ADVERTISEMENT

ಇಂಧನ ದರ ಏರಿಕೆ: ಆಟೊಗೆ ಹಗ್ಗ ಕಟ್ಟಿ ಎಳೆದು ಆಕ್ರೋಶ

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 4:06 IST
Last Updated 1 ಅಕ್ಟೋಬರ್ 2021, 4:06 IST
ಕಲಬುರ್ಗಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಇಂಧನ ಬೆಲೆ ಏರಿಕೆ ಖಂಡಿಸಿ ಆಟೊಗೆ ಹಗ್ಗ ಕಟ್ಟಿ ಎಳೆದು ಪ್ರತಿಭಟನೆ ನಡೆಸಲಾಯಿತು
ಕಲಬುರ್ಗಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಇಂಧನ ಬೆಲೆ ಏರಿಕೆ ಖಂಡಿಸಿ ಆಟೊಗೆ ಹಗ್ಗ ಕಟ್ಟಿ ಎಳೆದು ಪ್ರತಿಭಟನೆ ನಡೆಸಲಾಯಿತು   

ಕಲಬುರ್ಗಿ: ಇಂಧನ ದರ ಏರಿಕೆ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಡಾ.ಡಿ.ಜಿ.ಸಾಗರ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಆಟೊಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು.‌

ನಗರದ ಜಗತ್ ವೃತ್ತದಲ್ಲಿ ಸೇರಿದ ಸಮಿತಿಯ ಸದಸ್ಯರು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.‌

ಸಮಿತಿಯ ರಾಜ್ಯ ಘಟಕದ ಸಂಚಾಲಕ ಡಾ.ಡಿ.ಜಿ.ಸಾಗರ ಮಾತನಾಡಿ, ‘ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ 77 ಡಾಲರ್ ಇದ್ದರೂ ಪೆಟ್ರೋಲ್, ಡೀಸೆಲ್, ಸೀಮೆ ಎಣ್ಣೆ ದರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ’ ಎಂದರು.

ADVERTISEMENT

‘ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 100 ಡಾಲರ್‌ ಇದ್ದಾಗಲೂ ದೇಶದಲ್ಲಿ ಪೆಟ್ರೋಲ್ ದರ ₹72 ಇತ್ತು. ಆಗ ಬಿಜೆಪಿ ಪ್ರತಿಭಟಿಸಿತ್ತು. ಈಗ ಕಚ್ಚಾ ತೈಲದ ದರ ಕಡಿಮೆ ಇದ್ದರೂ ಪೆಟ್ರೋಲ್ ದರ ₹100 ದಾಟಿದೆ’ ಎಂದರು.

‘ಕೋವಿಡ್‌ನಿಂದ ದೇಶದ ಜನ ಸಂಕಷ್ಟದಲ್ಲಿದ್ದಾರೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಬರಬೇಕಿದ್ದ ಸರ್ಕಾರ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಹೊರಟಿದೆ. ಮೂರು ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದು ರೈತ ವಿರೋಧಿ ನೀತಿಯಾಗಿದೆ. ಕೇಂದ್ರ ಸರ್ಕಾರ ಇದೆಲ್ಲವನ್ನೂ ಹಿಂಪಡೆಯಬೇಕು’ ಎಂದರು.

ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಸುರೇಶ ಹಾದಿಮನಿ, ಸಂಘಟನಾ ಸಂಚಾಲಕ ಕೃಷ್ಣಪ್ಪ ಕರಣಿಕ್, ಉಮೇಶ ನರೋಣಾ, ರೇವಣಸಿದ್ದ ಜಾಲಿ, ಖಜಾಂಚಿ ಮಲ್ಲಣ್ನ ಕೊಡಚಿ, ತಾಲ್ಲೂಕು ಘಟಕದ ಸಂಚಾಲಕರಾದ
ಮಹಾದೇವ ತರನಳ್ಳಿ, ರವಿ ಬಡಿಗೇರ, ಸುಭಾಷ ಡಾಂಗೆ, ಶಿವರಶರಣ ಮಾರಡಗಿ, ದೇವಿಂದ್ರ ಹೆಗಡೆ ಮುಂತಾದವರು ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.