ADVERTISEMENT

ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದ ದೊಡ್ಡಪ್ಪ ಅಪ್ಪ:ಡಾ.ಮಾಲತಿ ಪಟ್ಟಣಶೆಟ್ಟಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2018, 13:08 IST
Last Updated 18 ಸೆಪ್ಟೆಂಬರ್ 2018, 13:08 IST
‘ಪೂಜ್ಯ ಲಿಂ.ದೊಡ್ಡಪ್ಪ ಅಪ್ಪ ಅವರ 35ನೇ ಪುಣ್ಯಸ್ಮರಣೋತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು
‘ಪೂಜ್ಯ ಲಿಂ.ದೊಡ್ಡಪ್ಪ ಅಪ್ಪ ಅವರ 35ನೇ ಪುಣ್ಯಸ್ಮರಣೋತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು   

ಕಲಬುರ್ಗಿ: ‘ಪೂಜ್ಯ ದೊಡ್ಡಪ್ಪ ಅಪ್ಪ ಅವರು ಅನ್ನದಾಸೋಹ ಜೊತೆಗೆ ಜ್ಞಾನದಾಸೋಹಕ್ಕೂ ಅಡಿಪಾಯ ಹಾಕಿದರು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದರು’ ಎಂದು ಹಿರಿಯ ಸಾಹಿತಿ ಡಾ.ಮಾಲತಿ ಪಟ್ಟಣಶೆಟ್ಟಿ ಶ್ಲಾಘಿಸಿದರು.

ನಗರದ ಮಾತೋಶ್ರೀ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಪೂಜ್ಯ ಲಿಂ.ದೊಡ್ಡಪ್ಪ ಅಪ್ಪ ಅವರ 35ನೇ ಪುಣ್ಯಸ್ಮರಣೋತ್ಸವ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

‘ಕಾಯಕ ಮತ್ತು ದಾಸೋಹ ಜೀವಿಯಾಗಿದ್ದ ದೊಡ್ಡಪ್ಪ ಅವರ ವ್ಯಕ್ತಿತ್ವ ಶ್ರೇಷ್ಠವಾಗಿತ್ತು. ಅವರು ಯಾವುದೇ ಜಾತಿ, ಮತ, ಪಂಥ ಎನ್ನದೇ ಎಲ್ಲರನ್ನೂ ಸಮಾನವಾಗಿ ಕಂಡವರು. ಹೆಸರಿಗೆ ತಕ್ಕಂತೆ ಅವರ ಮನಸ್ಸು ವಿಶಾಲವಾಗಿತ್ತು. ಸಕಲ ಜೀವಿಗಳಿಗೆ ಹಿತವನ್ನೇಬಯಸುತ್ತಿದ್ದರು’ ಎಂದರು.

ADVERTISEMENT

‘ಈ ಭಾಗದ ಹೆಣ್ಣಮಕ್ಕಳು ಶಿಕ್ಷಣದಲ್ಲಿ ಸಾಧನೆ ಮಾಡಿರುವುದರ ಹಿಂದೆ ಪೂಜ್ಯ ದೊಡ್ಡಪ್ಪ ಅಪ್ಪ ಅವರ ನಿಸ್ವಾರ್ಥ ಸೇವೆ ಇದೆ. ಅಂಕ ಗಳಿಕೆಗೆ ಸೀಮಿತವಾಗದೆ ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಜ್ಞಾನ ಸಂಪಾದಿಸಿಕೊಳ್ಳಬೇಕು’ ಎಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ಅತಿಥಿಯಾಗಿದ್ದ ನಂದಿನಿ ಎನ್.ನಿಷ್ಠಿ ಅವರು, ‘ಮಹಾದಾಸೋಹಿ ಶರಣಬಸವೇಶ್ವರರು ಬೇಡಿದ್ದನ್ನು ಕೊಡುವ ಕಾಮಧೇನು ಕಲ್ಪವೃಕ್ಷವಾಗಿದ್ದಾರೆ. ಅವರಂತೆ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಎಲ್ಲ ಜಾತಿ ಜನಾಂಗದವರನ್ನು ಪ್ರೀತಿಯಿಂದ ಕಂಡು ಅವರಿಗೆ ದಾಸೋಹ ಮಾಡುತ್ತಿದ್ದರು’ ಎಂದರು.

ದೊಡ್ಡಪ್ಪ ಅಪ್ಪ ಮತ್ತು ಗೋದುತಾಯಿ ಅವರೊಂದಿಗೆ ಕಳೆದ ಕೆಲವು ಸಂದರ್ಭಗಳನ್ನು ವಿದ್ಯಾರ್ಥಿನಿಯರೊಂದಿಗೆ ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ, ‘ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಹೆಣ್ಣುಮಕ್ಕಳಿಗಾಗಿ ಅನೇಕ ಶಾಲಾ ಕಾಲೇಜುಗಳು ಆರಂಭಿಸಿದರು. ಪ್ರಸ್ತುತ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಅವರು ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ’ ಎಂದು ಹೇಳಿದರು.

ಪ್ರೊ.ಶಾಂತಲಾ ನಿಷ್ಠಿ ಮಾತನಾಡಿದರು. ಪ್ರೊ.ಸಾವಿತ್ರಿ ಜಂಬಲದಿನ್ನಿ, ಪ್ರೊ.ರೇವಯ್ಯ ವಸ್ತ್ರದಮಠ ವೇದಿಕೆಯಲ್ಲಿದ್ದರು.

ಡಾ.ಸಿದ್ದಮ್ಮ ಗುಡೇದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಪುಟ್ಟಮಣಿ ದೇವಿದಾಸ ಸ್ವಾಗತಿಸಿದರು. ಪ್ರೊ. ಜಾನಕಿ ಹೊಸೂರ ವಂದಿಸಿದರು. ಡಾ.ಸೀಮಾ ಪಾಟೀಲ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.