ADVERTISEMENT

ಗಡಿಕೇಶ್ವಾರ: ಮತ್ತೆ ಎರಡು ಬಾರಿ ಕಂಪಿಸಿದ ಭೂಮಿ, ಭಯದಿಂದ ಗ್ರಾಮ ತೊರೆದ ಜನ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 5:04 IST
Last Updated 12 ಅಕ್ಟೋಬರ್ 2021, 5:04 IST
ಊರು ತೊರೆಯುತ್ತಿರುವ ಗ್ರಾಮಸ್ಥರು
ಊರು ತೊರೆಯುತ್ತಿರುವ ಗ್ರಾಮಸ್ಥರು   

ಚಿಂಚೋಳಿ (ಕಲಬುರಗಿ ಜಿಲ್ಲೆ): ಚಿಂಚೋಳಿ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಬೆಳಿಗ್ಗೆ ಮತ್ತೆ ಎರಡುಬಾರಿ ಭೂಕಂಪನವಾಗಿವೆ. ಇದೂ ಸೇರಿದಂತೆ ಒಂದು ವಾರದಲ್ಲಿ ಏಳು ಬಾರಿ ಭೂಮಿ ಕಂಪಿಸಿದೆ. ಪರಿಣಾಮ, ಗಡಿಕೇಶ್ವಾರ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ.

ಮಂಗಳವಾರ 8.07ಕ್ಕೆ ಹಾಗೂ ಬೆಳಿಗ್ಗೆ 8.18 ಗಂಟೆಗೆ ಭೂಮಿ ಅಲುಗಾಡಿದ್ದು ಜನರ ಗಮನಕ್ಕೆ ಬಂತು. ಮೊದಲ ಬಾರಿಗೆ ಕಂಪನವು ರಿಕ್ಟರ್‌ ಮಾಪಕದಲ್ಲಿ 3.5 ಹಾಗೂ ಎರಡನೇ ಬಾರಿಗೆ 2.8ರಷ್ಟು ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತುಗಳ ಉಸ್ತುವಾರಿ ಕೋಶದ ಶರಣಶಿರಸಗಿ ಕೇಂದ್ರವು ಖಚಿತಪಡಿಸಿದೆ.

ಸೋಮವಾರ (ಅ. 11) ಕೂಡ ಬೆಳಿಗ್ಗೆ 6.31ಕ್ಕೆ ಹಾಗೂ ರಾತ್ರಿ 9.55ಕ್ಕೆ ಜಿಲ್ಲೆಯ ಬಹುಪಾಲು ಕಡೆ ಭೂಮಿ ಕಂಪಿಸಿತ್ತು. ಬೆಳಿಗ್ಗೆ 6.31ಕ್ಕೆ ತೆಲಂಗಾಣದ ಮನಿಯಾರಪಲ್ಲಿ ಎಂಬಲ್ಲಿ ರಿಕ್ಟರ್‌ ಮಾಪಕದಲ್ಲಿ 2.5 ರಷ್ಟು ದಾಖಲಾಗಿತ್ತು. ಆದರೆ, ರಾತ್ರಿ 9.55ರಿಂದ 56ರವರೆಗಿನ ಅವಧಿಯಲ್ಲಿ 4.0 ರಿಕ್ಟರ್‌ನಷ್ಟು ಕಂಪನವಾಗಿದೆ.

ADVERTISEMENT

ಇದರಿಂದಾಗಿ ಗಡಿಕೇಶ್ವಾರ, ರುದ್ನೂರು, ರಾಯಕೋಡ, ಭೂತ್ಪೂರ, ಕುಪನೂರ, ಸುಲೇಪೇಟ, ಹೊಡೆಬೀರನಹಳ್ಳಿ, ಮರನಾಳ್, ಭಂಟನಳ್ಳಿ, ಬೆನಕನಳ್ಳಿ, ಕೊರವಿ, ಕೊರವಿ ತಾಂಡಾ, ಕುಡಳ್ಳಿ, ನಾವದಗಿ, ಹೊಸಳ್ಳಿ (ಎಚ್), ಹಲಚೇರಾ, ತೇಗಲತಿಪ್ಪಿ ಸೇರಿದಂತೆ ಹಲವು ಗ್ರಾಮಗಳ ಜನ ರಾತ್ರಿಯಿಡೀ ರಸ್ತೆಗಳಲ್ಲೇ ಮಲಗಿ ಕಳೆದರು.

ಮಂಗಳವಾರ ಬೆಳಿಗ್ಗೆ ಎದ್ದು ತಮ್ಮ ದೈನಂದಿನ ಕೆಲಸಗಳಿಗೆ ತೊಡಗಬೇಕು ಎನ್ನುವಷ್ಟರಲ್ಲಿ ಗ್ರಾಮದ ಹೊರಗಿನಿಂದ ಭಾರಿ ಶಬ್ದಕೇಳಿಬಂತು. ಅದರ ಬೆನ್ನಲ್ಲೇ ಭೂಮಿ ತೂಗಿದ ಅನುಭವವಾಯಿತು ಎಂದು ಸ್ಥಳಕ್ಕೆ ಭೇಟಿ ನೀಡಿದ ‘ಪ್ರಜಾವಾಣಿ’ ಪ್ರತಿನಿಧಿಗೆ ಗ್ರಾಮಸ್ಥರು ಅನುಭವ ಹಂಚಿಕೊಂಡರು.

‘ಅಡುಗೆ ಮಾಡಲು ನಮಗೆ ಮನೆಯ ಒಳಗಡೆ ಹೋಗಲು ಹೆದರಿಕೆ ಆಗುತ್ತಿದೆ. ಇದರಿಂದ ನಾನು ಕಳೆದ ನಾಲ್ಕು ದಿನಗಳಿಂದ ಸರಿಯಾಗಿ ಅಡುಗೆಯನ್ನೇ ಮಾಡಿಲ್ಲ. ಮನೆಯ ಆಚೆಗೆ ಬಯಲಿನಲ್ಲಿಯೇ ಗುಂಡುಕಲ್ಲು ಇಟ್ಟುಕೊಂಡು ಒಂದಷ್ಟು ಅಕ್ಕಿ, ಬೇಳೆ ಬೇಯಿಸಿಕೊಳ್ಳುತ್ತಿದ್ದೇನೆ’ ಎಂದು ಗಡಿಕೇಶ್ವಾರದ ಗೃಹಿಣಿ ಕಮಲಾಬಾಯಿ ಪಸಾರ ತಮ್ಮ ನೋವು ಹಂಚಿಕೊಂಡರು.

ಅರ್ಧದಷ್ಟು ಊರು ಖಾಲಿ: ಪದೇಪದೇ ಸಂಭವಿಸುತ್ತಿರುವ ಭೂಕಂಪನದ ಕಾರಣ ಗಡಿಕೇಶ್ವಾರ ಹಾಗೂ ಸುತ್ತಲಿನ ಗ್ರಾಮಗಳ ಜನ ಊರು ತೊರೆಯುತ್ತಿದ್ದಾರೆ. ಒಂದು ವಾರದಲ್ಲಿ ಅರ್ಧದಷ್ಟು ಜನ ತಮ್ಮ ಮನೆಗಳನ್ನು ಬೀಗ ಹಾಕಿಕೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ.

ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಕಂಪನದ ಪರಿಣಾಮ ತೀವ್ರವಾಗಿದ್ದರಿಂದ, ಊರು ಬಿಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಮಂಗಳವಾರವೂ ತಮ್ಮ ಜೀವನೋಪಾಯದ ಸಾಮಗ್ರಿಗಳನ್ನು ಕಟ್ಟಿಕೊಂಡು ಬಸ್‌, ಟ್ರ್ಯಾಕ್ಟರ್‌, ಟೆಂಪೊ, ಬೈಕುಗಳಲ್ಲಿ ಹತ್ತಿಕೊಂಡು ಜನ ಊರಿನಿಂದ ಹೊರನಡೆದರು.

ಯಾವತ್ತು ಎಷ್ಟು ಕಂಪನ?: ಅಕ್ಟೋಬರ್‌ 7ರಂದು ರಾತ್ರಿ 12.44ರ ಸುಮಾರಿಗೆ ಚಿಂಚೋಳಿ, ಕಾಳಗಿಯ ಕೆಲವು ಕಡೆ ಭೂಮಿ ಕಂಪಿಸಿತ್ತು. ಇದು ರಿಕ್ಟರ್‌ ಮಾಪನದಲ್ಲಿ 2.6 ರಷ್ಟು ದಾಖಲಾಗಿತ್ತು. ಅ. 8ರಂದು ತಡರಾತ್ರಿ ಬೆಳಿಗ್ಗೆ 5.37ಕ್ಕೆ (3.4 ರಿಕ್ಟರ್) ಗಡಿಕೇಶ್ವಾರ, ತೇಗಲತಿಪ್ಪಿ, ಹಲಚೇರಾ ಮೊದಲಾದ ಕಡೆ ಅನುಭವಕ್ಕೆ ಬಂತು. ಅ. 9ರಂದು ನಸುಕಿನ 5.37ಕ್ಕೆ ಹಾಗೂ ಅ. 10ರಂದು ಬೆಳಿಗ್ಗೆ 6.05 ಗಂಟೆಗೆ ಕೂಡ ಕೆಲವು ಹಳ್ಳಿಗಳಲ್ಲಿ ಭೂಮಿ ಕಂಪಿಸಿತು.‌ ಭಾನುವಾರ ಬೆಳಿಗ್ಗೆ ಸಂಭವಿಸಿದ ಭೂಕಂಪನವು ರಿಕ್ಟರ್ ಮಾಪಕದಲ್ಲಿ 3.0 ರಷ್ಟು ತೀವ್ರತೆ ದಾಖಲಾಗಿದೆ. ಇದರ ಕೇಂದ್ರ ಬಿಂದು ಕಾಳಗಿ ತಾಲ್ಲೂಕಿನ ಕೊಡದೂರಿನಿಂದ ಈಶಾನ್ಯ ದಿಕ್ಕಿನಲ್ಲಿ 2.1 ಕಿ.ಮೀ ಅಂತರದಲ್ಲಿತ್ತು’ ಎಂದು ಭೂಗರ್ಭಶಾಸ್ತ್ರಜ್ಞರು ಖಚಿತಪಡಿಸಿದ್ದಾರೆ.‌ ಸೋಮವಾರ (ಅ. 11) ಬೆಳಿಗ್ಗೆ 6.31ಕ್ಕೆ 2.5 ಹಾಗೂ ರಾತ್ರಿ 9.55ರ ಹೊತ್ತಿಗೆ 4.0 ಕಂಪನವಾಗಿದ್ದು ರಿಕ್ಟರ್‌ನಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.