
ಕಮಲಾಪುರ: ಕಳೆದ ಒಂದು ವಾರದಿಂದ ಮೊಟ್ಟೆ ದರ ಹೆಚ್ಚಳವಾಗಿದ್ದು, ಮಕ್ಕಳಲ್ಲಿರುವ ಅಪೌಷ್ಟಿಕತೆ ತಡೆಗಟ್ಟಲು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸರಬರಾಜು ಮಾಡುವ ಮುಖ್ಯಶಿಕ್ಷಕರಿಗೂ ಆರ್ಥಿಕ ಹೊರೆ ಹೆಚ್ಚಿದೆ.
ತಾಲ್ಲೂಕಿನಲ್ಲಿ 114 ಶಾಲೆಗಳ 9,011 ಮಕ್ಕಳಿಗೆ ಬಿಸಿಯೂಟ ವಿತರಣೆಯಾಗುತ್ತದೆ. ಕಮಲಾಪುರ ಪಟ್ಟಣದ ಸರ್ಕಾರಿ ಪ್ರೌಢ ಶಾಲೆ (ಬಾಲಕರ), ಸರ್ಕಾರಿ ಪ್ರೌಢ ಶಾಲೆ (ಬಾಲಕಿಯರ), ಚಾಮುಂಡೇಶ್ವರಿ ಪ್ರೌಢ ಶಾಲೆ, ಸೊಂತ ಉರ್ದು ಪ್ರೌಢ ಶಾಲೆಗೆ ಅದಮ್ಯ ಚೇತನ ಫೌಂಡೇಶನ ಬಿಸಿಯೂಟ ಪೂರೈಸುತ್ತದೆ. ಉಳಿದಕಡೆ ಶಾಲೆಗಳಲ್ಲೆ ತಯಾರಿಸಲಾಗುತ್ತದೆ.
ಅಜೀಂ ಪ್ರೇಮಜಿ ಫೌಂಡೇಶನ್ ವಾರದಲ್ಲಿ ನಾಲ್ಕು ದಿನ ಮೊಟ್ಟೆ ವಿತರಣೆ ಮಾಡುತ್ತದೆ. ಇನ್ನೆರಡು ದಿನ ರಾಜ್ಯ ಸರ್ಕಾರ ಅನುದಾನ ಒದಗಿಸುತ್ತದೆ. ಒಂದು ಮೊಟ್ಟೆಗೆ ₹6ರಂತೆ ದರ ನಿಗದಿ ಮಾಡಲಾಗಿದ್ದು, ತಿಂಗಳಾಂತ್ಯದಲ್ಲಿ ಮುಖ್ಯಶಿಕ್ಷಕರ ಖಾತೆಗೆ ಹಣ ಜಮೆಯಾಗುತ್ತದೆ. ಮಾರುಕಟ್ಟೆಯಲ್ಲಿ ಈ ಹಿಂದೆ ₹6 ಇದ್ದ ಮೊಟ್ಟೆ ದರ ₹2 ಹೆಚ್ಚಳವಾಗಿದ್ದು, ಒಂದು ವಾರದಿಂದ ₹8ಗೆ ಒಂದು ಮೊಟ್ಟೆ ಖರೀದಿಸಲಾಗುತ್ತಿದೆ.
‘ಕಮಲಾಪುರದಲ್ಲಿ ಖರೀದಿಸಿದರೆ ₹8, ಡೊಂಗರಗಾಂವ, ಕಾಳಮಂದರ್ಗಿ, ಗೊಬ್ಬರವಾಡಿ, ನೀಲಕೂಡ, ಹೊನ್ನಳ್ಳಿ ಸೇರಿ ಅನೇಕ ಹಳ್ಳಿ, ತಾಂಡಾಗಳು ಕಮಲಾಪುರದಿಂದ 25 ಕಿ.ಮೀ ದೂರದಲ್ಲಿವೆ. ಇಲ್ಲಿಗೆ ತಂದು ಕೊಡಲು ಇನ್ನು ಹೆಚ್ಚು ದರ ಕೇಳುತ್ತಿದ್ದಾರೆ. ಪ್ರತಿದಿನ ನೂರು, ಇನ್ನೂರು ನಮ್ಮ ಜೇಬಿನಿಂದ ಹಾಕುತ್ತಿದ್ದೇವೆ’ ಎನ್ನುತ್ತಾರೆ ಮುಖ್ಯಶಿಕ್ಷಕರೊಬ್ಬರು.
ಮೊಟ್ಟೆ ಕೊಂಡೊಯ್ಯುವುದು ಹರಸಾಹಸ:
ಕಮಲಾಪುರದಿಂದ ಬೇರೆ ಹಳ್ಳಿ ಹಾಗೂ ತಾಂಡಾಗಳಿಗೆ ಮೊಟ್ಟೆ ಕೊಂಡೊಯ್ಯುವುದು ಹರಸಾಹಸವಾಗಿದೆ. ಮಾರುಕಟ್ಟೆಯಲ್ಲಿ ಅಂಗಡಿಗಳು ಬೆಳಿಗ್ಗೆ 10ರ ನಂತರ ತೆರೆಯುತ್ತವೆ. ಮುಖ್ಯ ಶಿಕ್ಷಕರು ಬೆಳಿಗ್ಗೆ 9.45ಕ್ಕೆ ಶಾಲೆಯ ಪ್ರಾರ್ಥನೆಗೆ ಹಾಜರಾಗಬೇಕು. ಈ ಮೊಟ್ಟೆ ಕೊಂಡೊಯ್ಯುವುದಕ್ಕಾಗಿ ಪ್ರತಿದಿನ ಶಾಲೆಗೆ ಒಂದು ತಾಸು ತಡವಾಗಿ ಹೋಗಬೇಕಾದ ಅನಿವಾರ್ಯತೆ ಬಂದೊದಗಿದೆ.
ಬಹುತೇಕ ಕಡೆಗಳಲ್ಲಿ ವಯಸ್ಸಾದ ಮುಖ್ಯಶಿಕ್ಷಕರು, ಶಿಕ್ಷಕಿಯರೇ ಇದ್ದಾರೆ. ಈ ಮೊಟ್ಟೆಗಳನ್ನು ಕೊಂಡೊಯ್ಯುವುದು ಸರ್ಕಸ್ ಮಾಡಿದಂತಾಗುತ್ತಿದೆ. ಮುಖ್ಯ ಶಿಕ್ಷಕಿಯರಿಗಂತೂ ಮೊಟ್ಟೆ ಕೊಂಡೊಯ್ಯುವುದು ಎಲ್ಲಿಲ್ಲದ ತೊಂದರೆಯಾಗುತ್ತಿದೆ. ಒಂದು ವಾರ ಅಥವಾ ಎರಡ್ಮೂರು ದಿನಕ್ಕಾಗುವುಷ್ಟು ಕೊಂಡೊಯ್ಯಬೇಕೆಂದರೆ ಬೇಸಿಗೆ ಬಿಸಿಲು ಆರಂಭವಾಗಿದೆ. ಮೊಟ್ಟೆಗಳು ಬಹು ಬೇಗನೆ ಕೆಡುತ್ತವೆ.
ದರ ಹೆಚ್ಚಳವಾಗಿದ್ದರಿಂದ ಮೊಟ್ಟೆ ವಿತರಣೆ ಶಿಕ್ಷಕರಿಗೆ ಹೊರೆಯಾಗುತ್ತಿದೆ. ಪ್ರತಿ ಮೊಟ್ಟೆಗೆ ₹10 ನೀಡಬೇಕು ಇಲ್ಲವೆ ತಾವೇ ಮೊಟ್ಟೆ ವಿತರಿಸಬೇಕುಪರಮೇಶ್ವರ ಓಕಳಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ
ದೂರದ ಒಂದೆರಡೆ ಶಿಕ್ಷಕರಿರುವ ಶಾಲೆಗಳಿಗೆ ಮೊಟ್ಟೆ ಒಯ್ಯುವುದು ಶೈಕ್ಷಣಿಕ ಪ್ರಗತಿಗೆ ಸಮಸ್ಯೆಯಾಗುತ್ತಿದೆ ಎಂದು ಶಿಕ್ಷಕರು ದೂರುತ್ತಿದ್ದು ಮೇಲಧಿಕಾರಿಗೆ ವರದಿ ಸಲ್ಲಿಸಲಾಗುವುದುಶಾಂತಾ ಬಿರಾದಾರ ಬಿಆರ್‌ಸಿ
ಬಾಳೆ ಹಣ್ಣಿಗೂ ₹6 ಕೊಡುತ್ತೇವೆ. ಅದರಲ್ಲಿ ಉಳಿಕೆ ಹಣವನ್ನು ಮೊಟ್ಟೆಗೆ ಸರಿದೂಗಿಸಿಕೊಳ್ಳಬೇಕು. ಅನುದಾನ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದುಈಶ್ವರ ನೀರಡಗಿ ಅಕ್ಷರ ದಾಸೋಹ ಉಪ ನಿರ್ದೇಶಕ
ದತ್ತಾಂಶ ದಾಖಲೆ: ಅನುದಾನ ಸಮಸ್ಯೆ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ಮಕ್ಕಳು ಮೊಟ್ಟೆ ತಿಂದವರೆಷ್ಟು ಖರ್ಚು ಎಷ್ಟು? ಬಾಳೆಹಣ್ಣು ತಿಂದವರೆಷ್ಟು ಖರ್ಚೆಷ್ಟು? ಈ ಮಾಹಿತಿ ದತ್ತಾಂಶ ಪ್ರತಿ ದಿನ ಆನ್‌ಲೈನ್ ಮೂಲಕ ಮಧ್ಯಾಹ್ನ ಬಿಸಿಯೂಟ ಯೋಜನೆ ವೆಬ್‌ಸೈಟ್‌ಗೆ ದಾಖಲಿಸಬೇಕು. ಹಳ್ಳಿಗಳಲ್ಲಿ ನೆಟವರ್ಕ್ ಸಮಸ್ಯೆ ಇದೆ. ವೆಬ್‌ಸೈಟ್‌ಗೆ ಮಾಹಿತಿ ದತ್ತಾಂಶ ಸಲ್ಲಿಸುವುದು ಸಮಸ್ಯೆಯಾಗುತ್ತಿದೆ. ಇಷ್ಟಾದರೂ ಅಜೀಂ ಪ್ರೇಮಜಿ ಹಾಗೂ ಅಕ್ಷರ ದಾಸೋಹ ನೋಡಲ್ ಅಧಿಕಾರಿಗಳಿಗೆ ತಿಂಗಳಿಗೊಮ್ಮೆ ಕೈಬರಹದಲ್ಲಿ ಲೆಕ್ಕ ಕೊಡಬೇಕು. ಈ ಮೊಟ್ಟೆಗೆ ನಾಲ್ಕು ದಿನ ಅಜೀಂ ಪ್ರೇಮಜಿ ಫೌಂಡೇಶನ್ ಹಾಗೂ 2 ದಿನ ರಾಜ್ಯ ಸರ್ಕಾರ ಒದಗಿಸುತ್ತಿರುವುದರಿಂದ ಯಾವ ಅನುದಾನ ಜಮೆಯಾಗಿದೆ ಎಂಬುದು ಗೊತ್ತಾಗುತ್ತಿಲ್ಲ. ಕೆಲವು ಸಲ ಎರಡ್ಮೂರು ತಿಂಗಳವರಗೆ ಹಣ ಜಮೆಯಾಗುವುದಿಲ್ಲ. ಮಾನಸಿಕ ಮತ್ತು ಆರ್ಥಿಕ ಹೊರಯಾಗುತ್ತಿದೆ ಎಂಬುದು ಮುಖ್ಯ ಶಿಕ್ಷಕರ ಅಳಲು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.