ADVERTISEMENT

ಕಟ್ಟಡಗಳ ಎತ್ತರ, ವಿಸ್ತೀರ್ಣದ ಡ್ರೋನ್ ಸರ್ವೆ: ರಹೀಂ ಖಾನ್

​ಪ್ರಜಾವಾಣಿ ವಾರ್ತೆ
Published 28 ಮೇ 2025, 13:09 IST
Last Updated 28 ಮೇ 2025, 13:09 IST
ರಹೀಂ ಖಾನ್
ರಹೀಂ ಖಾನ್   

ಕಲಬುರಗಿ: ‘ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಮನೆ ಮತ್ತು ವಾಣಿಜ್ಯ ಕಟ್ಟಡಗಳ ವಿಸ್ತೀರ್ಣ ಮತ್ತು ಎತ್ತರವನ್ನು ಪತ್ತೆಹಚ್ಚಿ ಅವುಗಳಿಗೆ ತೆರಿಗೆ ವಿಧಿಸಲು ಡ್ರೋನ್‌ಗಳ ಮೂಲಕ ಸರ್ವೆ ಮಾಡಲಾಗುವುದು’ ಎಂದು ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಒಂದು ಮಹಡಿಯಾಗಿದ್ದ ಕಟ್ಟಡಗಳು ಈಗ ಮೂರು ಮಹಡಿಯಾಗಿವೆ. 40 ಅಡಿ ವಿಸ್ತೀರ್ಣದಲ್ಲಿದ್ದ ಕಟ್ಟಡಗಳು 60 ಅಡಿಗೆ ವಿಸ್ತರಿಸಿಕೊಂಡಿವೆ. ಆದರೆ, ಮಾಲೀಕರು 20 ವರ್ಷಗಳ ಹಿಂದಿನ ತೆರಿಗೆಯನ್ನು ಕಟ್ಟುತ್ತಿದ್ದಾರೆ. ನಮ್ಮವರೂ ಪಾವತಿಸಿದಷ್ಟು ತೆರಿಗೆ ಕಟ್ಟಿಸಿಕೊಂಡು ಸುಮ್ಮನೆ ಕುಳಿತಿದ್ದಾರೆ’ ಎಂದರು.

‘ಪ್ರತಿಯೊಂದು ಸ್ಥಳೀಯ ಸಂಸ್ಥೆಯಲ್ಲಿ ಎಷ್ಟು ಕಟ್ಟಡಗಳಿವೆ? ಅವುಗಳ ಎತ್ತರ ಮತ್ತು ವಿಸ್ತೀರ್ಣ ಎಷ್ಟಿದೆ ಎಂಬುದನ್ನು ಡ್ರೋನ್ ಸರ್ವೆ ಮೂಲಕ ಪತ್ತೆಹಚ್ಚಲಾಗುವುದು. ಜತೆಗೆ ಆ ಕಟ್ಟಡಗಳಿಂದ ಎಷ್ಟು ತೆರಿಗೆ ಬರಬೇಕಿದೆ ಎಂಬುದನ್ನು ತಿಳಿದುಕೊಂಡು ವರದಿ ಸಿದ್ಧಪಡಿಸಲಾಗುವುದು. ಮೂರು ತಿಂಗಳಲ್ಲಿ ಡ್ರೋನ್ ಸರ್ವೆ ಆರಂಭವಾಗಲಿದ್ದು, ಯೋಜನೆ ಪೂರ್ಣವಾಗಲು ಸಮಯ ಹಿಡಿಯುತ್ತದೆ’ ಎಂದು ಹೇಳಿದರು.

ADVERTISEMENT

‘ಪೌರಕಾರ್ಮಿಕರ ಕಾಯಂ ಕುರಿತು ಎರಡು ಬಾರಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಉಮಾದೇವಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಕಾಯಂ ಮಾಡಬಾರದು ಎಂದು ತಿಳಿಸಿದ್ದಾಗಿ ಕಡತವನ್ನು ವಾಪಸ್ ಕಳುಹಿಸಿದ್ದಾರೆ. ಹೀಗಾಗಿ, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆದು ಪರಿಹಾರ ಕಂಡುಕೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.