ADVERTISEMENT

ಕಲಬುರಗಿ | ಒಂಟಿ ವೃದ್ಧೆ ಕೊಲೆ ಪ್ರಕರಣ: ಐವರ ಬಂಧನ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 5:27 IST
Last Updated 28 ಜುಲೈ 2025, 5:27 IST
ಮಾಡಬೂಳ ಠಾಣೆ ವ್ಯಾಪ್ತಿಯ ಪೇಠಶಿರೂರ ಗ್ರಾಮದ ವೃದ್ಧ ಮಹಿಳೆಯ ಕೊಲೆ ಪ್ರಕರಣದ ಆರೋಪಿಗಳಿಂದ ವಶಕ್ಕೆ ಪಡೆದ ಚಿನ್ನಾಭರಣ, ನಗದು ಜೊತೆಗೆ ಹಿರಿಯ ಪೊಲೀಸ್‌ ಅಧಿಕಾರಿಗಳು ಇದ್ದಾರೆ
ಮಾಡಬೂಳ ಠಾಣೆ ವ್ಯಾಪ್ತಿಯ ಪೇಠಶಿರೂರ ಗ್ರಾಮದ ವೃದ್ಧ ಮಹಿಳೆಯ ಕೊಲೆ ಪ್ರಕರಣದ ಆರೋಪಿಗಳಿಂದ ವಶಕ್ಕೆ ಪಡೆದ ಚಿನ್ನಾಭರಣ, ನಗದು ಜೊತೆಗೆ ಹಿರಿಯ ಪೊಲೀಸ್‌ ಅಧಿಕಾರಿಗಳು ಇದ್ದಾರೆ   

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಪೇಠಶಿರೂರ ಗ್ರಾಮದಲ್ಲಿ ನಡೆದಿದ್ದ ಒಂಟಿ ಮಹಿಳೆಯ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು,  ಅಪ್ರಾಪ್ತ ಬಾಲಕ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪೇಠಶಿರೂರ ಗ್ರಾಮದ ತಾನಾಜಿ ಮಾನಪ್ಪ ಬಂಡಗಾರ(25), ವಿಜಯಕುಮಾರ್ ರೇವಣಸಿದ್ದಪ್ಪ ಕರೆಗೋಳ(23), ಸಂಜೀವ್ ಕುಮಾರ್ ಹನುಮಂತರಾಯ ಕರೆಗೋಳ(25), ಅಲ್ದಿಹಾಳ ಗ್ರಾಮದ ಲಕ್ಷ್ಮಣ ಲಕ್ಷ್ಮೀಕಾಂತ್ ತಳವಾರ(24) ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟ 17 ವರ್ಷ ಬಾಲಕ ಬಂಧಿತ ಆರೋಪಿಗಳು. ಬಂಧಿತರಿಂದ ಕಿವಿಯೋಲೆ, ಮಾಟನಿ, ಗುಂಡಿನ ಸರ, ಮೂಗುತ್ತಿ, ಲಿಂಗದ ಕಾಯಿ, ₹5,500 ಜಪ್ತಿ ಮಾಡಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಹೇಳಿದರು.

‘ಪೇಠಶಿರೂರ ಗ್ರಾಮದಲ್ಲಿ ಜಗದೇವಿ ಲಾಳಿ (78) ಎಂಬುವರು ಒಂಟಿಯಾಗಿ ನೆಲೆಸಿದ್ದರು. ಆರೋಪಿಗಳು ವೃದ್ಧೆಯನ್ನು ಕೊಲೆ ಮಾಡಿ, ಚಿನ್ನಾಭರಣ, ನಗದು ಕದ್ದಿದ್ದರು. ಜೊತೆಗೆ ಇದೊಂದು ಸಹಜ ಸಾವು ಎಂಬಂತೆ ಬಿಂಬಿಸಿದ್ದರು’ ಎಂದು ತಿಳಿಸಿದರು.

ADVERTISEMENT

ಜಗದೇವಿ ಲಾಳಿ ಅವರು ಜುಲೈ10ರಂದು ಮೃತಪಟ್ಟಿದ್ದರು. ಅನುಮಾನಾಸ್ಪದ ಸಾವಿನ ದೂರು ದಾಖಲಾಗಿತ್ತು. ಸ್ಥಳ ಮಹಜರು ನಡೆಸಿದ್ದಾಗ ಅನುಮಾನ ಮೂಡಿತ್ತು. ಪ್ರಾಥಮಿಕ ತನಿಖೆ ನಡೆಸಿ, ತಾಂತ್ರಿಕ ಮಾಹಿತಿ ಕಲೆ ಹಾಕಿದಾಗ ಇದೊಂದು ಕೊಲೆ ಎಂಬ ಶಂಕೆಯಿಂದ ಕೊಲೆ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಯಿತು’ ಎಂದು ವಿವರಿಸಿದರು.

‘ಜಗದೇವಿ ಮನೆಯಲ್ಲಿ ಏಕಾಂಗಿಯಾಗಿ ಇರುತ್ತಿದ್ದರು. ಆರೋಪಿಗಳು ಮಧ್ಯಾಹ್ನದ ಹೊತ್ತಲ್ಲಿ ಮನೆಯನ್ನು ಹಿಂದಿನ ಬಾಗಿಲಿನಿಂದ ಹೊಕ್ಕಿದ್ದರು. ಮುಂಬಾಗಿಲಿನ ಒಳಕೊಂಡಿ ಹಾಕಿ, ಸೀರೆಯಿಂದ ಕುತ್ತಿಗೆಗೆ ಸುತ್ತಿ, ತಲೆಗೆ ರಾಡ್​ನಿಂದ ಹೊಡೆದಿದ್ದು, ಕೊಲೆ ಮಾಡಿದ್ದರು. ಅವರ ಕೊರಳಲ್ಲಿದ್ದ ಗುಂಡಿನ ಸರ, ಅಲಮಾರಿಯಲ್ಲಿದ್ದ ₹21 ಸಾವಿರ, ಲಿಂಗದ ಕಾಯಿ ಕದ್ದು, ಅಜ್ಜಿಯನ್ನು ಸಹಜ ಸ್ಥಿತಿಯಲ್ಲಿ ಮಲಗಿಸಿ ಹಿಂದಿನ ಬಾಗಿಲಿನಿಂದ ಪರಾರಿಯಾಗಿದ್ದರು. ಸ್ಥಳ ಮಹಜರು ನಡೆಸಿದಾಗ ಮೂಡಿದ ಅನುಮಾನದಿಂದ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಮಾಡಬೂಳ ಠಾಣೆಯಲ್ಲಿ ಕೊಲೆ ಪ್ರಕರಣ​ ದಾಖಲಿಸಿ, ಅತ್ಯಂತ ಕ್ಲಿಷ್ಟಕರ, ಮುಚ್ಚಿಹೋಗಬಹುದಾದ ಪ್ರಕರಣ ಭೇದಿಸುವಲ್ಲಿ ಪೊಲೀಸರ​ ತಂಡ ಯಶಸ್ವಿಯಾಗಿದೆ. ಅವರು 

ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಮಹೇಶ್ ಮೇಘಣ್ಣನವರ, ಡಿವೈಎಸ್ಪಿ ಶಂಕರಗೌಡ ಪಾಟೀಲ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ಗೌತಮ ಸೇರಿದಂತೆ ಇತರ ಪೊಲೀಸ್‌ ಅಧಿಕಾರಿಗಳು ಇದ್ದರು.

ಕೊಲೆ ತಪ್ಪಿಸಿದ ಪೊಲೀಸರು

ಕೊಲೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾದವರಲ್ಲಿ ವಿಜಯಕುಮಾರ ಎಂಬಾತ ಇನ್ನೊಬ್ಬ ಒಂಟಿ ಮಹಿಳೆ ಬಳಿ ₹30 ಸಾವಿರ ಸಾಲ ಪಡೆದಿದ್ದ. ಆ ಮಹಿಳೆಯನ್ನು ಕೊಲೆ ಮಾಡಿ ಅವರಲ್ಲಿದ್ದ ಹಣ ಹಣದ ಬಾಂಡ್​ ಬಂಗಾರದ ಆಭರಣ ದೋಚುವ ಸಂಚು ಹೊಂದಿದ್ದರು. ಇದೀಗ ಪೊಲೀಸರ ಮುನ್ನೆಚ್ಚರಿಕೆಯಿಂದ ಮಹಿಳೆ ಜೀವ ಉಳಿದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಹೇಳಿದರು.

ಜಗದೇವಿ ಅವರದ್ದು ಸಹಜ ಸಾವು ಎಂದು ಕೈಬಿಟ್ಟಿದ್ದರೆ ಅಪರಾಧಗಳು ಮುಂದುವರಿಯುತ್ತಿದ್ದವು. ಸಣ್ಣ–ಪುಟ್ಟ ಅಪರಾಧ ನಡೆದರೂ ಜನರು ಪೊಲೀಸರ ಗಮನಕ್ಕೆ ತಂದರೆ ಇಂಥ ಪ್ರಕರಣ ತಡೆಯಲು ಸಾಧ್ಯ
-ಅಡ್ಡೂರು ಶ್ರೀನಿವಾಸುಲು, ಎಸ್ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.