ADVERTISEMENT

ಭೂಕಂಪನ ಪೀಡಿತ ಗಡಿಕೇಶ್ವಾರಕ್ಕೆ ಜಿಲ್ಲಾ ನ್ಯಾಯಾಧೀಶ ಕೆ.ಸುಬ್ರಹ್ಮಣ್ಯ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 12:01 IST
Last Updated 20 ಅಕ್ಟೋಬರ್ 2021, 12:01 IST
ಗಡಿಕೇಶ್ವಾರ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಸುಬ್ರಹ್ಮಣ್ಯ
ಗಡಿಕೇಶ್ವಾರ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಸುಬ್ರಹ್ಮಣ್ಯ   

ಚಿಂಚೋಳಿ: ತಾಲ್ಲೂಕಿನ ಭೂಕಂಪನ ಪೀಡಿತ ಗಡಿಕೇಶ್ವಾರ ಗ್ರಾಮಕ್ಕೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಸುಬ್ರಹ್ಮಣ್ಯ ಬುಧವಾರ ಭೇಟಿ ನೀಡಿ ಜನರ ಅಹವಾಲು ಆಲಿಸಿದರು. ನಿರಂತರ ಭೂಮಿ ಕಂಪನದಿಂದ ಉಂಟಾಗಿರುವ ಸಮಸ್ಯೆ ಹಾಗೂ ಜನರು ಊರು ತೊರೆದಿರುವ ಕುರಿತು ಅವರು ಮಾಹಿತಿ ಪಡೆದರು.

ಗ್ರಾಮದಲ್ಲಿ ಸಂಚರಿಸಿ ಭೂಕಂಪನದಿಂದ ಭಾಗಶಃ ಉರುಳಿದ ಮನೆಯ ಗೋಡೆಗಳು ಮತ್ತು ಮನೆಯ ಗೋಡೆ ಬಿರುಕು ಬಿಟ್ಟಿರುವುದನ್ನು ವೀಕ್ಷಿಸಿದರು. ಗ್ರಾಮದ‌ ನೂರಕ್ಕೂ ಅಧಿಕ‌ ಮನೆಗಳಿಗೆ ತೆರಳಿ ಗೋಡೆಗಳು ಸೀಳಿ ನಿಂತಿರುವುದು ವೀಕ್ಷಿಸಿ ಇಲ್ಲಿನ ಮನೆ ನಿಮಾರ್ಣದ ವಿನ್ಯಾಸದ ಬಗೆಗೆ ಮಾಹಿತಿ ಪಡೆದರು. ಮನೆಗೆ ಹಾಸಿದ್ದ ಮೇಲ್ಛಾವಣಿಯ ಕಲ್ಲುಗಳ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು. ಸ್ಥಳೀಯ ಶ್ರೀಶೈಲ‌ ಮಲ್ಲಿಕಾರ್ಜುನ‌ ದೇವಾಲಯಕ್ಕೆ ಭೇಟಿ ನೀಡಿ ಶಿವಲಿಂಗದ ದರ್ಶನ ಪಡೆದುಕೊಂಡು ಜನರ ಕುಂದು ಕೊರತೆ ಆಲಿಸಿದರು.

‘ನಮಗೆ ಶೆಡ್ ನಿರ್ಮಿಸಿಕೊಡಬೇಕು. ಶಿಥಿಲ ಕಟ್ಟಡ ತೆರವುಗೊಳಿಸಿ ಭೂಕಂಪ ನಿರೋಧಕ‌ ಮನೆಗಳನ್ನು ನಿರ್ಮಿಸಬೇಕು. ತಾತ್ಕಾಲಿಕವಾಗಿ‌ ಮನೆಗೊಂಡು ಶೆಡ್ ನಿರ್ಮಿಸಿಕೊಡಬೇಕು’ ಎಂದು ನಾಗರಿಕ ಹೋರಾಟ ಸಮಿತಿ ಮುಖಂಡ ಪ್ರಕಾಶ ರಂಗನೂರ, ಸಂತೋಷ ಬಳಿ ಅವರು ಮನವಿ ಮಾಡಿದರು.

ADVERTISEMENT

‘ತಹಶೀಲ್ದಾರರಿಗೂ ಸಮಗ್ರ ವರದಿ‌ ನೀಡಲು ಹೇಳಿದ್ದೇನೆ. ಅವರು 2 ದಿನಗಳಲ್ಲಿ ವರದಿ ನೀಡಲಿದ್ದಾರೆ. ಅವರ ಜತೆಗೆ ತಮ್ಮ‌ ಬೇಡಿಕೆಯ ಮನವಿ ಮತ್ತು ನಾನು ಗ್ರಾಮದಲ್ಲಿ ಖುದ್ದು ಓಡಾಡಿ ಗಮನಿಸಿದ್ದು ಒಳಗೊಂಡು ಸರ್ಕಾರದಿಂದ ಆಗಬೇಕಿರುವ ಕೆಲಸಗಳ ಬಗ್ಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರಗಳಿಗೆ ವರದಿ ಮಾಡುತ್ತೇನೆ’ ಎಂದರು.

‘ಕಲಬುರಗಿಗೆ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಾಲಯದ ನ್ಯಾಯಮೂರ್ತಿಗಳು ಆಗಮಿಸುತ್ತಿದ್ದು, ಅವರಿಗೂ ನಿಮ್ಮ ಸಮಸ್ಯೆಗಳನ್ನು ವಿವರಿಸುತ್ತೇನೆ’ ಎಂದು ನ್ಯಾಯಾಧೀಶ ಸುಬ್ರಹ್ಮಣ್ಯ ಭರವಸೆ ನೀಡಿದರು.

ಜಿಲ್ಲಾ ಆಡಳಿತದ ಅಗತ್ಯ ವಸ್ತುಗಳ ಕಿಟ್‌ಗಳನ್ನು ನ್ಯಾಯಾಧೀಶರು ವಿತರಿಸಿದರು. ಪ್ರಧಾನ ನ್ಯಾಯಿಕ ದಂಡಾಧಿಕಾರಿ ಬಾಳಪ್ಪ ಜರಗು ಮತ್ತು ಚಿಂಚೋಳಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ವಿ. ರವಿಕುಮಾರ, ತಹಶೀಲ್ದಾರ ಅಂಜುಮ್ ತಬಸ್ಸುಮ್, ಸರ್ಕಲ್ ಪೊಲೀಸ್‌ ಇನ್‌ಸ್ಪೆಕ್ಟರ್ ಜಗದೀಶ, ಮುಖಂಡರಾದ ವೀರೇಶ, ಮಂಗಳಮೂರ್ತಿ, ಜಗದೀಶ, ವಿಶ್ವನಾಥ ಬಳಿ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.