ADVERTISEMENT

‘ನೇಮಕಾತಿ ತಡೆಗೆ ಕಾನೂನಿನಲ್ಲಿ ಅವಕಾಶವಿಲ್ಲ’

ಜಿಲ್ಲೆಯ ಬಿಜೆಪಿ ನಾಯಕರ ವರ್ತನೆ ಬಗ್ಗೆ ಡಾ.ಶರಣಪ್ರಕಾಶ ಪಾಟೀಲ ಕಿಡಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 15:45 IST
Last Updated 11 ಜುಲೈ 2020, 15:45 IST
ಡಾ.ಶರಣಪ್ರಕಾಶ ಪಾಟೀಲ
ಡಾ.ಶರಣಪ್ರಕಾಶ ಪಾಟೀಲ   

ಕಲಬುರ್ಗಿ: ‘ಆರ್ಥಿಕ ಸಂಕಷ್ಟ ಸರಿದೂಗಿಸಲು ಕಲ್ಯಾಣ ಕರ್ನಾಟಕ ನೇಮಕಾತಿ ಪ್ರಕ್ರಿಯೆಗಳನ್ನು ತಡೆ ಹಿಡಿಯುವಂತೆ ಆದೇಶ ಹೊರಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೂ, ರಾಜ್ಯ ಬಿಜೆಪಿ ಸರ್ಕಾರ ಈ ಭಾಗದ ಜನರ ಕಣ್ಣಿಗೆ ಮಣ್ಣೆರೆಚುತ್ತಿದೆ. ಮಲತಾಯಿ ಧೋರಣೆ ತಾಳುವ ಮೂಲಕ ಭಾವನಾತ್ಮಕವಾಗಿ ಘಾಸಿಗೊಳಿಸಿದೆ’ ಎಂದು ಕಾಂಗ್ರೆಸ್‌ ಮುಖಂಡ ಡಾ.ಶರಣಪ್ರಕಾಶ ಪಾಟೀಲ ದೂರಿದ್ದಾರೆ.

‘ಆರ್ಥಿಕ ಇಲಾಖೆ ಬೇಕಾಬಿಟ್ಟಿ ನಿರ್ಬಂಧ ಹೇರುವುದಕ್ಕೆ ಅವಕಾಶ ಇಲ್ಲ. ಅಲ್ಲದೇ, ಈ ಭಾಗದ ಅಭಿವೃದ್ಧಿಗೆ ಸಂವಿಧಾನ ಬದ್ಧವಾಗಿ ನಿಯಮಗಳನ್ನು ರೂಪಿಸಿ, ಕಾನೂನು ಪ್ರಕಾರ ಅವಕಾಶ ಕಲ್ಪಿಸಲಾಗಿದೆ. ವೃಂದ ಹಾಗೂ ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿ ಮಾಡುವ ಸಂದರ್ಭದಲ್ಲಿ ಆರ್ಥಿಕ ಇಲಾಖೆಯ ಸಹಮತಿ ಪಡೆಯುವುದು ಅಗತ್ಯವೇ ಇಲ್ಲ. ಇದು ಆದೇಶದಲ್ಲೂ ಇದ್ದು, ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ವೇಳೆ ನಾನೇ ಈ ಆದೇಶ ಹೊರಡಿಸಿದ್ದೇನೆ. ಹಾಗಾಗಿ, 371ಜೆ ಸೇರಿದಂತೆ ಈ ಭಾಗದ ನೇಮಕಾತಿಗಳಿಗೆ ಆರ್ಥಿಕ ಇಲಾಖೆ ಅನುಮೋದನೆ ಬೇಕಿಲ್ಲ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

‘ಕೋವಿಡ್ ನೆಪವೊಡ್ಡಿ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದ್ದರೂ ಬಿಜೆಪಿ ಶಾಸಕರು, ಸಂಸದರು ಚಕಾರವೆ ಎತ್ತುತ್ತಿಲ್ಲ. ಅವರೆಲ್ಲ ಎಲ್ಲಿ ಹೋಗಿದ್ದಾರೆ? ಬೆಂಗಳೂರಿನಲ್ಲಿ ಅಡಗಿ ಕುಳಿತಿದ್ದಾರೆಯೇ? ಕೂಡಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಆರ್ಥಿಕ ಇಲಾಖೆಯ ಮೇಲೆ ಒತ್ತಡ ಹೇರಿ, ತಡೆ ಆದೇಶ ಹಿಂಪಡೆಯುವಂತೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಈ ಭಾಗದ 30 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ. 371 (ಜೆ) ಅನುಕೂಲವನ್ನು ಪೂರ್ಣವಾಗಿ ಬಳಸಿಕೊಂಡು ಎಲ್ಲ ಕೆಲಸ ಮಾಡಿದ್ದೇವೆ. ಆ ಸಂದರ್ಭದಲ್ಲಲಿ ರಾಜ್ಯಪಾಲರು ‘ಕರ್ನಾಟಕ ಸಾರ್ವಜನಿಕ ಉದ್ಯೋಗ ಆದೇಶ– 2013’ ಹೊರಡಿಸಿದ್ದು, ಆ ಆದೇಶವನ್ನು ಬಿಜೆಪಿ ಮುಖಂಡರು ಓದಬೇಕು. ಕನಿಷ್ಠ ಕಾನೂನು ಜ್ಞಾನವೂ ಇಲ್ಲದೇ, ಜನರ ಕಣ್ಣಿಗೆ ಹಗಲೇ ಮಣ್ಣೆರೆಚುವ ಕೆಲಸ ಮಾಡುತ್ತಿದ್ದೀರಿ. ಈ ಭಾಗದ ಜನರ ಬಗ್ಗೆ ಕನಿಷ್ಠ ಕಾಳಜಿ ಇದ್ದರೆ ಕೂಡಲೇ ಆದೇಶ ಹಿಂದಕ್ಕೆ ಪಡೆಯುವಂತೆ ಮಾಡಿ’ ಎಂದೂ ಅವರು ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.