಗೆ ವ್ಯಾಪಕ ಸ್ಪರ್ಧೆ ದೊರೆಯಲಿದೆ. ಅಲ್ಲದೇ ಕೃತಕ ಬುದ್ಧಿವಂತಿಕೆ ಕೂಡ ಕಠಿಣ ಸ್ಪರ್ಧೆ ಒಡ್ಡಲಿದೆ. ವೈದ್ಯರು ಕಾನೂನು, ವಾಣಿಜ್ಯ, ಇತಿಹಾಸದ ಜ್ಞಾನ ಹೊಂದಿದಲ್ಲಿ ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳಬಹುದು. ವೈದ್ಯರು ಒಳ್ಳೆಯ ಮನುಷ್ಯನಾಗಿರುವುದು ಎಲ್ಲಕ್ಕಿಂತ ಹೆಚ್ಚಿನ ಮಹತ್ವ’ ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕೆಬಿಎನ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಮಾತನಾಡಿ, ವೈದ್ಯಕೀಯ ಕ್ಷೇತ್ರ ವಾಣಿಜ್ಯೀಕರಣವಾಗಬಾರದು. ಇದು ಒಂದು ಪವಿತ್ರ ಕೆಲಸ. ದೇವರ ನಂತರ ವೈದ್ಯರೇ ರೋಗಿಗಳಿಗೆ ಸಹಾಯ ಮಾಡುವವರು. ವೈದ್ಯರು ಅಹಂಕಾರಿಗಳಾಗಬಾರದು. ಮಕ್ಕಳನ್ನು ವೈದ್ಯರನ್ನಾಗಿ ಮಾಡಿ ದೇಶ ಸೇವೆಯ ಕಾರ್ಯ ಮಾಡಿದ್ದಾರೆ ಎಂದು ಪಾಲಕರನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ 101 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಡಾ. ಮೊಹಮ್ಮದ್ ಹುಸೇನ್ ಮುಲ್ಲಾ (ಪ್ರಥಮ) ಟಾಪರ್, ಡಾ. ಲಕ್ಷಿತಾ ಜೈನ್ (ದ್ವಿತೀಯ), ಡಾ. ರಫಿಯಾ ಖಾಸದರ (ತೃತೀಯ) ಸ್ಥಾನ ಪಡೆದರು. ಫಾರ್ಮ್ಯಾಕಲಜಿಯಲ್ಲಿ ಡಾ. ನಿಮರಾ ಅಬಿದ್ ಅಫ್ಜಲ್ 10ನೇ ರ‍್ಯಾಂಕ್ ಪಡೆದಿದ್ದಾರೆ.

ತಲ್ಹಾ ಪ್ರಾರ್ಥಿಸಿದರು. ಮೆಡಿಕಲ್ ಡೀನ್ ಡಾ. ಸಿದ್ದೇಶ ಸಿರವಾರ ಸ್ವಾಗತಿಸಿದರು. ಸಂಶೋಧನಾ ವಿಭಾಗದ ಡೀನ್ ಡಾ. ರಾಜಶ್ರೀ ಪಾಲಾಡದಿ ಪರಿಚಯಿಸಿದರು. ಕೆಬಿಎನ್ ಆಸ್ಪತ್ರೆಯ ಅಧೀಕ್ಷಕ ಡಾ. ಸಿದ್ಧಲಿಂಗ ಚೆಂಗಟಿ ವಂದಿಸಿದರು. ಡಾ. ಇರ್ಫಾನ್ ಅಲಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕೆಬಿಎನ್ ವಿವಿಯ ಉಪಕುಲಪತಿ ಪ್ರೊ. ಅಲಿ ರಜಾ ಮೂಸ್ವಿ, ಡಾ. ಬಷೀರ್, ಎಂಜಿನಿಯರಿಂಗ್ ಡೀನ್ ಪ್ರೊ. ಅಜಾಂ, ಡಾ. ಗುರುರಾಜ್, ವೈದ್ಯಕೀಯ ನಿಕಾಯದ ಎಲ್ಲ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಎಲ್ಲ ವಿದ್ಯಾರ್ಥಿಗಳು, ಪದವಿ ಪಡೆದ ವಿದ್ಯಾರ್ಥಿಗಳ ಪಾಲಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.