ADVERTISEMENT

ಅಕ್ಷರದ ಜತೆಗೆ ಒಳಿತು, ಕೆಡುಕಿನ ಅರಿವಿರಲಿ: ನ್ಯಾಯಮೂರ್ತಿ ವಿ. ಶ್ರೀಶಾನಂದ

ಸರ್ವಜ್ಞ ಕಾಲೇಜಿನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 5:53 IST
Last Updated 16 ಜುಲೈ 2025, 5:53 IST
ಕಲಬುರಗಿಯ ಸರ್ವಜ್ಞ ಕಾಲೇಜಿನಲ್ಲಿ ಮಂಗಳವಾರ ನಡೆದ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಹೈಕೋರ್ಟ್‌ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಉದ್ಘಾಟಿಸಿದರು
ಕಲಬುರಗಿಯ ಸರ್ವಜ್ಞ ಕಾಲೇಜಿನಲ್ಲಿ ಮಂಗಳವಾರ ನಡೆದ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಹೈಕೋರ್ಟ್‌ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಉದ್ಘಾಟಿಸಿದರು   

ಕಲಬುರಗಿ: ‘ಕೇವಲ ಅಕ್ಷರ ಜ್ಞಾನವಿದ್ದವರು ಸುಶಿಕ್ಷತರಲ್ಲ. ಅದರೊಂದಿಗೆ ಒಳ್ಳೆಯದು ಮತ್ತು ಕೆಟ್ಟದರ ಅರಿವಿರಬೇಕು’ ಎಂದು ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು.

ನಗರದ ಸರ್ವಜ್ಞ ಹಾಗೂ ಜಸ್ಟಿಸ್ ಶಿವರಾಜ ಪಾಟೀಲ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ನಡೆದ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಉತ್ತಮ ಅಂಶಗಳನ್ನು ಕಲಿಯಲು ಭಾಷಾ ಸಂಪತ್ತನ್ನು ಬೆಳೆಸಿಕೊಳ್ಳಬೇಕು. ಭಾಷೆಯ ಮಾಧ್ಯಮ ಮೂಲಕ ತಮ್ಮ ವಿಚಾರಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಕು. ಸದ್ವಿಚಾರಗಳು ಪ್ರಪಂಚದ ಯಾವ ಮೂಲೆಯಿಂದ ಬಂದರೂ ಅವುಗಳನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.

ADVERTISEMENT

‘ಒಳ್ಳೆಯದು ಕೆಟ್ಟದರ ಅರಿವು, ಗುರುಹಿರಿಯರ ಬಗ್ಗೆ ಗೌರವಭಾವ ಇರಬೇಕು. ಪ್ರಕೃತಿ, ಪ್ರಾಣಿ, ಪಕ್ಷಿ, ಎಲೆಗಳು ನಮಗೆ ಪಾಠ ಹೇಳುತ್ತವೆ. ಅದಕ್ಕಾಗಿ ನಮ್ಮ ಕಣ್ಣು, ಕಿವಿ ತೆರೆದಿರಬೇಕು. ಸರ್ವಜ್ಞ ಕನ್ನಡದ ಬಹುದೊಡ್ಡ ಜನಪರವಾದ ಸಾಹಿತಿ. ಮಕ್ಕಳು ಅವನಷ್ಟೇ ಜ್ಞಾನ, ಬುದ್ಧಿ ಪಡೆದು ಎತ್ತರಕ್ಕೆ ಬೆಳೆಯಬೇಕು’ ಎಂದು ಹೇಳಿದರು.

‘ಪಾಲಕರ ಮತ್ತು ಶಿಕ್ಷಕರ ಆಸೆಯಂತೆ ಉತ್ತಮ ರೀತಿಯಿಂದ ಸಾಧನೆ ಮಾಡಬೇಕು. ಕೆಟ್ಟ ಆಕರ್ಷಣೆಗೆ ಒಳಗಾಗದೆ ವಿದ್ಯೆಯನ್ನು ಅರ್ಥೈಸಿಕೊಂಡು, ಉತ್ತಮ ಅಂಕಗಳ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಣದಿಂದ ನಿಮ್ಮ ಜೀವನವನ್ನು ಉಜ್ವಲಗೊಳಿಸಿಕೊಂಡು, ದೇಶಭಕ್ತಿ ಮತ್ತು ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು. ಆದರೆ, ಇಂದಿನ ಕಾಲೇಜು ಶಿಕ್ಷಣದಲ್ಲಿ ಮೌಲ್ಯಗಳು ಮಾಯವಾಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

ಸಾಹಿತಿ ಸ್ವಾಮಿರಾವ್ ಕುಲಕರ್ಣಿ ಮಾತನಾಡಿ, ‘ನಾಡು, ದೇಶ, ಭಾಷೆಯ ಬಗ್ಗೆ ವಿಶಾಲ ಮನೋಭಾವನೆ ಇರಿಸಿಕೊಳ್ಳಬೇಕು. ಜೀವನದಲ್ಲಿ ಬರುವ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ ಆದರ್ಶ ವ್ಯಕ್ತಿಯಾಗಿ ಬಾಳಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನ್ಯಾಯಾಧೀಶ ಎಸ್. ಎಂ. ರಡ್ಡಿ ಮಾತನಾಡಿದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ (ಪಿಯು) ಸುರೇಶ ಬಿ. ಅಕ್ಕಣ್ಣ, ಮುಖ್ಯ ಶೈಕ್ಷಣಿಕ ನಿರ್ದೇಶಕರಾದ ಅಭಿಷೇಕ ಚನ್ನಾರಡ್ಡಿ, ಸಂಗೀತಾ ಅಭಿಷೇಕ ಪಾಟೀಲ, ಪ್ರಾಂಶುಪಾಲ ಪ್ರಶಾಂತ ಕುಲಕರ್ಣಿ, ಪ್ರಮುಖರಾದ ಆರ್. ಬಿ.ವಿನೂತಾ, ಪ್ರಭು ಗೌಡ ಸಿದ್ದಾರಡ್ಡಿ, ಕರುಣೇಶ ಹಿರೇಮಠ ಉಪಸ್ಥಿತರಿದ್ದರು.

ಪ್ರಿಯಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವಿದ್ಯಾವತಿ ಪಾಟೀಲ ಮತ್ತು ಚಂದ್ರಕಾಂತ ನಿರೂಪಿಸಿದರು. ಗುರುರಾಜ ಕುಲಕರ್ಣಿ ವಂದಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

‘ಇಷ್ಟವಾದುದ್ದನ್ನು ಓದಿ’

‘ವಿದ್ಯಾರ್ಥಿಗಳು ತಮಗೆ ಇಷ್ಟವಾದುದ್ದನ್ನು ಇಷ್ಟದಿಂದ ಓದಿ ಜ್ಞಾನ ಸಂಪಾದಿಸಿಕೊಳ್ಳಬೇಕು. ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಓದಿ ಅವರಂತೆ ಸಾಧಿಸಬೇಕು ಎಂಬ ಗುರಿ ಇರಿಸಿಕೊಳ್ಳಬೇಕು’ ಎಂದು ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು. ‘ಕಳೆದ ಸಮಯ ಮರಳಿ ಬರುವದಿಲ್ಲ. ಸಿಕ್ಕ ಸಮಯವನ್ನು ಸರಿಯಾದ ಕೆಲಸಕ್ಕೆ ಸದುಪಯೋಗ ಪಡಿಸಿಕೊಳ್ಳಬೇಕು. ಕಲ್ಯಾಣ ಕರ್ನಾಟಕ ಭಾಗದ ಮಕ್ಕಳು ಹೆಚ್ಚು ಅಂಕ ಗಳಿಸಿ ಮೆರಿಟ್‌ನಲ್ಲಿ ಸೀಟು ಪಡೆಯುವ ಆತ್ಮವಿಶ್ವಾಸ ಹೊಂದಬೇಕು’ ಎಂದರು.

ಸಮಯವನ್ನು ವ್ಯರ್ಥ ಮಾಡದೆ ಓದಿಗಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ದುಶ್ಚಟಗಳಿಗೆ ಒಳಗಾಗದೆ ಶರಣರ ಸಂತರ ದಾಸರ ಮಾರ್ಗದಲ್ಲಿ ನಡೆಯಬೇಕು
-ಪ್ರೊ. ಚನ್ನಾರಡ್ಡಿ ಪಾಟೀಲ ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.