ADVERTISEMENT

ಕಲಬುರಗಿ ದಾಹ ತಣಿಸಲು ‘ಕೃಷ್ಣೆ’ಗೆ ಮೊರೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 19:30 IST
Last Updated 5 ಜೂನ್ 2022, 19:30 IST
ಯಾದಗಿರಿ ಜಿಲ್ಲೆಯ ಕೆಂಭಾವಿ ತಾಲ್ಲೂಕಿನ ನಾರಾಯಣಪುರ ಜಲಾಶಯ
ಯಾದಗಿರಿ ಜಿಲ್ಲೆಯ ಕೆಂಭಾವಿ ತಾಲ್ಲೂಕಿನ ನಾರಾಯಣಪುರ ಜಲಾಶಯ   

ಕಲಬುರಗಿ: ಪ್ರತಿ ಬೇಸಿಗೆಯಲ್ಲಿ ತಲೆ ದೋರುವ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನೀಗಿಸುವ ಆಶಾಭಾವ
ದಿಂದ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್‌ಗಳು ವಿಸ್ತೃತ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ನಗರ ಹಾಗೂ ತಾಲ್ಲೂಕು ಕೇಂದ್ರಗಳ ವ್ಯಾಪ್ತಿ ವಿಸ್ತರಣೆಯಾಗುತ್ತಿದೆ. ಪ್ರತಿಯೊಬ್ಬರಿಗೆ ನಿತ್ಯ ಕನಿಷ್ಠ 50 ಲೀಟರ್ ನೀರು ಪೂರೈಸಲು ಸ್ಥಳೀಯ ಜಲ ಮಂಡಳಿಗೆ ಕಷ್ಟವಾಗುತ್ತಿದೆ. ಭೀಮಾ ನದಿ, ಕೆರೆ, ಬಾವಿ, ಕೊಳವೆಬಾವಿಗಳಿಂದ ಸಿಗುವ ನೀರು ಸಾಕಾಗುತ್ತಿಲ್ಲ.

ಭೀಮಾ ನದಿಗೆ ಅಲ್ಲಲ್ಲಿ ಚೆಕ್‌ ಡ್ಯಾಮ್ ನಿರ್ಮಿಸಿದ್ದರಿಂದ ಬೇಸಿಗೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಲಭ್ಯವಾಗುತ್ತಿಲ್ಲ. ಎಗ್ಗಿಲ್ಲದ ಕೊರೆದ ಕೊಳವೆ ಬಾವಿಗಳು ಅಂತರ್ಜಲವನ್ನು ಬರಿದು ಮಾಡಿವೆ. ಕೆರೆ ಕಟ್ಟೆಗಳು ಹೂಳು ತುಂಬಿ ಅತಿಕ್ರಮಣದಿಂದ ಸಂಗ್ರಹ ಸಾಮರ್ಥ್ಯ ಕಳೆದುಕೊಂಡಿವೆ. ಜಲಜೀವನ ಮಿಷನ್‌ನಡಿ ಪ್ರತಿ ಮನೆಗೆ ನಲ್ಲಿ ಸಂಪರ್ಕಿಸಿ, ನಿರಂತರ ನೀರು ಪೂರೈಸಲು ಜಲ ಮೂಲಗಳು ಸಿಗುತ್ತಿಲ್ಲ. ಅನಿವಾರ್ಯವಾಗಿ ಎಂಜಿನಿಯರ್‌ಗಳು ಕೃಷ್ಣೆಯತ್ತ ದೃಷ್ಟಿ ಹಾಯಿಸಿದ್ದಾರೆ.

ADVERTISEMENT

180 ಕಿ.ಮೀ. ದೂರದ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರದ ಬಸವಸಾಗರ ಅಣೆ
ಕಟ್ಟೆಯಿಂದ ನೀರನ್ನು ತಂದು ಕಲಬುರಗಿ ನಗರ, ಜೇವರ್ಗಿ, ಅಫಜಲಪುರ, ಆಳಂದ ಪಟ್ಟಣ ಮತ್ತು ಗ್ರಾಮಗಳಿಗೆ ಪೂರೈಸುವ ಬೃಹತ್ ಯೋಜನೆ ರೂಪಿಸಲಾಗಿದೆ.

‘33 ಟಿಎಂಸಿ ಅಡಿ ಸಾಮರ್ಥ್ಯದ ಬಸವ ಸಾಗರ ಜಲಾಶಯದಲ್ಲಿ 2 ರಿಂದ 3 ಟಿಎಂಸಿ ಅಡಿ ನೀರನ್ನು ಕುಡಿಯುವ ಕೆರೆಗಳ ಭರ್ತಿಗೆ ಇರಿಸಿಕೊಳ್ಳಲಾಗುತ್ತದೆ. ಉಳಿದ ನೀರನ್ನು ಕೃಷಿಗಾಗಿ ಕಾಲುವೆಗಳಿಗೆ ಹರಿಸುತ್ತೇವೆ. ಕಲಬುರಗಿ ಜಿಲ್ಲೆಗೆ ನೀರು ಒದಗಿಸುವ ಯೋಜನೆ ಜಾರಿಯಾಗಿ ಸರ್ಕಾರದಿಂದ ಆದೇಶ ಬಂದರೆ ಅದರಂತೆ ನೀರು ಸಂಗ್ರಹಿಸಿ ಹರಿಸುತ್ತೇವೆ’ ಎಂದು ನಾರಾಯಣಪುರ ಜಲಾಶಯ ಉಪ ವಿಭಾಗದ ಸಹಾಯಕ ಎಂಜಿನಿಯರ್ ವಿಜಯಕುಮಾರ್ ತಿಳಿಸಿದರು.

‘ಮುಲ್ಲಾಮಾರಿ ಮೇಲ್ದಂಡೆ ಯೋಜನೆಯ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಲಭ್ಯವಿದೆ. ನೀರಾ
ವರಿ ಇಲ್ಲಾಖೆ ಅದನ್ನು ಸರಿಯಾಗಿ ಬಳಸುತ್ತಿಲ್ಲ. ಈ ಜಲಾಶಯದಲ್ಲಿನ ನೀರನ್ನು ಸೇಡಂ, ಚಿತ್ತಾಪುರ ಮತ್ತು ಚಿಂಚೋಳಿ ಪಟ್ಟಣಗಳು ಹಾಗೂ ಗ್ರಾಮಗಳಿಗೂ ಪೂರೈಸಬಹುದು. 60 ಎಂಎಲ್‌ಡಿ ನೀರು ಲಭ್ಯವಾಗುವು
ದಿಂದ ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾಧಿಸುವುದಿಲ್ಲ. ಈ ಬಗ್ಗೆಯೂ ವಿಸ್ತೃತ ಯೋಜನಾ ವರದಿಯನ್ನು ಶೀಘ್ರವೇ ಸಲ್ಲಿಸಲಿದ್ದೇವೆ’ ಎಂದರು.

‘₹2,150 ಕೋಟಿ ವೆಚ್ಚ’

‘ಬಸವ ಸಾಗರ ಜಲಾಶಯದ ವ್ಯಾಪ್ತಿಯ ಇಂಡಲಗಿ ಗ್ರಾಮದ ಬಳಿ 50 ಅಡಿ ಎತ್ತರದ ಗುಡ್ಡಗಳಿವೆ. ಜಲಾಶಯದ ನೀರನ್ನು ಗುಡ್ಡದ ಮೇಲೆ ಲಿಫ್ಟ್‌ ಮಾಡಲಾಗುವುದು. ಗುರುತ್ವಾಕರ್ಷಣೆ ಮೂಲಕ ಕೆಳಮುಖವಾಗಿ ನೀರು ಹರಿಯುವಂತೆ ಪೈಪ್‌ಲೈನ್‌ ಅಳವಡಿಸಿ ಜೇವರ್ಗಿವರೆಗೆ ನೀರು ತರುತ್ತೇವೆ. ಅಲ್ಲಿಂದ ಕಲಬುರಗಿ ನಗರ, ಅಫಜಲಪುರ ಮತ್ತು ಆಳಂದ ತಾಲ್ಲೂಕುಗಳಿಗೆ ನೀರು ಪೂರೈಸುವ ಯೋಜನೆಯಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮಹಮ್ಮದ್ ಅಜೀಜುದ್ದೀನ್‌ ಅಹಮದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉದ್ದೇಶಿತ ಯೋಜನೆ ಜಾರಿಗೆ ಅಂದಾಜು ₹2,150 ಕೋಟಿ ಬೇಕು. ಈ ಯೋಜನೆಯಡಿ ಕಲಬುರಗಿ ನಗರಕ್ಕೂ ಕುಡಿಯುವ ನೀರು ಪೂರೈಸಬಹುದು. ನೆರೆಯ ಮಹಾರಾಷ್ಟ್ರದಿಂದ ನೀರು ತರಿಸಿಕೊಳ್ಳುವುದು ತಪ್ಪುತ್ತದೆ. ವಿಸ್ತೃತ ಯೋಜನಾ ವರದಿಯನ್ನು ಶೀಘ್ರವೇ ಸರ್ಕಾರದ ಉನ್ನತಾಧಿಕಾರಿಗಳಿಗೆ ಕಳುಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.