ADVERTISEMENT

ಡಿಜಿಟಲ್ ವ್ಯವಹಾರದಿಂದ ಆರ್ಥಿಕ ಸಬಲೀಕರಣ ನನಸು: ಡಾ.ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 10:18 IST
Last Updated 12 ಫೆಬ್ರುವರಿ 2022, 10:18 IST
   

ಕಲಬುರಗಿ: ಡಿಜಿಟಲ್ ವ್ಯವಹಾರ ಸ್ವರೂಪವು ಆರ್ಥಿಕ ಸಬಲೀಕರಣಕ್ಕೆ ದೊಡ್ಡ ಶಕ್ತಿಯಾಗಿದ್ದು, ಯಾವುದೇ ದೇಶದೊಂದಿಗೆ ವ್ಯಾಪಾರ- ವಹಿವಾಟು ತುಂಬಾ ಸುಲಭವಾಗಿದೆ. ಜತೆಗೆ ಡಿಜಿಟಲ್ ಮಾರುಕಟ್ಟೆ ತರಬೇತಿಯಿಂದ ನೂರಕ್ಕೆ ನೂರರಷ್ಟು ಉದ್ಯೋಗ ಖಾತ್ರಿಯೂ ಸಿಗುತ್ತದೆ ಎಂದು ಐಟಿ, ಬಿಟಿ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಇಲ್ಲಿನ ಪಿಡಿಎ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ 'ಉದ್ಯೋಗ ಮೇಳ'ವನ್ನು ಉದ್ಘಾಟಿಸಿದ ನಂತರ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ಪದವಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರುಕಟ್ಟೆ ತರಬೇತಿ ನೀಡುವ ಉದ್ದೇಶದಿಂದ `ನಾಂದಿ’ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ರಾಜ್ಯದೆಲ್ಲೆಡೆ ತರಬೇತಿ ಪ್ರಗತಿಯಲ್ಲಿದೆ. 31 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಯುವಜನರು ಉದ್ಯಮಗಳ ಅಗತ್ಯಕ್ಕೆ ತಕ್ಕ ಗುಣಮಟ್ಟದ ಶಿಕ್ಷಣ ಮತ್ತು ಕೌಶಲ ಎರಡನ್ನೂ ತಮ್ಮದನ್ನಾಗಿ ಮಾಡಿಕೊಳ್ಳಬೇಕು. ಇದಕ್ಕಾಗಿ ಸರ್ಕಾರವು ಜಾಗತಿಕ ಮಟ್ಟದ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದ್ದು, ನಾನಾ ಬಗೆಯ ತರಬೇತಿಗಳನ್ನು ಉಚಿತವಾಗಿ ಒದಗಿಸುತ್ತಿದೆ. ಇದರಿಂದಾಗಿ ಇನ್ನು ಕೆಲವೇ ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆ ಸಂಪೂರ್ಣ ನಿವಾರಣೆಯಾಗಲಿದೆ ಎಂದು ಹೇಳಿದರು.

ADVERTISEMENT

ಕಲ್ಯಾಣ ಕರ್ನಾಟಕ ಭಾಗವು ಕರಕುಶಲ ಮತ್ತು ಸಾಂಪ್ರದಾಯಿಕ ವೃತ್ತಿಗಳ ಪ್ರದೇಶವಾಗಿದ್ದು, ಇವುಗಳ ಸಂರಕ್ಷಣೆ ಮತ್ತು ಮಾರುಕಟ್ಟೆ ಸೃಷ್ಟಿಗೆ ಕೂಡ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಕಸುಬುದಾರರಿಗೆ ಸೂಕ್ತ ಅವಕಾಶಗಳು ಸಿಗಲಿದ್ದು, ಆರ್ಥಿಕ ಸಬಲೀಕರಣ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಈ ಭಾಗದಲ್ಲಿರುವ ಕೊಪ್ಪಳ ಮತ್ತು ಯಾದಗಿರಿ ಜಿಟಿಟಿಸಿಗಳಲ್ಲಿ ಯುವಜನರಿಗೆ ಇಂಗ್ಲಿಷ್ ಭಾಷಾ ಪ್ರಯೋಗಾಲಯಗಳನ್ನು ತೆರೆಯಲಾಗಿದ್ದು, ಸದ್ಯದಲ್ಲೇ ಈ ಕೇಂದ್ರಗಳಲ್ಲಿ ತಲಾ 200 ಜನರಿಗೆ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಅಗತ್ಯವಾದ ಸಂವಹನ ತರಬೇತಿ ಕೊಡಲಾಗುವುದು. ಇದಕ್ಕೆ ಬೇಕಾದ ಸೂಕ್ತ ವ್ಯವಸ್ಥೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್: ಸ್ಥಳೀಯರಿಗೆ ಉದ್ಯೋಗದ ತರಬೇತಿಗೆ ಏಕಸ್ ಒಪ್ಪಂದ

ಕೊಪ್ಪಳದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಆಟಿಕೆ ತಯಾರಿಕೆ ವಿಶೇಷ ಆರ್ಥಿಕ ವಲಯಕ್ಕೆ ಪೂರಕವಾಗಿ ಸ್ಥಳೀಯರಿಗೆ ಉದ್ಯೋಗ ತರಬೇತಿ ನೀಡಲು ಎ.ಇ.ಕ್ಯೂ.ಯು.ಎಸ್. ಇನ್ ಫ್ರಾ ಸಂಸ್ಥೆಯೊಂದಿಗೆ ಶನಿವಾರ ಕಲಬುರಗಿಯಲ್ಲಿ ಒಪ್ಪಂದಕ್ಕೆ ಸಹಿ ಮಾಡಿಕೊಂಡಿದೆ.

ಸಚಿವ ಡಾ.ಅಶ್ವತ್ಥನಾರಾಯಣ ಸಿ.ಎನ್. ಅವರ ಸಮಕ್ಷಮದಲ್ಲಿ ಎ.ಇ.ಕ್ಯೂ.ಯು.ಎಸ್. ನಿರ್ದೇಶಕ ಡಾ.ಬಸವರಾಜ ಸುಗಂಧಿ ಮತ್ತು ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಅವರುಗಳು ಪರಸ್ಪರ ಒಪ್ಪಂದಕ್ಕೆ ಸಹಿ ಮಾಡಿಕೊಂಡು ಎಂಒಯು ಬದಲಾಯಿಸಿಕೊಂಡರು.

25 ಸಾವಿರ ಜನರಿಗೆ ಉದ್ಯೋಗ ಒದಗಿಸುವ ಕೊಪ್ಪಳ ಟಾಯ್ಸ್ ಕ್ಲಸ್ಟರ್ ಸ್ಥಾಪನೆಯಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 1 ಲಕ್ಷ ಉದ್ಯೋಗ ಸೃಷ್ಠಿಯಾಗಲಿದೆ. ಎ.ಇ.ಕ್ಯೂ.ಯು.ಎಸ್. ಇನ್ಫ್ರಾ ಸಂಸ್ಥೆಯೂ ಪ್ಲಾಸ್ಟಿಕ್ ಮೋಲ್ಡಿಂಗ್, ಹಾಗೂ ಇತರೆ ವೃತ್ತಿಗಳಿಗೆ ತರಬೇತಿ ನೀಡಲಿದೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಮತ್ತು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಮತ್ತು ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಸಂಸದ ಡಾ. ಉಮೇಶ ಜಾಧವ, ವಿಧಾನ ಪರಿಷತ್ ಶಾಸಕರಾದ ಸುನೀಲ ವಲ್ಯಾಪೂರೆ, ಬಿ.ಜಿ.ಪಾಟೀಲ, ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ್, ಜಿ.ಪಂ. ಸಿಇಒ
ಡಾ.ದಿಲೀಷ್ ಸಸಿ, ಎಚ್.ಕೆ.ಇ. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಸಿ. ಬಿಲಗುಂದಿ, ಎಚ್ಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.